ನೋಟು ರದ್ದತಿ : ಮುಸ್ಲಿಮರಿಗೆ ಕೇಂದ್ರ ಸರಕಾರದಿಂದ ವಿಶೇಷ ಮನವಿ ಏನು?

ಹೊಸದಿಲ್ಲಿ, ಡಿ.22: ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಗದು ರಹಿತ ಭಾರತ ವ್ಯವಸ್ಥೆಯನ್ನು ಬೆಂಬಲಿಸುವಂತೆ ಮುಸಲ್ಮಾನರ ಮನ ಒಲಿಸಲು ಕೇಂದ್ರ ಸರಕಾರ ಮತ್ತು ಬಿಜೆಪಿ ಪಕ್ಷ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮುಸ್ಲೀಂ ಸಮುದಾಯದವರಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯ ಅನುಕೂಲಗಳ ಬಗ್ಗೆ ಅರಿವು ಮೂಡಿಸಲು ಅಲ್ಪಸಂಖ್ಯಾತ ಸಚಿವಾಲಯವು ‘ನಗದು ರಹಿತ ಚೌಪಾಲ್’ ಕಾರ್ಯಕ್ರಮ ಹಮ್ಮಿಕೊಂಡಿದೆ. ಇನ್ನೊಂದೆಡೆ ಬಿಜೆಪಿಯು ಸಮುದಾಯದ ಧಾರ್ಮಿಕ ಮುಖಂಡರು ಮತ್ತು ವ್ಯಾಪಾರಿಗಳನ್ನು ಕೇಂದ್ರೀಕರಿಸಿ , ನಗದು ರಹಿತ ವ್ಯವಸ್ಥೆಯ ಬಗ್ಗೆ ಅವರಲ್ಲಿರುವ ಆತಂಕವನ್ನು ನಿವಾರಿಸುವ ಕ್ರಮಕ್ಕೆ ಮುಂದಾಗಿದೆ.
ನಗದು ರಹಿತ ಭಾರತ- ಸವಾಲು ಮತ್ತು ಅನುಕೂಲ ಎಂಬ ಕುರಿತಾದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅಲ್ಪಸಂಖ್ಯಾತ ವ್ಯವಹಾರ ಇಲಾಖೆಯ ಉಪ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಡಿಜಿಟಲ್ ವ್ಯವಹಾರ ಆಧರಿತ ಪಾವತಿ ವ್ಯವಸ್ಥೆಯು ಮುಸಲ್ಮಾನರು ಮತ್ತು ಇತರ ದುರ್ಬಲ ವರ್ಗದವರಿಗೆ ಅನುಕೂಲವಾಗಿದೆ. ಆದ್ದರಿಂದ ಸರಕಾರದ ಅಭಿಯಾನವನ್ನು ಯಶಸ್ವಿಗೊಳಿಸಲು ಕೈಜೋಡಿಸುವಂತೆ ಅವರು ಕರೆ ನೀಡಿದರು. ಸ್ವೀಡನ್, ಬೆಲ್ಜಿಯಂ, ಫ್ರಾನ್ಸ್, ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಮುಂತಾದ ಹಲವು ದೇಶಗಳು ನಗದು ರಹಿತ ಅರ್ಥವ್ಯವಸ್ಥೆ ಹೊಂದಿವೆ ಎಂದವರು ತಿಳಿಸಿದರು.







