ದಿಡ್ಡಳ್ಳಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಗೆ ವಿರೋಧ
16ನೆ ದಿನಕ್ಕೆ ಮುಂದುವರಿದ ಪ್ರತಿಭಟನೆ

ಜಿಲ್ಲಾಧಿಕಾರಿ, ಬಿಜೆಪಿ ವಿರುದ್ಧ ಹೋರಾಟ ಸಮಿತಿ ಅಸಮಾಧಾನ
ಮಡಿಕೇರಿ, ಡಿ.22: ದಿಡ್ಡಳ್ಳಿಯಲ್ಲಿ ನಡೆಯುತ್ತಿರುವ ಆದಿವಾಸಿಗಳ ಹೋರಾಟವನ್ನು ಹತ್ತಿಕ್ಕುವುದಕ್ಕಾಗಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದ್ದು, ಇದನ್ನು ತಕ್ಷಣ ತೆರವುಗೊಳಿಸುವ ಮೂಲಕ ನಿರಾಶ್ರಿತರ ನ್ಯಾಯಯುತ ಹೋರಾಟಕ್ಕೆ ಸರಕಾರ ಸ್ಪಂದಿಸಬೇಕೆಂದು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದವು.
ಜಿಲ್ಲಾಧಿಕಾರಿಗಳ ಕಚೇರಿಯ ಎದುರಲ್ಲಿ ಧರಣಿ ಕುಳಿತ ಪ್ರತಿಭಟನಾಕಾರರು, ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿಗಳು ಬಿಜೆಪಿ ಹಾಗೂ ಸಂಘ ಪರಿವಾರದ ಪರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ, ನಿಷೇಧಾಜ್ಞೆ ಜಾರಿಗೊಳಿಸಿರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದರು.
ಬಿಜೆಪಿಯ ಶಾಸಕರು ಹಾಗೂ ಸಂಸದರ ಹೇಳಿಕೆಗಳಿಗೆ ಅನುಗುಣವಾಗಿ ಜಿಲ್ಲಾಧಿಕಾರಿಗಳು ಸರಕಾರದ ವಿರುದ್ಧವೇ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಅಸಹಾಯಕರ ಪರ ಹೋರಾಟ ನಡೆಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ದಿಡ್ಡಳ್ಳಿಗೆ ಬಂದು ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವವರು ಪಾಕಿಸ್ತಾನ ಹಾಗೂ ಬಾಂಗ್ಲಾದೇಶಿಗರಲ್ಲ ಎಂದು ಸಮರ್ಥಿಸಿಕೊಂಡ ಎ.ಕೆ.ಸುಬ್ಬಯ್ಯ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸ್ವಯಂ ಸೇವಕರು ನಿರಾಶ್ರಿತರ ಪರ ಹೋರಾಟ ನಡೆಸುತ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದ ಪ್ರತಾಪ ಸಿಂಹ, ಶಾಸಕ ಕೆ.ಜಿ. ಬೋಪಯ್ಯ ನಿರಾಶ್ರಿತರಿದ್ದ ಸ್ಥಳಕ್ಕೆ ಭೇಟಿ ನೀಡಿ, ನಿವೇಶನ ನೀಡಲೇಬೇಕೆಂದು ಒತ್ತಾಯಿಸಿದ್ದರು ಅಲ್ಲದೆ, ಹೋರಾಟಕ್ಕೆ ಬೆಂಬಲವನ್ನೂ ಸೂಚಿಸಿದ್ದರು. ಆದರೆ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು ಹಾಗೂ ಸಂಸದರು ದಿಡ್ಡಳ್ಳಿಯಲ್ಲಿ ನಕ್ಸಲರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪ ಮಾಡುವ ಮೂಲಕ ಗೊಂದಲದ ರಾಜಕಾರಣ ಮಾಡಿರುವುದು ಖಂಡನೀಯ ಎಂದರು. ಪ್ರಗತಿಪರರು ಹಾಗೂ ಜಾತ್ಯತೀತರು ನಡೆಸುತ್ತಿರುವ ಹೋರಾಟ ಪ್ರಜಾತಂತ್ರದ ಶಾಂತಿಮಾರ್ಗದ ಹೋರಾಟವಾಗಿದೆ ಎಂದು ಸ್ಪಷ್ಟಪಡಿಸಿದರು.
