ಶಿವಮೊಗ್ಗ - ಹರಿಹರ ರೈಲು ಮಾರ್ಗ ನನೆಗುದಿಗೆ
ರಾಜ್ಯ- ಕೇಂದ್ರದ ಸಮನ್ವಯ ಕೊರತೆಗೆ ಅನುಷ್ಠಾನ ವಿಳಂಬ

ಬಿ. ರೇಣುಕೇಶ್
ಶಿವಮೊಗ್ಗ, ಡಿ. 22: ಸಹಭಾಗಿತ್ವದ ರೈಲ್ವೆ ಯೋಜನೆಗಳಿಗೆ ತನ್ನ ಪಾಲಿನ ಅನುದಾನ ನೀಡುವುದಿಲ್ಲ ಎನ್ನುತ್ತಿದೆ ರಾಜ್ಯ ಸರಕಾರ. ಮತ್ತೊಂದೆಡೆ ಈ ಹಿಂದಿನ ಒಪ್ಪಂದದಂತೆ ಶೇ. 50ರಷ್ಟು ಅನುದಾನ ನೀಡಿ ಎನ್ನುತ್ತಿದೆ ಕೇಂದ್ರ ಸರಕಾರ. ರಾಜ್ಯ-ಕೇಂದ್ರಗಳ ನಡುವಿನ ಸಮನ್ವಯತೆಯ ಕೊರತೆಯ ನೇರ ಪರಿಣಾಮ ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಸಹಭಾಗಿತ್ವದ ರೈಲ್ವೆ ಯೋಜನೆಗಳ ಮೇಲೆ ಬಿದ್ದಿದೆ.!
ಈ ಕಾರಣದಿಂದಲೇ ಮಲೆನಾಡು ಹಾಗೂ ಉತ್ತರ ಕರ್ನಾಟಕದ ರೈಲ್ವೆ ಸಂಪರ್ಕದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿರುವ, ರಾಜ್ಯದ ಮಹತ್ವದ ರೈಲ್ವೆ ಯೋಜನೆಯಾದ ಶಿವಮೊಗ್ಗ - ಹರಿಹರ ನಡುವಿನ ನೂತನ ಮಾರ್ಗ ನಿರ್ಮಾಣ ಕಾರ್ಯ ಅಕ್ಷರಶಃ ನನೆಗುದಿಗೆ ಬಿದ್ದಿದ್ದು, ಸದ್ಯಕ್ಕೆ ಕಾರ್ಯಗತ ಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಬುಧವಾರ ನಗರದಲ್ಲಿ ಲೋಕಸಭಾ ಸದಸ್ಯ ಬಿ.ಎಸ್.ಯಡಿಯೂರಪ್ಪಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಜರಗಿದ ಸಭೆಯಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಶೋಕ್ ಕುಮಾರ್ ಗುಪ್ತ ಅವರು ಶಿವಮೊಗ್ಗ-ಹರಿಹರ ರೈಲ್ವೆ ಯೋಜನೆಯ ಬಗ್ಗೆ ಮಾತನಾಡಿ, ರಾಜ್ಯ ಸರಕಾರ ಯೋಜನೆಗೆ ಅಗತ್ಯವಾದ 1,200 ಎಕರೆ ಭೂ ಸ್ವಾಧೀನ ಮಾಡಿಕೊಟ್ಟರೆ ತಕ್ಷಣದಿಂದಲೇ ಮಾರ್ಗ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ರೈಲ್ವೆ ಅಧಿಕಾರಿಯ ಈ ಹೇಳಿಕೆ ಗಮನಿಸಿದರೆ, ಸದ್ಯಕ್ಕೆ ಈ ಯೋಜನೆ ಅನುಷ್ಠಾನವಾಗುವ ಲಕ್ಷಣಗಳಿಲ್ಲವಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅನುಷ್ಠಾನ ಮಾಡಲಾಗುವ ರೈಲ್ವೆ ಯೋಜನೆಗಳಿಗೆ ತಗುಲುವ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸಬೇಕು. ರಾಜ್ಯದಿಂದ ಅರ್ಧ ಪಾಲು ಅನುದಾನ ಭರಿಸುವುದು ಕಷ್ಟಕರವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿದ್ದ ಶಿವಮೊಗ್ಗ-ಹರಿಹರ ರೈಲ್ವೆ ಯೋಜನೆಯನ್ನು ಕೇಂದ್ರ ಸರಕಾರದಿಂದಲೇ ನೇರವಾಗಿ ಅನುಷ್ಠಾನ ಮಾಡಬೇಕೆಂಬ ಒತ್ತಾಯ ಈ ಹಿಂದೆ ಕೇಳಿಬಂದಿತ್ತು. ಈ ಬಗ್ಗೆ ರೈಲ್ವೆ ಸಚಿವರೊಂದಿಗೆ ಚರ್ಚೆ ನಡೆಸುವುದಾಗಿ ಸಂಸದ ಬಿ.ಎಸ್.ಯಡಿಯೂರಪ್ಪ ಅವರೂ ತಿಳಿಸಿದ್ದರು.
