ಸಮಾನ ನಾಗರೀಕ ಸಂಹಿತೆ : ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಿಲುವೇನು ?
ಪ್ರಧಾನ ಕಾರ್ಯದರ್ಶಿ ಹೇಳಿಕೆ

ಭಟ್ಕಳ, ಡಿ.22: ಸಮಾನ ನಾಗರಿಕ ಸಂಹಿತೆ ಜಾರಿ ಕುರಿತಂತೆ ದೇಶದ ಸರ್ವೋಚ್ಚ ನ್ಯಾಯಾಲಯದ ನಿರ್ಣಯಕ್ಕೆ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಬದ್ಧವಾಗಿರುತ್ತದೆ ಎಂದು ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನ ವಲಿ ರಹ್ಮಾನಿ ಹೇಳಿದರು. ಅವರು ಗುರುವಾರ ಇಲ್ಲಿನ ಜಾಮಿಯಾ ಇಸ್ಲಾಮೀ ಶಿಕ್ಷಣ ಸಂಸ್ಥೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಕುರಿತಂತೆ ಉಂಟಾಗಿರುವ ಈ ಸಂದರ್ಭದಲ್ಲಿ ಬೋರ್ಡ್‌ನ ಹೇಳಿಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಅಸಾಧ್ಯವಾಗಿದ್ದು, ಸರಕಾರ ತನ್ನ ಸ್ವರೂಪವನ್ನು ಸ್ಪಷ್ಟಪಡಿಸಬೇಕು. ಭಾರತೀಯ ಸಂವಿಧಾನ ಇಲ್ಲಿನ ಪ್ರತಿಯೊಬ್ಬರಿಗೆ ತಮ್ಮ ಧರ್ಮದಂತೆ ಜೀವಿಸುವ ಹಕ್ಕನ್ನು ನೀಡುತ್ತದೆ. ಸರಕಾರ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲು ಮುಂದಾಗಿರುವುದು ಸಂವಿಧಾನ ತನ್ನ ದೇಶದ ನಾಗರಿಕರಿಗೆ ನೀಡಿರುವ ಹಕ್ಕುಗಳ ದಮನ ಮಾಡಿದಂತಾಗುತ್ತದೆ ಎಂದರು.
ಸುಪ್ರೀಂ ಕೋರ್ಟ್ ನಿರ್ಣಯವನ್ನು ನಾವು ಗೌರವಿಸುತ್ತೇವೆ. ಕೆಲವರು ಮನಸ್ಸಿಗೆ ಬಂದಂತೆ ಮುಸ್ಲಿಮ್ ಪರ್ಸನಲ್ ಲಾ ವನ್ನು ವ್ಯಾಖ್ಯಾನಿಸುತ್ತಿದ್ದಾರೆ. ಇದು ಇಸ್ಲಾಮ್‌ನ ಕುರಿತ ಅಲ್ಪಜ್ಞ್ಞಾನದ ಪರಿಣಾವಾಗಿದೆ. ಯಾವುದೇ ಕಾರಣಕ್ಕೂ ಮುಸ್ಲಿಮರು ತಮ್ಮ ವೈಯಕ್ತಿಕ ಜೀವನದಲ್ಲಿ ಇತರರು ಮೂಗು ತೂರಿಸುವುದನ್ನು ಸಹಿಸುವುದಿಲ್ಲ. ತಲಾಖ್ ಎಂಬ ಪದ ಮಕ್ಕಳ ಆಟಿಕೆಯಲ್ಲ. ಅದನ್ನು ಎಲ್ಲಿ, ಯಾವಾಗ ಬೇಕಾದರೂ ಬಳಸಿಕೊಳ್ಳುವಂತಿಲ್ಲ. ಇದರ ಸ್ವರೂಪವನ್ನು ಅರಿತುಕೊಂಡು ಈ ಪದವನ್ನು ಬಳಸಬೇಕಾಗುತ್ತದೆ ಅಜ್ಞಾನ ಹಾಗೂ ಕೋಪದಲ್ಲಿ ಈ ಪದವನ್ನು ಬಳಸಿದರೆ ಅದರ ಪ್ರತಿಫಲ ಖಂಡಿತವಾಗಿ ಅವನು ಅನುಭವಿಸಲೇಬೇಕು ಎಂದರು.