ರಕ್ತಪಾತದ ಹೋರಾಟಕ್ಕೆ ಬೆಂಬಲವಿಲ್ಲ: ನಕ್ಸಲರ ರಕ್ತಪಾತದ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ. ಯಾರೂ ನಕ್ಸಲರಾಗಬಾರದೆನ್ನುವ ಉದ್ದೇಶವನ್ನು ಜನಪ್ರತಿನಿಧಿಗಳು ಹೊಂದಿರಬೇಕು. ಅಸಹಾಯಕರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಆದರೆ, ಇದ್ಯಾವುದನ್ನೂ ಮಾಡದೆ, ಹೋರಾಟಗಾರರನ್ನು ನಕ್ಸಲರೆಂದು ಪ್ರತಿಬಿಂಬಿಸುತ್ತಿರುವುದು ಖಂಡನೀಯ ಎಂದರು.
ದಲಿತರಿಗೆ ದೇವಾಲಯ ಪ್ರವೇಶಿಸಲು ಅವಕಾಶ ನೀಡಿ:
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಪಾಲ್ಗೊಂಡಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಬಜರಂಗದಳ, ಹಿಂದೂ ಜಾಗರಣಾ ವೇದಿಕೆ, ಶ್ರೀರಾಮ ಸೇನೆ ಸೇರಿದಂತೆ ಸಂಘ ಪರಿವಾರ ಸೇರಿಕೊಂಡು ದಲಿತರಿಗೆ ನ್ಯಾಯ ಒದಗಿಸಿದರೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಸುಬ್ಬಯ್ಯ ತಿಳಿಸಿದರು. ಮತಾಂತರದ ಬಗ್ಗೆ ಮಾತನಾಡುವವರು ಮೊದಲು ದಲಿತರನ್ನು ದೇವಾಲಯದೊಳಕ್ಕೆ ಪ್ರವೇಶ ಮಾಡಿಕೊಳ್ಳಲಿ. ದಲಿತರಿಂದಲೇ ಪೂಜೆ ಮಾಡಿಸಿ ಪ್ರಸಾದ ಸ್ವೀಕರಿಸಲಿ ಎಂದು ಸವಾಲು ಎಸೆದ ಅವರು, ನಿರಾಶ್ರಿತರ ಹೋರಾಟಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ನಕ್ಸಲ್ ಹಣೆಪಟ್ಟಿಯನ್ನು ಕಟ್ಟಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಹಾಗೂ ಸಂಘ ಪರಿವಾರದ ಕುತಂತ್ರಕ್ಕೆ ಪ್ರತಿತಂತ್ರ ಮಾಡುವುದಾಗಿ ಎಚ್ಚರಿಕೆ ನೀಡಿದ ಎ.ಕೆ. ಸುಬ್ಬಯ್ಯ, ಷಡ್ಯಂತ್ರದ ರಾಜಕಾರಣವನ್ನು ಜನರು ಸಹಿಸುವುದಿಲ್ಲ. ಜೀವಂತ ಗಾಂಧಿಯಂತಿರುವ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ನೇತೃತ್ವದಲ್ಲೇ ಹೋರಾಟವನ್ನು ಮುನ್ನಡೆಸಲಾಗುವುದು. ಡಿ.23ರಂದು ಬೃಹತ್ ಸಮಾವೇಶ ನಡೆಸಿ ರಾಜ್ಯದ ಎಲ್ಲಾ ಗಿರಿಜನರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಸರಕಾರದ ಗಮನ ಸೆಳೆಯಲಾಗುವುದೆಂದು ಸುಬ್ಬಯ್ಯ ತಿಳಿಸಿದರು. ಶುಕ್ರವಾರ ನಡೆಯಲಿರುವ ಮಡಿಕೆೇರಿ ಚಲೋ ಪ್ರತಿಭಟನೆಯ ಸಂದರ್ಭ ಮಂಡಿಸಲಿರುವ 5 ಹಕ್ಕೊತ್ತಾಯಗಳ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಚಿತ್ರನಟ ಹಾಗೂ ಹೋರಾಟಗಾರ ಚೇತನ್, ಹೋರಾಟಗಾರರು ಎಲ್ಲೂ ಕಾನೂನನ್ನು ಉಲ್ಲಂಘಿಸದಿದ್ದರೂ ನಿಷೇಧಾಜ್ಞೆಯನ್ನು ಜಾರಿ ಮಾಡಿರುವುದು ಅತ್ಯಂತ ಖಂಡನೀಯ ಎಂದರು.