ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆ
ಶಿವಮೊಗ್ಗದಲ್ಲಿ ಮದ್ಯದಂಗಡಿಗಳ ಸರ್ವೇ ಕಾರ್ಯ ಆರಂಭ
ಶಿವಮೊಗ್ಗ, ಡಿ. 22: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಇಕ್ಕೆಲಗಳ 500 ಮೀಟರ್ ಅಂತರದಲ್ಲಿರುವ ಬಾರ್-ವೈನ್‌ಶಾಪ್‌ಗಳನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ-ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿರುವ ಮದ್ಯದಂಗಡಿಗಳನ್ನು ಅಧಿಕೃತವಾಗಿ ಗುರುತಿಸುವ ಪ್ರಕ್ರಿಯೆಯನ್ನು ಅಬಕಾರಿ ಇಲಾಖೆಯು ವಿದ್ಯುಕ್ತವಾಗಿ ಆರಂಭಿಸಿದೆ. ಜಿಲ್ಲೆಯಲ್ಲಿ ಒಟ್ಟಾರೆ 228 ಮದ್ಯದಂಗಡಿಗಳಿವೆ.
ಇದರಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿರುವ ಮದ್ಯದಂಗಡಿಗಳ್ಯಾವುವು ಎಂಬುದನ್ನು ಗುರುತಿಸುವ ಪ್ರಕ್ರಿಯೆಯನ್ನು ಇಲಾಖೆ ಆರಂಭಿಸಿದೆ. ಇದಾದ ನಂತರ ಅಧಿಕೃತವಾಗಿ ಅಂತಹ ಮದ್ಯದಂಗಡಿ ಮಾಲಕರಿಗೆ ಅಂಗಡಿ ತೆರವುಗೊಳಿಸುವಂತೆ ನೋಟಿಸ್ ಜಾರಿಗೊಳಿಸಲಾಗುವುದು. ಈ ವಿಷಯದಲ್ಲಿ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವುದು ಎಂದು ಅಬಕಾರಿ ಜಿಲ್ಲಾಧಿಕಾರಿ ಎಂ. ರೂಪಾ ಸ್ಪಷ್ಟಪಡಿಸಿದ್ದಾರೆ.
ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳ ಮಾಹಿತಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ಉಳಿದಂತೆ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಗಳ ವಿವರವನ್ನು ಸಂಬಂಧಿಸಿದ ಇಲಾಖೆಯಿಂದ ಸಂಗ್ರಹಿಸಿ, ಮದ್ಯದಂಗಡಿಗಳನ್ನು ಗುರುತಿಸಿ ತೆರವಿಗೆ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದ್ದಾರೆ.
ಒಟ್ಟಾರೆ 228 ಮದ್ಯದಂಗಡಿಗಳಲ್ಲಿ ತೆರವುಗೊಳ್ಳುವ ಮದ್ಯದಂಗಡಿಗಳ ಸಂಖ್ಯೆ ಎಷ್ಟೆಂಬುವುದು ಸದ್ಯಕ್ಕೆ ಹೇಳಲಾಗುವುದಿಲ್ಲ. ಸರ್ವೇ ಕಾರ್ಯ ಪೂರ್ಣಗೊಂಡ ನಂತರವಷ್ಟೇ ಸ್ಪಷ್ಟ ಅಂಕಿಅಂಶ ಗೊತ್ತಾಗಲಿದೆ. ಈಗಾಗಲೇ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಸೂಕ್ತ ಸಲಹೆ - ಸೂಚನೆ ನೀಡಿದ್ದಾರೆ. ಅದರಂತೆ ಮದ್ಯದಂಗಡಿಗಳಿಗೆ ನೋಟಿಸ್ ನೀಡಿ, ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಾಣ ಬೆದರಿಕೆ ಪ್ರಕರಣ







