ಆಳ್ವಾಸ್‌ನಲ್ಲಿ 2ನೇ ವರ್ಷದ ಕ್ರಿಸ್‌ಮಸ್ ಸಂಭ್ರಮಾಚರಣೆ
ಸಮಾನತೆಯ ಸಾರವೇ ಕ್ರಿಸ್‌ಮಸ್ : ಧರ್ಮಗುರು ಹೆನ್ರಿ ಡಿ'ಸೋಜ

ಮೂಡುಬಿದಿರೆ,ಡಿ.22 : ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ 2ನೇ ವರ್ಷದ ಕ್ರಿಸ್‌ಮಸ್ ಆಚರಣೆಯು ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಬುಧವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಕ್ಕಳ ಕಲರವದೊಂದಿಗೆ ಸಂಭ್ರಮದಿಂದ ನಡೆಯಿತು.
ಬಳ್ಳಾರಿಯ ಬಿಷಪ್ ರೈ. ರೆ. ಹೆನ್ರಿ ಡಿ’ಸೋಜ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂದೇಶ ನೀಡಿ, ಪ್ರತಿಯೊಂದು ಧರ್ಮದಲ್ಲಿಯೂ ಮಾನವೀಯತೆಯ ಸಂದೇಶವಿದೆ. ವೈಯಕ್ತಿಕ, ಸಾಮಾಜಿಕ ಗೌರವ, ಪ್ರೀತಿ, ಶಾಂತಿ ಸಮಾನತೆಯ ಸಾರವೇ ಕ್ರಿಸ್‌ಮಸ್. ಕೇವಲ ನಕ್ಷತ್ರ, ಗೂಡುದೀಪ, ಗೋದಲಿ ಕ್ರಿಸ್‌ಮಸ್ ವೃಕ್ಷ, ಹಾಡುಗಳು ಮಾತ್ರ ಹಬ್ಬದ ಸಡಗರವಲ್ಲ. ಜಾತಿ, ವರ್ಗ, ಭಾಷೆ, ದೇಶಗಳ ನಡುವಿನ ಅಂತರ ತೊಡೆದುಹಾಕಿ ವೈಯಕ್ತಿಕ ಘನತೆಯನ್ನು ಎತ್ತಿ ಹಿಡಿಯುವುದೇ ಕ್ರಿಸ್‌ಮಸ್‌ನ ಉದ್ದೇಶ. ಮಿದುಳಲ್ಲಿ ಕನಸುಗಳು, ಕಣ್ಣಲ್ಲಿ ಕಾಳಜಿ, ಮುಖದಲ್ಲಿ ಸಂತಸ, ಬಾಯಿಯಲ್ಲಿ ಸತ್ಯವಾಕ್ಯ, ಹೃದಯದಲ್ಲಿ ಪ್ರೀತಿ ಮತ್ತು ಅಂಗಾಂಗಗಳಲ್ಲಿ ಸೇವೆ ಇರಲಿ; ಯಾವುದೇ ವೃತ್ತಿಯನ್ನು ಅವಲಂಬಿಸಿದ್ದರೂ ಈ ಮಣ್ಣಿನ ಮಕ್ಕಳಾಗಿ, ಭೂಮಿಯನ್ನು ಹಸನಾಗಿಸಿ, ಬೆಳೆ ಬೆಳೆದು ಮಂದಿಯ ಹಸಿವನ್ನು ನೀಗಿಸುವ ಕಾಯಕಕ್ಕೆ ಆದ್ಯತೆ ನೀಡುವ ಗುಣ ನಮ್ಮದಾಗಲಿ’ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಆಳ್ವಾಸ್‌ನಲ್ಲಿ ಎಲ್ಲಾ ಮತಧರ್ಮಗಳ ಹಬ್ಬ ಆಚರಣೆ ನಡೆಯುತ್ತ ಬಂದಿವೆ. ಹಬ್ಬಗಳನ್ನು ಮೂಲತತ್ವ ಸಾಮರಸ್ಯದೊಂದಿಗೆ ಆಚರಿಸಿದಾಗ ಅರ್ಥಪೂರ್ಣವೆನಿಸುತ್ತದೆ. ಹಬ್ಬಗಳ ಆಚರಣೆಯ ಸಂಭ್ರಮವನ್ನು ಸುಡುಮದ್ದು ಪ್ರದರ್ಶನ, ಕುಡಿತ, ಮೋಜಿಗಾಗಿ ಎಷ್ಟು ಮೊತ್ತ ವಿನಿಯೋಗವಾಯಿತು ಎಂಬ ಲೆಕ್ಕಾಚಾರ ಮೂಲಕ ವೈಭವೀಕರಿಸುವುದಲ್ಲ; ಸಾಮರಸ್ಯದ ಸಂದೇಶ ಹಬ್ಬಗಳ ಹೇಗೆ ಪಸರಿಸಿದೆ ಎಂಬುದು ಮುಖ್ಯವಾಗಬೇಕು’ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಧರ್ಮಗುರುಗಳಾದ ಎಫ್. ಎಕ್ಸ್. ಗೋಮ್ಸ್, ಬೇಸಿಲ್ ವಾಸ್ ಅಲಂಗಾರು, ರಾಕೇಶ್ ಮಥಾಯಸ್ ಸವೇರಾಪುರ, ಎವ್ಜಿನ್ ಡಿ’ಸೋಜ, ಪಾ. ಅಬೆ ಅಬ್ರಹಾಂ, ಪಾ. ಸುಧೀರ್ ಪ್ರಕಾಶ್ ಬೆಳುವಾಯಿ, ಮಾಂಡ್ ಸೋಬಾಣ್‌ನ ಎರಿಕ್ ಒಝೆರಿಯೋ ಪಾಲ್ಗೊಂಡಿದ್ದರು. ಕ್ರಿಸ್‌ಮಸ್ ಪ್ರಯುಕ್ತ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮಾಂಡ್ ಸೊಬಾಣ್ ಬಳಗದವರಿಂದ ಹಾಡು, ಪ್ರಹಸನ, ಆಳ್ವಾಸ್ 300 ವಿದ್ಯಾರ್ಥಿಗಳಿಂದ ವಿವಿಧ ಭಾಷೆಗಳಲ್ಲಿ ಕ್ರಿಸ್‌ಮಸ್ ಗೀತೆ, 300 ವಿದ್ಯಾರ್ಥಿಗಳು ಕ್ಯಾಂಡಲ್‌ದೀಪ ಹಿಡಿದು ಮೆರವಣಿಗೆಯಲ್ಲಿ ಅತಿಥಿಗಳೊಂದಿಗೆ ಹೆಜ್ಜೆ ಹಾಕಿದರು.
ಆಳ್ವಾಸ್ ದಾಖಲಾತಿ ವಿಭಾಗದ ಪ್ರಬಂಧಕ ಎಲ್.ಜೆ. ಫೆರ್ನಾಂಡಿಸ್ ಸ್ವಾಗತಿಸಿದರು. ಶ್ರೀದೇವಿ ಬಹುಮಾನಿತರ ವಿವರ ನೀಡಿದರು. ರಾಜೇಶ್ ನಿರೂಪಿಸಿದರು. ಆಳ್ವಾಸ್ ಕಾಲೇಜು ಪ್ರಾಚಾರ್ಯ ಡಾ. ಕುರಿಯನ್ ವಂದಿಸಿದರು.
ಯೇಸುಕ್ರಿಸ್ತರು ಪ್ರತಿಪಾದಿಸಿದ ಪ್ರೀತಿ, ಮಾನವೀಯತೆ, ಸೇವಾ ತತ್ವಗಳ ಪ್ರತಿಮೂರ್ತಿಯಾಗಿ, ಮನುಕುಲದ ಸೇವೆಯನ್ನೇ ಜೀವನದುಸಿರಾಗಿಸಿಕೊಂಡ ಪುನೀತೆ ಮದರ್ ಥೆರೆಸಾ ಅವರಿಗೆ ಸಂತ ಪದವಿ ಪ್ರಾಪ್ತಿಯಾಗಿರುವುದರ ಗೌರವಾರ್ಥ ಅವರ ಪ್ರತಿಮೆಯನ್ನು ಆಳ್ವಾಸ್ ಆವರಣದಲ್ಲಿ ಸ್ಥಾಪಿಸಲಾಗುವುದು’ ಎಂದು ಡಾ. ಆಳ್ವರು ಘೋಷಿಸಿದರು.