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದೇ ಅಜೆಂಡಾದ ಬೇರೆ ಬೇರೆ ಪಕ್ಷಗಳು ಎಂದು ಟೀಕಿಸಿದ ಅವರು, ಸಮಾಜ ಕಲ್ಯಾಣ ಸಚಿವ ಆಂಜನೇಯ ಸ್ಥಳಕ್ಕೆ ಭೇಟಿ ನೀಡಿ ನಿರಾಶ್ರಿತರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಚೇತನ್ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭ ಗಿರಿಜನ ಪ್ರಮುಖರಾದ ಸ್ವಾಮಿ ಹಾಗೂ ಅಪ್ಪಾಜಿ ಮಾತನಾಡಿದರು. ಸಮಿತಿಯ ಪ್ರಮುಖರಾದ ಸಿರಿಮನೆ ನಾಗರಾಜು, ಸಿಪಿಐಎಂ ಪಕ್ಷದ ರಾಜ್ಯ ಸಮಿತಿ ಸದಸ್ಯ ಎಸ್.ವೈ. ಗುರುಶಾಂತ್, ಪಿ.ಆರ್. ಭರತ್, ಸಿಪಿಐಎಂಎಲ್‌ನ ನಿರ್ವಾಣಪ್ಪ, ಎಸ್‌ಡಿಪಿಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಜಿಲ್ಲಾಧ್ಯಕ್ಷ ಅಮಿನ್ ಮೊಹ್ಸಿನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಉಪಾಧ್ಯಕ್ಷ ಲಿಯಾಕತ್ ಅಲಿ, ನಗರಸಭಾ ಸದಸ್ಯರಾದ ಮನ್ಸೂರ್, ಕೆ.ಜಿ.ಪೀಟರ್, ಕಾರ್ಮಿಕ ಸಂಘಟನೆಗಳ ಪ್ರಮುಖರಾದ ರಮೇಶ್, ಮಹದೇವ್, ಜಿ.ಪಂ ಮಾಜಿ ಸದಸ್ಯೆ ಕಾವೇರಿ, ಸಮಿತಿಯ ಕಂದೆಗಾಲ್ ಶ್ರೀನಿವಾಸ್ ಸೇರಿದಂತೆ ಹಲವು ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹಕ್ಕೊತ್ತಾಯಗಳು
ದಿಡ್ಡಳ್ಳಿ ಆದಿವಾಸಿಗಳಿಗೆ ಈ ಹಿಂದೆ ಗುಡಿಸಲುಗಳಿದ್ದ ಸ್ಥಳದಲ್ಲೇ ವಸತಿ ವ್ಯವಸ್ಥೆ ಕಲ್ಪಿಸಬೇಕು. ಬೇಡಿಕೆ ಈಡೇರುವ ವರೆಗೆ, ತಾತ್ಕಾಲಿಕ ಶೆಡ್ ಮತ್ತು ಮೂಲಭೂತ ಸೌಲಭ್ಯ ಒದಗಿಸಬೇಕು. ಡಿ.7 ರಂದು ಅಮಾನುಷವಾಗಿ ಗುಡಿಸಲುಗಳನ್ನು ತೆರವುಗೊಳಿಸಿದ ಅಧಿಕಾರಿಗಳು ಹಾಗೂ ಕಾರ್ಯಾಚರಣೆಗೆ ಆದೇಶ ಮಾಡಿದ ಜಿಲ್ಲಾಧಿಕಾರಿ ಮತ್ತು ನಿರ್ಲಕ್ಷ್ಯ ತೋರಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಯನ್ನು ಅಮಾನತುಗೊಳಿಸಿ ನ್ಯಾಯಾಂಗ ತನಿಖೆ ನಡೆಸಬೇಕು. ಕೊಡಗಿನಲ್ಲಿರುವ ಎಲ್ಲಾ ಶೋಷಿತ ವರ್ಗಕ್ಕೆ ಅರಣ್ಯ ಹಕ್ಕು ಕಾಯ್ದೆಯಡಿ ಜಮೀನು ಹಾಗೂ ವಸತಿ ಒದಗಿಸಬೇಕು. ಬಡಜನರನ್ನು ವಾಸಿಸುತ್ತಿರುವ ಸ್ಥಳದಿಂದ ಒಕ್ಕಲೆಬ್ಬಿಸಬಾರದು. ಮೇಲ್ಕಂಡ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಂದಾಯ ಸಚಿವ, ಅರಣ್ಯ ಸಚಿವ, ಸಮಾಜ ಕಲ್ಯಾಣ ಇಲಾಖೆ ಸಚಿವರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಆದಿವಾಸಿ ಮುಖಂಡರ ಉನ್ನತ ಮಟ್ಟದ ಸಭೆೆ ನಡೆಸಬೇಕು ಎಂದು ಸಮಿತಿ ಒತ್ತಾಯಿಸಿದೆ.
