49 ವರ್ಷಗಳ ನಂತರ ಪಾಕಿಸ್ತಾನಕ್ಕೆ ಗಡಿಪಾರಾಗುವ ಅಪಾಯದಲ್ಲಿ ಮುಂಬೈ ನಿವಾಸಿ

ಮುಂಬೈ,ಡಿ.22: ಎರಡು ವರ್ಷದ ಮಗುವಾಗಿದ್ದಾಗಿನಿಂದಲೇ ಮುಂಬೈನಲ್ಲಿ ವಾಸವಾಗಿರುವ ಆಸಿಫ್ ಕರಾಡಿಯಾ(51) ತಲೆಯ ಮೇಲೆ ಗಡಿಪಾರಿನ ಕತ್ತಿ ತೂಗಾಡುತ್ತಿದೆ. ತನ್ನನ್ನು ಭಾರತೀಯ ಪ್ರಜೆಯೆಂದು ಪರಿಗಣಿಸಬೇಕೆಂದು ಕೋರಿ ಆತ ಸಲ್ಲಿಸಿದ ಅರ್ಜಿಯ ಕುರಿತು ತಾನು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಮುಂಬೈ ಉಚ್ಚ ನ್ಯಾಯಾಲಯವು ಬುಧವಾರ ಹೇಳಿದ ನಂತರ ಆತ ಪಾಕಿಸ್ತಾನಕ್ಕೆ ಗಡಿಪಾರಾಗುವ ಸಾಧ್ಯತೆ ದಟ್ಟವಾಗಿದೆ.
ಪಾಕಿಸ್ತಾನಿ ಪಾಸ್‌ಪೋರ್ಟ್ ಹಾಜರು ಪಡಿಸುವಂತೆ,ಇಲ್ಲದಿದ್ದರೆ ಗಡಿಪಾರು ಎದುರಿಸುವಂತೆ ಪೊಲೀಸರು ಜೂನ್‌ನಲ್ಲಿ ನೋಟಿಸು ಜಾರಿಗೊಳಿಸಿದ ಬಳಿಕ ಆಸಿಫ್ ಈ ಅರ್ಜಿಯನ್ನು ಸಲ್ಲಿಸಿದ್ದರು. ತಾನು ಪಾಕಿಸ್ತಾನದಲ್ಲಿ ಜನಿಸಿರುವೆನಾದರೂ ತನ್ನ ಹೆತ್ತವರು ಭಾರತೀಯರಾಗಿದ್ದಾರೆ,ತನ್ನ ಪತ್ನಿ ಮತ್ತು ಮೂವರು ಮಕ್ಕಳೂ ಭಾರತೀಯ ಪ್ರಜೆಗಳೇ ಆಗಿದ್ದಾರೆ. ಪಾನ್,ಆಧಾರ್,ಮತದಾರರ ಗುರುತಿನ ಚೀಟಿ,ಪಡಿತರ ಚೀಟಿ ಮತ್ತು ವಸತಿ ಪ್ರಮಾಣಪತ್ರದಂತಹ ಎಲ್ಲ ಪ್ರಮುಖ ದಾಖಲೆಗಳನ್ನೂ ತಾನು ಹೊಂದಿದ್ದೇನೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದರು.
ಆಸಿಫ್‌ರ ತಾಯಿ ಝೈಬುನ್ನಿಸಾ ಮೂಲತ ಪಾಕಿಸ್ತಾನದ ಕರಾಚಿಯವರು. 1962ರಲ್ಲಿ ಮುಂಬೈ ನಿವಾಸಿ ಅಶ್ರಫ್ ರನ್ನು ಮದುವೆಯಾದ ಬಳಿಕ ಭಾರತಕ್ಕೆ ಬಂದಿದ್ದರು. 1965ರಲ್ಲಿ ಹೆರಿಗೆಗಾಗಿ ಕರಾಚಿಗೆ ತೆರಳಿದ್ದ ಅವರು ಆಸಿಫ್‌ಗೆ ಜನನ ನೀಡಿದ್ದರು. ಮಗುವಿಗೆ ಎರಡು ವರ್ಷ ತುಂಬುತ್ತದೆ ಎನ್ನುವಾಗ ಗಂಡನ ಮನೆಗೆ ಮರಳಿದ್ದರು.
2012ರಲ್ಲಿ ಹಜ್ ಯಾತ್ರೆಗೆ ತೆರಳಲು ಬಯಸಿದ್ದ ಆಸಿಫ್ ಭಾರತೀಯ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ತಿರಸ್ಕರಿಸಿದ ಅಧಿಕಾರಿಗಳು ಬದಲಿಗೆ ದೀರ್ಘಾವಧಿಯ ವೀಸಾಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದರು. ಈ ವೀಸಾದ ಅವಧಿಯನ್ನು ಆಸಿಫ್ ಎರಡು ಬಾರಿ ವಿಸ್ತರಿಸಿಕೊಂಡಿದ್ದರು ಮತ್ತು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅದರ ಅವಧಿ ಮುಗಿದಿದೆ.
