ಸಿದ್ದಲಿಂಗ ಶ್ರೀಗಳ ಆರೋಪ ಸುಳ್ಳು: ಉಮಾಪತಿ ಸ್ಪಷ್ಟನೆ
ದಾವಣಗೆರೆ, ಡಿ.22: ವೀರಶೈವ ಪಂಚಮಸಾಲಿ ಮಠದ ಟ್ರಸ್ಟ್ ಸದಸ್ಯರ ಮೇಲೆ ಉಚ್ಛಾಟಿತ ಸಿದ್ದಲಿಂಗ ಶ್ರೀಗಳು ಮಾಡಿರುವ ಆರೋಪ ಶುದ್ಧಸುಳ್ಳು. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಟ್ರಸ್ಟಿಗಳಾದ ಬಿ.ಸಿ. ಉಮಾಪತಿ ಸ್ಪಷ್ಟನೆ ನೀಡಿದರು.ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಿದ್ದಲಿಂಗ ಶ್ರೀಗಳು ಈಚೆಗೆ ಜಿಲ್ಲಾ ಎಸ್ಪಿ ಅವರಿಗೆ ಮನವಿ ನೀಡಿ ತಮಗೆ ಪ್ರಾಣ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಬಾವಿ ಬೆಟ್ಟಪ್ಪ, ಬಸವರಾಜ್ ದಿಂಡೂರು ಹಾಗೂ ನನ್ನ ಮೇಲೆ ದೂರು ದಾಖಲಿಸಿದ್ದಾರೆ.
ಆದರೆ, ಈ ಆರೋಪ ನಿರಾಧಾರವಾಗಿದ್ದು, ಶ್ರೀಗಳ ಬಗ್ಗೆ ನಮಗೆ ಅಂತಹ ಯಾವುದೇ ಭಾವನೆ ಇಲ್ಲ. ಅವರನ್ನು ಗೌರವಯುತವಾಗಿಯೇ ನಡೆಸಿಕೊಂಡಿದ್ದು, ಕಳೆದ 16 ತಿಂಗಳ ಹಿಂದೆ ಉಚ್ಛಾಟನೆ ಮಾಡಲಾಗಿದೆ. ನಂತರದ ದಿನಗಳಲ್ಲಿ ಅವರನ್ನು ನಾವ್ಯಾರೂ ಭೇಟಿಯೇ ಆಗಿಲ್ಲ. ಅವರು ಮಠಕ್ಕೆ ಸಂಬಂಧವೇ ಇಲ್ಲ. ಹೀಗಿದ್ದಾಗ ಅವರ ಮೇಲೆ ನಾವ್ಯಾಕೆ ಹಲ್ಲೆ ಮಾಡುತ್ತೇವೆ ಎಂದು ಅವರು ಪ್ರಶ್ನಿಸಿದರು.
ನಮಗೆ ಸಮಾಜದ ಮೇಲೆ ಗೌರವವಿರುವುದರಿಂದ ನ್ಯಾಯಾಲಯದಲ್ಲಿ ಪ್ರಕರಣವಿರುವುದರಿಂದ ಅವರ ಯಾವುದೇ ವಿಚಾರಕ್ಕೂ ಟ್ರಸ್ಟ್ ಭಾಗಿಯಾಗಿಲ್ಲ. ನ್ಯಾಯಾಲಯದ ಆದೇಶದಂತೆ ಅವರು ಮಠದ ಒಂದು ರೂಮಿನಲ್ಲಿ ವಾಸವಾಗಿದ್ದಾರೆ. ಅಲ್ಲಿ ಬಳಸುವ ನೀರು ಮತ್ತು ವಿದ್ಯುತ್ ಕೂಡ ನಾವು ಸ್ಥಗಿತಗೊಳಿಸಿಲ್ಲ. ಆದರೆ, ಶ್ರೀಗಳೇ ವಿನಾಕಾರಣ ಪ್ರಾಣ ಬೆದರಿಕೆ ನಾಟಕ ಮಾಡುತ್ತಿದ್ದಾರೆ. ಮಠಕ್ಕೆ ನೂತನ ಶ್ರೀಗಳ ಆಯ್ಕೆ ವಿಚಾರ ಅರಿತು ಇದಕ್ಕೆ ತಡೆ ತರುವ ಉದ್ದೇಶದಿಂದ ಸಿದ್ದಲಿಂಗ ಸ್ವಾಮೀಜಿ ಜೀವಭಯದ ನಾಟಕವಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಹದಡಿ ನಟರಾಜ್, ಬಾದಾಮಿ ಕರಿಬಸಪ್ಪ, ಚಂದ್ರಶೇಖರ್ ಪೂಜಾರಿ, ಎಂ. ದೊಡ್ಡಪ್ಪ ಮತ್ತಿತರರಿದ್ದರು