16 ದಿನಗಳ ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ
ತಾತ್ಕಾಲಿಕ ಮೂಲ ಸೌಕರ್ಯ ವ್ಯವಸ್ಥೆ ಸಿದ್ದಾಪುರ, ಡಿ.22: ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ದಿಡ್ಡಳ್ಳಿಯಲ್ಲಿ ನಿರಾಶ್ರಿತರಾಗಿರುವ ಆದಿವಾಸಿಗಳು ಕಳೆದ 16 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ತಡವಾಗಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಗುರುವಾರ ತಾತ್ಕಾಲಿಕ ಮೂಲ ಸೌಕರ್ಯವನ್ನು ಒದಗಿಸಿದೆ.
ಅಂಗನವಾಡಿ ಕಾರ್ಯಕರ್ತರಿಂದ ಮಕ್ಕಳ ಹಾಗೂ ಮಹಿಳೆಯರ ಇರುವಿಕೆ ದಾಖಲಾತಿ, ಆಶ್ರಮ ಶಾಲೆಯ ತಡೆಗೋಡೆ ಬಳಿ ವಿದ್ಯುತ್ ದೀಪ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ, ಶಾಲೆ ಹಿಂಭಾಗದಲ್ಲಿ ಶೌಚಾಲಯ, ಆರೋಗ್ಯ ತಪಾಸಣೆ, ಅಂದಾಜು ಸಾವಿರ ಮಂದಿಗೆ ದಿನಕ್ಕೆ ಎರಡು ಬಾರಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಕೂಡಲೇ ಎಲ್ಲರಿಗೂ ಟಾರ್ಪಲ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಂತಿಯುತವಾಗಿ ಹೋರಾಟ ಮಾಡುತ್ತಿರುವ ಸ್ಥಳಕ್ಕೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ಭೂಮಿ ಹಾಗೂ ವಸತಿಗಾಗಿ ಆದಿವಾಸಿಗಳು ನಡೆಸುತ್ತಿರುವ ಹೋರಾಟವನ್ನು ದಮನಿಸಲು ಮುಂದಾಗಿದೆ. ಹೊರಗಿನಿಂದ ಬಂದವರು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿ ಬಂದಿದ್ದಾರೆ. ಅವರಿಂದಾಗಿ ನಮ್ಮ ಹೋರಾಟ ಎಲ್ಲರ ಗಮನ ಸೆಳೆದಿದೆ. ಇಲ್ಲಿನ ಸಂಸದರು, ಶಾಸಕರು ಮತ್ತು ಜಿಲ್ಲಾಧಿಕಾರಿ ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಕಾರಣಕ್ಕೂ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನಾಳೆ (ಡಿ.23) ನಡೆಯಲಿರುವ ಮಡಿಕೇರಿ ಚಲೋ ಸಮಾವೇಶದಲ್ಲಿ ನಾವು ಭಾಗವಹಿಸಲಿದ್ದೇವೆ. ದಿಡ್ಡಳ್ಳಿಯಲ್ಲಿ ಬೆತ್ತಲೆ ಪ್ರತಿಭಟನೆ ನಡೆಸಿರುವುದರಿಂದ ಸರಕಾರ ಮತ್ತು ಜಿಲ್ಲಾಡಳಿತ ಬೆತ್ತಲೆಯಾಗಿದೆ ಎಂದು ಆದಿವಾಸಿ ನಾಯಕಿ ಮುತ್ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಗೆ ನಿರ್ಬಂಧ
ಸೆ 144 ಜಾರಿ ಮಾಡಿರುವ ಹಿನ್ನೆಲೆ ಯಲ್ಲಿ ಪ್ರತಿಭಟನಾ ನಿರತ ಸ್ಥಳದ ಸುತ್ತಮುತ್ತ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ದಿಡ್ಡಳ್ಳಿ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದು, ಸ್ಥಳೀಯರಲ್ಲದ ವ್ಯಕ್ತಿಳಿಗೆ ನಿರ್ಭಂಧ ವಿಧಿಸಲಾ ಗಿದೆ. ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಾಧ್ಯಮದವರಿಗೂ ನಿರ್ಬಂಧ ಹೇರಲಾಗಿದ್ದು, ಮೇಲಧಿಕಾರಿಗಳ ಅನುಮತಿಯ ಮೇರೆಗೆ ಕೆಲವು ಮಾಧ್ಯಮದವರಿಗೆ ಸಮಯ ನಿಗದಿಪಡಿಸಿ ಅವಕಾಶ ನೀಡಲಾಗುತ್ತಿದೆ. ನಿೇಧಾಜ್ಞೆ ಜಾರಿಯಾಗಿದ್ದರೂ ಆದಿವಾಸಿಗಳ ಅಹೋರಾತ್ರಿ ಪ್ರತಿಭಟನೆ 16ನೆ ದಿನಕ್ಕೆ ಮುಂದುವರಿದಿದೆ.
