ಮೂಢನಂಬಿಕೆ ನಿಷೇಧಿಸಲು ಸಿಎಂಗೆ ಮಾರ್ಗದರ್ಶನ ನೀಡುತ್ತೇವೆ : ಪೇಜಾವರ ಶ್ರೀ

ಉಡುಪಿ, ಡಿ.22: ಮೂಢನಂಬಿಕೆಗಳನ್ನು ನಿಷೇಧಿಸಲು ಮುಖ್ಯಮಂತ್ರಿಗಳಿಗೆ ಧೈರ್ಯ ಸಾಲದು. ಆ ಧೈರ್ಯ ನಮ್ಮ ಬಳಿ ಇದೆ. ಅವರು ನಮ್ಮ ಬಳಿ ಬಂದರೆ ಅವರಿಗೆ ಈ ಬಗ್ಗೆ ಮಾರ್ಗದರ್ಶನ ನೀಡುತ್ತೇವೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.
ಉಡುಪಿಯಲ್ಲಿ ಸವಿತಾ ಸಮಾಜದ ಪೀಠಕ್ಕೆ ಧರ್ಮಾಧಿಕಾರಿಯ ನೇಮಕದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಮೂಢನಂಬಿಕೆ ಕಾಯ್ದೆಗೆ ರಾಜ್ಯದ ಪಟ್ಟಭದ್ರರು ವಿರೋಧಿಸುತ್ತಿರುವ ಬಗ್ಗೆ ಸಿಎಂ ನೀಡಿದ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುತಿದ್ದರು.
ಮೂಢನಂಬಿಕೆಗಳನ್ನು ಯಾವ ರೀತಿ ಮಾಡಬಹುದು ಎಂದು ಹೇಳುವ ಧೈರ್ಯ ನನಗಿದೆ. ಸರಕಾರ ನನ್ನಲ್ಲಿಗೆ ಬರಲಿ. ಅವರಿಗೆ ನಾನು ಸಲಹೆ ನೀಡುತ್ತೇನೆ. ನಾನು ಬೆಂಬಲ ಕೊಟ್ಟು ಯಾರದೇ ವಿರೋಧ ಬಾರದಂತೆ ನಾನು ನೋಡಿಕೊಳ್ಳುತ್ತೇನೆ ಎಂದರು.
ನಿಷೇಧಿಸಲೇಬೇಕಾದ ಅನೇಕ ನಂಬಿಕೆಗಳು ಇಂದೂ ಇವೆ. ಸಮಾಜಕ್ಕೆ ಹಾನಿಕಾರಕವಾದ ನಂಬಿಕೆಗಳನ್ನು ತೆಗೆಯಲೇ ಬೇಕು. ಯಾವುದರಿಂದ ಹಾನಿ ಅದನ್ನು ತೆಗೆಯಲು ಬಾರದು. ಆದರೆ ಅದನ್ನು ನಿರ್ಧರಿಸುವವರು ಯಾರು ಎಂಬುದು ಪ್ರಶ್ನೆ. ಒಬ್ಬ್ಗೊಬ್ಬರಿಗೆ ಒಂದೊಂದು ಮೂಢನಂಬಿಕೆ ಎನಿಸಬಹುದು. ಕೆಲವರಿಗೆ ದೇವಸ್ಥಾನಕ್ಕೆ ಹೋಗುವುದು, ದೇವರ ಪೂಜೆ ಮಾಡುವುದು ಮೂಢನಂಬಿಕೆ ಎನಿಸಿಕೊಳ್ಳುತ್ತದೆ ಎಂದರು.
ನನ್ನೊಂದಿಗೆ ಸಮಾಲೋಚನೆ ನಡೆಸಲು ಅವರು ಸಿದ್ಧರಿಲ್ಲ. ನಾನು ಮೂಢನಂಬಿಕೆಗೆ ಬೆಂಬಲ ನೀಡುವವನು ಎಂದು ಕೆಲವರು ಭಾವಿಸಿದ್ದಾರೆ. ನನ್ನ ಬಗ್ಗೆ ರಾಜಕಾರಣಿಗಳಿಗೆ ತಪ್ಪುಕಲ್ಪನೆಗಳಿವೆ. ಮಡೆಸ್ನಾನದ ವಿಷಯದಲ್ಲೂ ನಾನು ಅದನ್ನು ಬೆಂಬಲಸಿದ್ದೇನೆ ಎಂದು ಹೇಳುತ್ತಾರೆ. ನಿಜವಾಗಿ ಮಡೆಸ್ನಾನ ವನ್ನು ನಾನು ವಿರೋಧಿಸಿದ್ದೇನೆ ಎಂದರು.
ಇದೇ ಕಾರಣದಿಂದ ಮುಖ್ಯಮಂತ್ರಿಗಳನ್ನು ಅದನ್ನು ಕೈಬಿಡಲು ಯೋಚಿಸುತಿದ್ದಾರಾ ಎಂದು ಪ್ರಶ್ನಿಸಿದಾಗ, ಅದನ್ನು ನಿಷೇಧಿಸಲು ಅವರಿಗೆ ಧೈರ್ಯ ಸಾಲದು ಎಂದರು. ಅದಕ್ಕಾಗಿ ಸಮಾಲೋಚನೆಗೆ ನಮ್ಮ ಬಳಿ ಬರಲಿ ಎಂದು ಸಲಹೆ ನೀಡಿದರು.