ಇದು ಇಷ್ಟೊಂದು ದೊಡ್ಡ ಸಮಸ್ಯೆಯಾಗಲಿದೆ ಎಂದು ನಾವು ಕನಸುಮನಸಿನಲ್ಲಿಯೂ ಊಹಿಸಿರಲಿಲ್ಲ ಎನ್ನುತ್ತಾರೆ ಆಸಿಫ್‌ರ ಹತಾಶ ತಂದೆ ಅಬ್ಬಾಸ್. ಅವರು ಈ ಪ್ರಕರಣದಲ್ಲಿ ಸಹಅರ್ಜಿದಾರರಾಗಿದ್ದಾರೆ. ಆಸಿಫ್ ಎರಡು ವರ್ಷ ಪ್ರಾಯದಲ್ಲಿ ಇಲ್ಲಿಗೆ ಬಂದ ಮೇಲೆಂದೂ ಮತ್ತೆ ಪಾಕಿಸ್ತಾನಕ್ಕೆ ಹೋಗಿಲ್ಲ, ಅವನಿಗೆ ಆ ರಾಷ್ಟ್ರದ ಪೌರತ್ವವೂ ಬೇಕಾಗಿಲ್ಲ ಎಂದರು.
ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಆಸಿಫ್‌ಗೆ ಯಾವುದೇ ಮಧ್ಯಂತರ ಪರಿಹಾರವನ್ನೊದಗಿಸಲು ನಿರಾಕರಿಸಿದೆ ಮತ್ತು ಪ್ರಕರಣದ ವಿಚಾರಣೆಯನ್ನು ಮಂದಿನ ವರ್ಷದ ಜ.17ಕ್ಕೆ ಮುಂದೂಡಿದೆ. ಆಸಿಫ್ ಬಳಿ ಪಾಕಿಸ್ತಾನದ ಪಾಸ್‌ಪೋರ್ಟ್ ಇಲ್ಲದಿದ್ದಾಗ ಅವರಿಗೆ ವೀಸಾ ಹೇಗೆ ಮಂಜೂರಾಗಿತ್ತು ಎಂದು ಅದು ಆಸಿಫ್ ಪರ ವಕೀಲರನ್ನು ಪ್ರಶ್ನಿಸಿದೆ.
ಆಸಿಫ್‌ಗೆ ಈ ಹಂತದಲ್ಲಿ ಪರಿಹಾರವನ್ನು ಕಲ್ಪಿಸುವುದಕ್ಕೆ ವಿರೋಧವನ್ನು ವ್ಯಕ್ತಪಡಿಸಿರುವ ಸರಕಾರಿ ವಕೀಲರಾದ ಪೂರ್ಣಿಮಾ ಕಂತಾರಿಯಾ ಅವರು,ಆಸಿಫ್ ಭಾರತದ ಪ್ರಜೆಯಲ್ಲ ಮತ್ತು ಇಲ್ಲಿ ಅಕ್ರಮವಾಗಿ ವಾಸವಗಿದ್ದಾರೆ ಎಂದು ವಾದಿಸಿದ್ದರು.
ಆಸಿಫ್‌ರ ಹೆತ್ತವರು ಭಾರತೀಯರಾಗಿದ್ದಾರೆ.ಹೀಗಾಗಿ ಅವರು ಬಾರತೀಯ ಪೌರತ್ವಕ್ಕೆ ಅರ್ಹರಾಗಿದ್ದಾರೆ ಎಂದು ಅವರ ಪರ ವಕೀಲರು ಹೇಳಿದ್ದಾರೆ.
ಹೆರಿಗೆಯ ಬಳಿಕ ಪಾಕ್ ಪಾಸ್‌ಪೋರ್ಟ್‌ನಲ್ಲಿ ಭಾರತಕ್ಕೆ ಮರಳಿದ್ದ ಝೈಬುನ್ನಿಸಾ 1972ರಲ್ಲಿ ಭಾರತೀಯ ಪೌರತ್ವ ಪಡೆದುಕೊಂಡಿದ್ದರು. ಆಸಿಫ್ ಮಾತ್ರ ತ್ರಿಶಂಕು ಸ್ಥಿತಿ ಎದುರಿಸುತ್ತಿದ್ದಾರೆ. ನ್ಯಾಯಾಲಯ ಕರುಣೆ ತೋರದಿದ್ದರೆ ಅವರು ಪಾಕಿಸ್ತಾನಕ್ಕೆ ಗಡಿಪಾರು ಆಗಬಹುದು.