ನಕ್ಸಲರಿದ್ದರೆ ಪೊಲೀಸರಿಗೆ ಒಪ್ಪಿಸಿ: ಎಸ್‌ಡಿಪಿಐ ಸವಾಲು
ಮಡಿಕೇರಿ, ಡಿ.22: ದಿಡ್ಡಳ್ಳಿಯಲ್ಲಿ ನಡೆಯುತ್ತಿರುವ ಆದಿವಾಸಿಗಳ ಹೋರಾಟದಲ್ಲಿ ನಕ್ಸಲರು ಹಾಗೂ ನಿಷೇಧಿತ ಸಂಘಟನೆಗಳ ವ್ಯಕ್ತಿಗಳು ಪಾಲ್ಗೊಂಡಿದ್ದಾರೆ ಎಂದು ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡುವ ಮೂಲಕ ಜಿಲ್ಲೆಯ ಶಾಸಕರು ಹಾಗೂ ಸಂಸದರು ತಮ್ಮ ವೈಫಲ್ಯವನ್ನು ಮುಚ್ಚಿ ಹಾಕುವ ಯತ್ನ ಮಾಡುತ್ತಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ದಿಡ್ಡಳ್ಳಿ ಹೋರಾಟದಲ್ಲಿ ನಕ್ಸಲರು ಅಥವಾ ನಿಷೇಧಿತ ಸಂಘಟನೆಗಳ ವ್ಯಕ್ತಿಗಳು ಪಾಲ್ಗೊಂಡಿದ್ದರೆ ಅವರನ್ನು ಪತ್ತೆ ಹಚ್ಚಿ ಸ್ಥಳದಲ್ಲೇ ಪೊಲೀಸರಿಗೆ ಒಪ್ಪಿಸುವ ಕೆಲಸವನ್ನು ಶಾಸಕರು ಹಾಗೂ ಸಂಸದರು ಮಾಡಲಿ ಎಂದು ಸವಾಲೆಸೆದಿದ್ದಾರೆ.
ಕಳೆದ 3-4 ಬಾರಿಯಾಗಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಶಾಸಕರು ಆದಿವಾಸಿಗಳ ಪರವಾಗಿ ವಿಧಾನಸಭೆಯಲ್ಲಿ ವಿಷಯ ಮಂಡಿಸಿದ ಒಂದೇ ಒಂದು ಉದಾಹರಣೆಯನ್ನು ನೀಡಲಿ ಮತ್ತು ಸಂಸದ ಪ್ರತಾಪ್ ಸಿಂಹ ಅವರು ಆದಿವಾಸಿಗಳಿಗಾಗಿ ಏನು ಸೌಲಭ್ಯ ಕಲ್ಪಿಸಿದ್ದಾರೆ ಎನ್ನುವುದನ್ನು ಪತ್ರಿಕೆಗಳ ಮೂಲಕ ಬಹಿರಂಗ ಪಡಿಸಲಿ ಎಂದು ಅವರು ಸವಾಲು ಹಾಕಿದರು.