ಯಾವುದೇ ತಪ್ಪು ಮಾಡದೆ ಕೆಲವೊಮ್ಮೆ ಗಂಡ ಅಥವಾ ಹೆಂಡತಿಗೆ ಅನ್ಯಾಯವಾಗಬಹುದು. ಆದರೆ ತಲಾಖ್ ಪದದ ಉಚ್ಛಾರವೇ ಬಹಳ ಜಾಗರೂಕತೆಯಿಂದ ಉಪಯೋಗಿಸುವಂತಹದ್ದು. ಕೊಲೆ ಮಾಡಿದ ನಂತರ ವ್ಯಕ್ತಿ ಪಶ್ಚಾತ್ತಾಪ ಪಟ್ಟರೆ ಕೊಲ್ಲಲ್ಪಟ್ಟ ವ್ಯಕ್ತಿ ಮರಳಿ ಜೀವಂತವಾಗಲು ಹೇಗೆ ಸಾಧ್ಯವಿಲ್ಲವೋ ಹಾಗೆ ಒಮ್ಮೆ ತಲಾಖ್ ನೀಡಿದರೆ ಅದು ಮತ್ತೆ ಮರಳಿ ಪಡೆಯುವ ಹಾಗಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ತಲಾಖ್ ಪತಿ-ಪತ್ನಿ ಬೇರ್ಪಡುವ ಕೊನೆಯ ಅಸ್ತ್ರವಾಗಿದೆ. ಇದನ್ನು ಬಳಸುವಾಗ ಯೋಚನೆ ಮಾಡಬೇಕಷ್ಟೆ. ತಿಳುವಳಿಕೆಯಿಲ್ಲದೆ ಜನರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು, ಮುಸ್ಲಿಮ್ ಪರ್ನಲ್ ಲಾ ಬೋರ್ಡ್ ಈ ಕುರಿತಂತೆ ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡುವ ಯೋಜನೆಯನ್ನು ರೂಪಿಸಿದೆ. ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ ಏಕರೂಪ ನಾಗರಿಕ ಕಾನೂನು ಜಾರಿಗೊಳಿಸುವುದು ಸುಲಭವಲ್ಲ. ಇಲ್ಲಿ ಪ್ರತಿಯೊಂದು ಸಮುದಾಯಕ್ಕೆ ತನ್ನದೇ ಆದ ವೈಯಕ್ತಿಕ ಕಾನೂನುಗಳಿವೆ. ಮದುವೆ, ವಿವಾಹ, ಕುಟುಂಬ ವ್ಯವಸ್ಥೆ ಎಲ್ಲ ರೀತಿಯಿಂದ ಭಿನ್ನವಾಗಿವೆ. ಏಕರೂಪ ನಾಗರಿಕ ಸಂಹಿತೆಯನ್ನು ಕೇವಲ ಮುಸ್ಲಿಮರು ಮಾತ್ರ ವಿರೋಧಿಸುವುದಿಲ್ಲ. ಬದಲಾಗಿ ಇಲ್ಲಿನ ಹಲವು ಸಮುದಾಯದವರು ಈಗಾಗಲೇ ಇದನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆಯನ್ನು ಹೂಡಿದ್ದಾರೆ ಎಂದರು.
ಸರಕಾರ ಈ ಕುರಿತಂತೆ ಬೋರ್ಡ್‌ನೊಂದಿಗೆ ಮಾತುಕತೆ ನಡೆಸಲು ಉದ್ದೇಶಿಸಿದರೆ ಇದಕ್ಕೆ ಬೋರ್ಡ್ ಸಿದ್ಧವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತ ಈ ಕುರಿತು ಬೋರ್ಡ್ ಸರಕಾರದೊಂದಿಗಿನ ಮಾತುಕತೆಗೆ ಸಿದ್ಧವಿದೆ ಎಂದರು.
ಸುಪ್ರೀಂ ಕೋರ್ಟ್ ತೀರ್ಮಾನ ಒಪ್ಪಲು ಸಿದ್ಧರಿರುವ ತಾವು ನಾಗರಿಕ ಸಂಹಿತೆಯನ್ನು ವಿರೋಧಿಸುತ್ತಿರುವುದು ಸೂಕ್ತವೇ ಎಂಬ ಪ್ರಶ್ನೆಗೆ, ಹೌದು. ‘ನಮಗೆ ನಮ್ಮ ಸಂವಿಧಾನ ಈ ಹಕ್ಕನ್ನು ನೀಡಿದೆ. ನಮಗೆ ಸರಿಕಾಣದ ಎಲ್ಲ ವಿಷಯಗಳನ್ನು ವಿರೋಧಿಸುವ ಹಕ್ಕು ನಮಗಿದೆ’ ಎಂದರು.
ಯಾವುದೇ ಕಾರಣಕ್ಕೂ ಶರೀಅತ್‌ನಲ್ಲಿ ಹಸ್ತಕ್ಷೇಪ ಸಲ್ಲದು. ಇದಕ್ಕಾಗಿ ಮುಸ್ಲಿಮರು ಬೋರ್ಡ್‌ನ ಬ್ಯಾನರ್ ನಡಿ ದೇಶದಾದ್ಯಂತ ಕಾನೂನು ಹೋರಾಟಕ್ಕೆ ಸಿದ್ಧ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝೀಂ ಅಧ್ಯಕ್ಷ ಮುಝಮ್ಮಿಲ್ ಖಾಝಿಯಾ, ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಖರೂರಿ, ಮಾಧ್ಯಮ ಸಂಚಾಲಕ ಡಾ.ಮುಹಮ್ಮದ್ ಹನೀಫ್ ಶಬಾಬ್, ಎಂ.ಜೆ. ಅಬ್ದುಲ್ ರಖೀಬ್ ಮತ್ತಿತರರು ಉಪಸ್ಥಿತರಿದ್ದರು.