ಈ ಬಗ್ಗೆ ಕೇಂದ್ರದಿಂದ ಯಾವುದೇ ಸ್ಪಷ್ಟ ಭರವಸೆ ಸಿಕ್ಕಿರಲಿಲ್ಲ. ಈ ನಡುವೆ ನೈಋತ್ಯ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ಅಶೋಕ್ ಕುಮಾರ್ ಗುಪ್ತಾ ಅವರು ರಾಜ್ಯ ಸರಕಾರ ಭೂ ಸ್ವಾಧೀನ ಮಾಡಿಕೊಡಬೇಕು ಎಂದು ಮತ್ತೆ ಹೇಳುತ್ತಿರುವುದನ್ನು ಗಮನಿಸಿದರೆ, ಕೇಂದ್ರ ಸರಕಾರ ಪೂರ್ಣ ಪ್ರಮಾಣದಲ್ಲಿ ಈ ಯೋಜನೆ ಅನುಷ್ಠಾನ ಮಾಡಲು ಸುತಾರಾರಂ ಸಿದ್ಧವಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಸಹಭಾಗಿತ್ವ: ಬಿ.ಎಸ್.ಯಡಿಯೂರಪ್ಪಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗ- ಹರಿಹರ ನಡುವೆ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಹಾಗೂ ಈ ಯೋಜನೆಗೆ ಆಗುವ ವೆಚ್ಚದಲ್ಲಿ ರಾಜ್ಯ ಸರಕಾರದಿಂದ ಶೇ.50ರಷ್ಟು ಭರಿಸುವ ಮತ್ತು ಅಗತ್ಯ ಭೂಮಿ ಸ್ವಾಧೀನಪಡಿಸಿಕೊಡುವ ಭರವಸೆ ನೀಡಿದ್ದರು. ಅಂದಿನ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರಿಗೆ ಮನವಿ ಮಾಡಿದ್ದ ವೇಳೆ ಸಹಮತ ವ್ಯಕ್ತಪಡಿಸಿದ್ದ ಬ್ಯಾನರ್ಜಿ, ಬಜೆಟ್‌ನಲ್ಲಿ ಹೊಸ ಮಾರ್ಗ ಘೋಷಿಸಿ ಸರ್ವೇಗೆ ಆದೇಶಿಸಿದ್ದರು. ತದನಂತರ ಸರ್ವೇ ಪೂರ್ಣಗೊಂಡು ನೂತನ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ಕೂಡ ನೀಡಿದ್ದರು. ಕೇಂದ್ರ - ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳಿಸುವ ಒಡಂಬಡಿಕೆಯಾಗಿತ್ತು.
ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿಯುತ್ತಿದ್ದಂತೆ ಈ ಯೋಜನೆಗೆ ಸಂಬಂಧಿಸಿದ ಕಡತ ಕೂಡ ಮೂಲೆ ಸೇರಿತು. ರೈಲ್ವೆ ಇಲಾಖೆ ಅಧಿಕಾರಿಗಳಿಗೂ ಈ ಯೋಜನೆಯ ಬಗ್ಗೆ ನಿರಾಸಕ್ತಿ ಪ್ರದರ್ಶಿಸಲಾರಂಭಿಸಿದರು. ಮತ್ತೊಂದೆಡೆ ರಾಜ್ಯ ಸರಕಾರ ತಾನು ನೀಡಿದ್ದ ಭರವಸೆಯಂತೆ ರೈಲ್ವೆ ಇಲಾಖೆಗೆ ಭೂಮಿ ಸ್ವಾಧೀನಪಡಿಸಿಕೊಡಲಿಲ್ಲ. ತನ್ನ ಪಾಲಿನ ಅನುದಾನ ಕೂಡ ಬಿಡುಗಡೆ ಮಾಡಲಿಲ್ಲ. ಇನ್ನೊಂದೆಡೆ ಕೇಂದ್ರ ಸರಕಾರ ನಾಮಕಾವಸ್ತೆಗೆಂಬಂತೆ ಪ್ರತಿ ಬಜೆಟ್‌ನಲ್ಲಿಯೂ ಮಾರ್ಗ ನಿರ್ಮಾಣಕ್ಕೆ ಅನುದಾನ ಮೀಸಲಿಡುತ್ತಾ ಬರುತ್ತಿದೆ. ಕಷ್ಟಕಷ್ಟ: ಶಿವಮೊಗ್ಗ - ಹರಿಹರ ರೈಲ್ವೆಗೆ ರಾಜ್ಯ ಸರಕಾರ ತನ್ನ ಪಾಲಿನ ಅನುದಾನ ನೀಡುವುದು ಕಷ್ಟವೆಂದೇ ಹೇಳಲಾಗುತ್ತಿದೆ. ಇನ್ನೊಂದೆಡೆ ಕೇಂದ್ರ ಸರಕಾರ ಕೂಡ ಪೂರ್ಣ ಪ್ರಮಾಣದಲ್ಲಿ ವೆಚ್ಚ ಭರಿಸಲು ಮುಂದಾಗುತ್ತಿಲ್ಲ. ರಾಜ್ಯ ಸರಕಾರ ತಾನು ನೀಡಿದ್ದ ಭರವಸೆಯಂತೆ ಶೇ. 50 ರಷ್ಟು ವೆಚ್ಚ, ಅಗತ್ಯ ಭೂಮಿ ನೀಡುವಂತೆ ಒತ್ತಾಯಿಸುತ್ತಿದೆ. ಇದೆಲ್ಲವನ್ನು ಗಮನಿಸಿದರೆ ಸದ್ಯಕ್ಕೆ ಈ ಯೋಜನೆ ಅನುಷ್ಠಾನ ಕಷ್ಟವೆಂದೇ ಸ್ಥಳೀಯ ರೈಲ್ವೆ ಇಲಾಖೆ ಮೂಲಗಳು ಮಾಹಿತಿ ನೀಡುತ್ತವೆ.
