ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆ : ಶಶಿಕಲಾ v/s ಶಶಿಕಲಾ !

ಚೆನ್ನೈ,ಡಿ. 22 : ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ದಿವಂಗತ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರನ್ನು ಪ್ರತಿಷ್ಠಾಪಿಸಲು ಪಕ್ಷದ ಮುಖಂಡರು ಸಜ್ಜಾಗಿರುವಾಗಲೇ ಪಕ್ಷದಿಂದ ಉಚ್ಚಾಟಿತ ರಾಜ್ಯಸಭಾ ಸದಸ್ಯೆ ಶಶಿಕಲಾ ಪುಷ್ಪ ತಾನು ಆ ಹುದ್ದೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಈ ವಿಷಯದಲ್ಲಿ ಯಥಾಸ್ಥಿತಿ ಕಾಪಾಡಬೇಕೆಂದು ತಾನು ಮದ್ರಾಸ್ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಗೆ ಶುಕ್ರವಾರ ಯಾವ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ನೋಡಿಕೊಂಡು ನಾನು ಸ್ಪರ್ಧಿಸುವ ಬಗ್ಗೆ ತೀರ್ಮಾನಿಸುತ್ತೇನೆ. ಪಕ್ಷದ ಯಾವುದೇ ಪ್ರಾಥಮಿಕ ಸದಸ್ಯರಿಗೆ ಇರುವ ಹಕ್ಕಿನಂತೆ ನಾನು ಸ್ಪರ್ಧಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ತನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂಬುದನ್ನು ನಿರಾಕರಿಸುವ ಪುಷ್ಪಾ ತಾನು ಇನ್ನೂ ಪಕ್ಷದ ಸಂಸದೆಯಾಗಿದ್ದೇನೆ ಎಂದು ಹೇಳಿದ್ದಾರೆ. "ನನ್ನನ್ನು ಉಚ್ಚಾಟನೆ ಮಾಡಿದ್ದರೆ ಸೂಕ್ತ ತನಿಖೆಯ ಬಳಿಕ ತನಗೆ ಪತ್ರ ಬರಬೇಕಿತ್ತು. ರಾಜ್ಯಸಭೆಯ ದಾಖಲೆಗಳಲ್ಲೂ ನಾನು ಎಐಎಡಿಎಂಕೆ ಪಕ್ಷದ ಸಂಸದೆ ಎಂದೇ ಇದೆ " ಎಂದು ಪುಷ್ಪ ಹೇಳಿದ್ದಾರೆ. ಪುಷ್ಪ ಪ್ರಕಾರ ಪಕ್ಷದ 75% ಕಾರ್ಯಕರ್ತರು ಶಶಿಕಲಾ ನಟರಾಜನ್ ರನ್ನು ಪಕ್ಷದ ಮುಖ್ಯಸ್ಥೆಯಾಗಿ ಆಯ್ಕೆ ಮಾಡುವ ಬೇಡಿಕೆ ಬಗ್ಗೆ ಸಂತುಷ್ಟರಾಗಿಲ್ಲ.
"ಶಶಿಕಲಾ ನಟರಾಜನ್ ಪಕ್ಷದ ಪ್ರಾಥಮಿಕ ಸದಸ್ಯೆಯೇ ಅಲ್ಲ. ಆಕೆಯನ್ನು ಅಮ್ಮ ಪಕ್ಷದಿಂದ ಹೊರಹಾಕಿದ್ದಾರೆ. ಆಕೆಯ ಪತಿ ನಟರಾಜನ್ ಹಾಗು ಆತನ ಕುಟುಂಬ ಕಾರ್ಯಕರ್ತರ ಮೇಲೆ ಒತ್ತಡ ಹಾಕುತ್ತಿದೆ . ಇದು ಎಲ್ಲರಿಗೂ ಗೊತ್ತಿದೆ " ಎಂದು ಪುಷ್ಪ ಹೇಳಿದ್ದಾರೆ.