ನಿಷೇಧಾಜ್ಞೆ ಹಾಗೂ ಕ್ಷುಲ್ಲಕ ಹೇಳಿಕೆಗಳಿಂದ ಆದಿವಾಸಿಗಳ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ ಅವರು, ನಿಶ್ರಿತರಿಗೆ ನಿವೇಶನ ದೊರಕುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಅಬ್ದುಲ್ ಮಜೀದ್ ಸ್ಪಷ್ಟಪಡಿಸಿದರು. ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸಿನ್ ಮಾತನಾಡಿ, ಜಿಲ್ಲೆಯ ಸುಮಾರು 7,358 ಎಕರೆ ಪ್ರದೇಶ ಭೂಗಳ್ಳರ ವಶದಲ್ಲಿದೆ ಎಂದು ಸಂಬಂಧಿಸಿದ ಸಚಿವರೇ ವರದಿ ನೀಡಿದ್ದು, ಅದನ್ನು ತೆರವುಗೊಳಿಸಲು ಆದೇಶ ಇದ್ದರೂ ಜಿಲ್ಲಾಡಳಿತ ತೆರವು ಕಾರ್ಯಾಚರಣೆಯನ್ನು ಯಾಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಉಪಾಧ್ಯಕ್ಷ ಲಿಯಾಕತ್ ಅಲಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ನಗರಾಧ್ಯಕ್ಷ ಕೆ.ಜಿ. ಪೀಟರ್ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಾ ಉಪಸ್ಥಿತರಿದ್ದರು.
ನಕ್ಸಲ್ ಸಂಘಟನೆಗಳಿಂದ ಸಮಸ್ಯೆ ಸೃಷ್ಟಿ: ನಂದಾ ಸುಬ್ಬಯ್ಯ ಆರೋಪ
ಮಡಿಕೇರಿ, ಡಿ.22 : ದಿಡ್ಡಳ್ಳಿಯಲ್ಲಿ ಹೋರಾಟದ ಹೆಸರಿನಲಿ್ಲ ನಕ್ಸಲ್ ಸಂಘಟನೆಗಳು ಸಮಸ್ಯೆಯನ್ನು ಹುಟ್ಟು ಹಾಕುತ್ತಿವೆ ಎಂದು ಸಣ್ಣ ಬೆಳೆಗಾರರ ಒಕ್ಕೂಟದ ಮುಖಂಡ ಚೇರಂಡ ನಂದಾ ಸುಬ್ಬಯ್ಯ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕ್ಸಲ್ ಸಂಘಟನೆಗಳು ಗಿರಿಜನ ಮುಖಂಡರಾದ ಜೆ.ಕೆ.ಅಪ್ಪಾಜಿ ಹಾಗೂ ಜೆ.ಕೆ. ಮುತ್ತಮ್ಮ ಅವರನ್ನು ಬಳಸಿಕೊಂಡು ಹಣ ಮಾಡುವ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಇವರಿಬ್ಬರು ಅಮಾಯಕರಿಂದ ಹಣ ಸಂಗ್ರಹಿಸಿ ತೀವ್ರಗಾಮಿ ಸಂಘಟನೆಗಳಿಗೆ ನೀಡಿರುವ ಬಗ್ಗೆ ಸಂಶಯವಿದೆ. ದಿಡ್ಡಳ್ಳಿ ವ್ಯಾಪಿ್ತಯಲ್ಲಿ ನಕ್ಸಲ್ ಚಟುವಟಿಕೆ ತೀವ್ರಗೊಂಡಿರುವುದು ಖಚಿತವಾಗಿದೆ ಎಂದು ಆರೋಪಿಸಿದರು.
ದಿಡ್ಡಳ್ಳಿಯಲ್ಲಿ ನೆಲೆ ನಿಂತವರು ಮಂಡ್ಯ, ಮೈಸೂರು ಹಾಗೂ ತಮಿಳುನಾಡು ಭಾಗದವರಾಗಿದ್ದು, ಇವರೆಲ್ಲರೂ ಗಿರಿಜನರೆನ್ನುವುದು ನಂಬಲಸಾಧ್ಯವಾಗಿದೆ. ನಿರಾಶ್ರಿತರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ನಕ್ಸಲ್ ಪ್ರಚೋದಿತವಾಗಿದೆ ಎಂದು ನಂದಾ ಸುಬ್ಬಯ್ಯ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾಲ್ದಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಣಿ, ಉಪಾಧ್ಯಕ್ಷ ರಾಜು ಸ್ಥಳೀಯರಾದ ಯತೀಶ್, ಎಂ.ಕೆ. ಕುಂಞಪ್ಪ, ಟಿ.ಎನ್. ಗಣೇಶ್ ಉಪಸ್ಥಿತರಿದ್ದರು.