ಒಟ್ಟಾರೆ ಕೇಂದ್ರ - ರಾಜ್ಯ ಸರಕಾರಗಳ ನಡುವಿನ ಸಮನ್ವಯತೆಯ ಕೊರತೆಯಿಂದ ಮಹತ್ವದ ರೈಲ್ವೆ ಯೋಜನೆಯೊಂದು ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬೀಳುವಂತಾಗಿದೆ. ಇನ್ನಾದರೂ ಈ ಬಗ್ಗೆ ಎರಡು ಸರಕಾರಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂಬುದು ಸ್ಥಳೀಯ ನಾಗರಿಕರ ಆಗ್ರಹವಾಗಿದೆ.
ರೈಲು ಮಾರ್ಗಕ್ಕೆ 1,200 ಎಕರೆ ಭೂಮಿ ಅಗತ್ಯ
ಶಿವಮೊಗ್ಗ - ಹರಿಹರ ನಡುವೆ ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ 2011-12 ರಲ್ಲಿ ಸರ್ವೇ ನಡೆಸಲಾಗಿತ್ತು. 2012-13ರಲ್ಲಿ ಯೋಜನೆಗೆ ಮಂಜೂರು ನೀಡಿ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಹಣ ಮೀಸಲಿರಿಸಿತ್ತು. ಪ್ರಸ್ತುತ ಈ ಮಾರ್ಗ ನಿರ್ಮಾಣಕ್ಕೆ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 1,200 ಎಕರೆ ಭೂಮಿ ಅಗತ್ಯವಾಗಿದೆ.
ಶಿವಮೊಗ್ಗ ತಾಲೂಕಿನಲ್ಲಿ ಕಳೆದ ಕೆಲ ವರ್ಷಗಳ ಹಿಂದೆಯೇ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಮಾರ್ಗ ಹಾದು ಹೋಗುವ ಜಮೀನುಗಳ ಮಾಲಕರಿಗೆ ನೋಟಿಸ್ ನೀಡಲಾಗಿದೆ. ಭೂ ಮಾಲಕರಿಗೆ ಪರಿಹಾರ ಮೊತ್ತ ಬಿಡುಗಡೆಯಾಗದ ಕಾರಣದಿಂದ ಈ ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತಗೊಂಡಿದೆ. ಶಿವಮೊಗ್ಗ, ದಾವಣಗೆರೆ ಜನಪ್ರತಿನಿಧಿಗಳು ಪ್ರಯತ್ನ ನಡೆಸಬೇಕು
ಶಿವಮೊಗ್ಗ - ಹರಿಹರ ರೈಲ್ವೆ ಮಾರ್ಗವು ಕಾಲಮಿತಿಯಲ್ಲಿ ಅನುಷ್ಠಾನಗೊಳ್ಳಬೇಕಾದರೆ ಈ ನಿಟ್ಟಿನಲ್ಲಿ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಸಂಸದರುಗಳು ಮತ್ತು ಇತರ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಪ್ರಯತ್ನಿಸಬೇಕಾಗಿದೆ. ಕೇಂದ್ರ ರೈಲ್ವೆ ಸಚಿವರು, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸಬೇಕಾಗಿದೆ. ಅನಿವಾರ್ಯವಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಯೋಜನೆಯ ತ್ವರಿತಗತಿಯ ಅನುಷ್ಠಾನಕ್ಕೆ ಆಗ್ರಹಿಸಬೇಕಾಗಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಅತ್ಯಂತ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಎರಡೂ ಜಿಲ್ಲೆಗಳ ಜನಪ್ರತಿನಿಧಿಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕಾಗಿದೆ.