ಸರಕಾರ ಗಿರಿಜನರ ಪರ ಬದ್ಧತೆ ಪ್ರದರ್ಶಿಸಲಿ: ರಾಜೇಶ್
ಚಿಕ್ಕಮಗಳೂರು, ಡಿ.22: ಸೂರಿಗಾಗಿ ಹೋರಾಟ ನಡೆಸುತ್ತಿರುವ ಮಡಿಕೇರಿಯ ದಿಡ್ಡಳ್ಳಿ ಗಿರಿಜನರ ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸುವ ಮೂಲಕ ಗಿರಿಜನ ಪರವಾಗಿರುವ ಬದ್ಧತೆಯನ್ನು ಪ್ರದರ್ಶಿಸಲಿ ಎಂದು ಆದಿವಾಸಿ ರಕ್ಷಣಾ ಪರಿಷತ್‌ನ ಜಿಲ್ಲಾಧ್ಯಕ್ಷ ಪಿ.ರಾಜೇಶ್ ಆಗ್ರಹಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶತ ಶತಮಾನಗಳಿಂದ ಶೋಷಣೆಗೆ ಒಳಗಾದವರು, ಬದುಕುವ ಹಕ್ಕಿನಿಂದ ವಂಚಿತರಾದ ಗಿರಿಜನರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸೂರಿಗಾಗಿ ದೇವಮಾಚಿ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಅರಣ್ಯ ಪೈಸಾರಿ ಜಾಗದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಹೋರಾಟ ನಡೆಸುತ್ತಿದ್ದರೂ ಜನಪ್ರತಿನಿಧಿಗಳು, ಸರಕಾರ, ಅಧಿಕಾರಿಗಳು ಸ್ಪಂದಿಸುವ ಬದಲು ಅವರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ ಎಂದಿದ್ದಾರೆ.
ಸೂರಿಗಾಗಿ ಹೋರಾಟ ನಡೆಸುತ್ತಿರುವ ದಿಡ್ಡಳ್ಳಿಯ ಗಿರಿಜನ ಕೊಡಗಿನ ಮೂಲ ನಿವಾಸಿಗಳಾಗಿದ್ದು, ತಮ್ಮ ಬದುಕಿಗಾಗಿ ಕಾಫಿ ತೋಟಗಳಲ್ಲಿ ಜೀವ ತೇಯ್ದು ತಾವು ಪಡೆದ ಅಲ್ಪಸ್ವಲ್ಪ ಸಾಲಕ್ಕಾಗಿ ತಮ್ಮನ್ನು ತಾವೇ ಜೀತಕ್ಕೆ ಒಳಗಾಗಿಸಿಕೊಂಡು ನಿಕೃಷ್ಟ ಬದುಕು ನಡೆಸಿ ನರಕಯಾತನೆ ಅನುಭವಿಸುತ್ತಿದ್ದಾರೆ.ಸರಕಾರ ಈ ಬಗ್ಗೆ ಪರಿಶೀಲನೆ ನಡೆಸಿ ಅವರಿಗೆ ಅಗತ್ಯವಿರುವ ಸೂರು ಒದಗಿಸಿದ್ದಲ್ಲಿ ಅವರನ್ನು ಜೀತದಿಂದ ಮುಕ್ತಿಗೊಳಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಬಾಳೆಹೊನ್ನೂರಿನ ಸಿಗೋಡು ಗ್ರಾಮದಲ್ಲಿ ನಿವೇಶನ ರಹಿತರು ಹಾಕಿಕೊಂಡಿದ್ದ ಪ್ಲಾಸ್ಟಿಕ್‌ಶೆಡ್‌ಗಳನ್ನು ತೆರವು ಮಾಡುವ ಬರದಲ್ಲಿ ಗೌರಿ ಎಂಬ ಗರ್ಭಿಣಿ ಹೆಣ್ಣು ಮಗಳ ಮೇಲಿನ ದೌರ್ಜನ್ಯ ಖಂಡನೀಯ. ಇಂತಹ ಪ್ರಕರಣಗಳನ್ನು ಗಮನಿಸಿದಾಗ ಬದುಕಿಗಾಗಿ ಸೂರು ನಿರ್ಮಾಣಕ್ಕೆ ಮುಂದಾಗುವುದೇ ದೊಡ್ಡ ತಪ್ಪು ಎಂಬತಾಗಿದೆ ಎಂದು ನುಡಿದಿದ್ದಾರೆ.
ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸುವಂತೆ ಕೋಸೌವೇ ಆಗ್ರಹ
ದಾವಣಗೆರೆ ಡಿ.22: ದಿಡ್ಡಳ್ಳಿಯ ಆದಿವಾಸಿ ಗಿರಿಜನರನ್ನು ದೌರ್ಜನ್ಯದಿಂದ ಒಕ್ಕಲೆಬ್ಬಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ನಿರಾಶ್ರಿತರಿಗೆ ಸವಲತ್ತುಗಳನ್ನು ಒದಗಿಸುವಂತೆ ನಗರದಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ನಂತರ ಉಪವಿಭಾಗಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕೊಡಗು ಜಿಲ್ಲೆಯ ವೀರಾಜಪೇಟೆಯ ಕಾಡಿನ ಅಂಚಿನಲ್ಲಿ ಸುಮಾರು ವರ್ಷಗಳಿಂದ ವಾಸವಾಗಿದ್ದ ಆದಿವಾಸಿಗಳು ಮನೆಗಳನ್ನು ನಿರ್ಮಿಸಿಕೊಂಡು ಸಂಸಾರ ನಡೆಸುತ್ತಿದ್ದರು.ಆದರೆ, ಅರಣ್ಯಾಧಿಕಾರಿಗಳು ಏಕಾಏಕಿ ತಮ್ಮ ಅಧಿಕಾರ ದರ್ಪದಿಂದ ಕಾನೂನು ಬಾಹಿರವಾಗಿ ಮನೆಗಳನ್ನು ಜೆಸಿಬಿ ಮೂಲಕ ಧ್ವಂಸ ಮಾಡಿದ್ದಾರೆ. ಸುಮಾರು 577 ಕುಟುಂಬಗಳನ್ನು ಬೀದಿಗೆ ತಳ್ಳಿ ಅಧಿಕಾರಿಗಳು ಅವರ ಜೀವನವನ್ನೇ ಸರ್ವನಾಶ ಮಾಡಿದ್ದಾರೆ ಎಂದು ದೂರಿದರು. ಈ ಬಡಜನರು ಅನಧಿಕೃತವಾಗಿ ಮನೆ,ಜಮೀನು ಮಾಡಿಕೊಂಡಿರುವುದನ್ನು ಅವರಿಗೆ ಮಂಜೂರು ಮಾಡಬೇಕು.
ಯಾವ ಕಾರಣಕ್ಕೂ ಪರ್ಯಾಯ ಒದಗಿಸದೆ ಎಲ್ಲಾ ಬಡಜನರನ್ನು ನೆಲೆಗಳಿಂದ ಒಕ್ಕಲೆಬ್ಬಿಸಬಾರದು. ಅಲ್ಲದೆ, ಈ ಎಲ್ಲಾ ಸಮಸ್ಯೆಗಳ ಬಗ್ಗೆ ಕುಲಂಕುಶವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಮುಖ್ಯಮಂತಿಗಳ ಅಧ್ಯಕ್ಷತೆಯಲ್ಲಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಒಳಗೊಂಡು ಉನ್ನತ ಮಟ್ಟದ ಸಭೆಯನ್ನು ಕರೆಯಬೇಕೆಂದು ಅವರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ದೊಡ್ಡಮನಿ, ಅನಿಸ್‌ಪಾಷ, ಅಮಾನುಲ್ಲಾ ಜೆ. ಖಾನ್, ಖಾದರ್ ಬಾಷ, ಶಬ್ಬೀರ್, ರಘು ದೊಡ್ಡಮನಿ, ಶ್ರೀನಿವಾಸ್, ಸತೀಶ್ ಅರವಿಂದ, ಝಬೀನಾ ಖಾನಂ, ಅದಿಲ್‌ಖಾನ್, ಮುಮ್ತಾಝ್ ಬೇಗಂ, ಅಸದುಲ್ಲಾ, ಅಕ್ಬರ್, ಅಬ್ದುಲ್ ಸಮದ್, ಕಲೀಲ್‌ಸ ಮತ್ತಿತರರು ಉಪಸ್ಥಿತರಿದ್ದರು.







