ಭ್ರಷ್ಟಾಚಾರ ಆರೋಪ: ಅಲ್ವಿರೋ ಪೀಟರ್ಸನ್‌ಗೆ 2 ವರ್ಷ ನಿಷೇಧ

ಜೋಹಾನ್ಸ್‌ಬರ್ಗ್, ಡಿ.22: ದಕ್ಷಿಣ ಆಫ್ರಿಕದ ಪರ 36 ಟೆಸ್ಟ್ ಪಂದ್ಯಗಳನ್ನು ಆಡಿರುವ ಹಿರಿಯ ಆಟಗಾರ ಅಲ್ವಿರೊ ಪೀಟರ್ಸನ್‌ಗೆ ಭ್ರಷ್ಟಾಚಾರದಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿ 2 ವರ್ಷಗಳ ಕಾಲ ನಿಷೇಧ ವಿಧಿಸಲಾಗಿದೆ. ಪೀಟರ್ಸನ್ ಮಾಜಿ ನಾಯಕ ಹ್ಯಾನ್ಸಿ ಕ್ರೊನಿಯೆ ಬಳಿಕ ನಿಷೇಧಕ್ಕೆ ಒಳಗಾಗಿರುವ ಆಫ್ರಿಕದ ಎರಡನೆ ಆಟಗಾರನಾಗಿದ್ದಾರೆ. ಕ್ರೊನಿಯೆ 2000ರಲ್ಲಿ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ನಿಷೇಧಕ್ಕೆ ಗುರಿಯಾಗಿದ್ದರು.
36ರ ಪ್ರಾಯದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಪೀಟರ್ಸನ್ ಕ್ರಿಕೆಟ್ ದಕ್ಷಿಣ ಆಫ್ರಿಕದ(ಸಿಎಸ್‌ಎ) ಹಲವು ನೀತಿ ಸಂಹಿತೆಗಳನ್ನು ಉಲ್ಲಂಘಿಸಿರುವುದಾಗಿ ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ 2 ವರ್ಷಗಳ ಕಾಲ ನಿಷೇಧ ಹೇರಲಾಗಿದೆ. ಪೀಟರ್ಸನ್ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿ ನಿಷೇಧಕ್ಕೆ ಗುರಿಯಾಗುತ್ತಿರುವ ಆಫ್ರಿಕದ ಆರನೆ ಆಟಗಾರನಾಗಿದ್ದಾರೆ. 2 ವರ್ಷಗಳ ನಿಷೇಧದ ಅವಧಿ ಈ ವರ್ಷದ ನವೆಂಬರ್ 12 ರಿಂದ ಆರಂಭವಾಗಲಿದೆ. ಪೀಟರ್ಸನ್ ವಿರುದ್ಧ ಆರೋಪವಿರುವ ಕಾರಣ ಅವರನ್ನು ಅಮಾನತುಗೊಳಿಸಲಾಗಿದೆ.
2014-15ರ ಋತುವಿನ ದಕ್ಷಿಣ ಆಫ್ರಿಕ ದೇಶೀಯ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಪಂದ್ಯಗಳನ್ನು ಫಿಕ್ಸ್ ಮಾಡಿರುವ ಆರೋಪದಲ್ಲಿ ಮಾಜಿ ಅಂತಾರಾಷ್ಟ್ರೀಯ ಆಟಗಾರ ಗುಲಾಮ್ ಬೋದಿಗೆ ಈಗಾಗಲೇ 20 ವರ್ಷಗಳ ಕಾಲ ನಿಷೇಧ ಹೇರಲಾಗಿದೆ.
ನಾನು ನನ್ನ ಕುಟುಂಬ ಸದಸ್ಯರು, ಸ್ನೇಹಿತರು, ನನ್ನ ಅಭಿಮಾನಿಗಳು ಹಾಗೂಸಹ ಆಟಗಾರರಲ್ಲಿ ಕ್ಷಮೆಯಾಚಿಸುವೆ. ಪಂದ್ಯಗಳ ಫಿಕ್ಸ್ ಮಾಡಲು ಗುಲಾಮ್ ಬೋದಿ ನಡೆಸಿರುವ ಸಭೆಯಲ್ಲಿ ನಾನು ಭಾಗಿಯಾಗಿದ್ದೆ. ಪಂದ್ಯಗಳನ್ನು ಫಿಕ್ಸ್ ಮಾಡುವ ಇಲ್ಲವೇ ಹಣ ಸ್ವೀಕರಿಸುವ ಉದ್ದೇಶ ನನಗಿರಲಿಲ್ಲ. ಇಂತಹ ಸಭೆಗಳಲ್ಲಿ ಭಾಗವಹಿಸಿರುವುದಕ್ಕೆ ಎಲ್ಲರ ಬಳಿ ಕ್ಷಮೆಯಾಚಿಸುವೆ. ನನ್ನ ವರ್ತನೆಗೆ ವೈಯಕ್ತಿಕವಾಗಿ ಹೊಣೆ ಹೊರುವೆ. ನನಗೆ ಸಿಎಸ್‌ಎ ವಿಧಿಸುವ ಎಲ್ಲ ಶಿಕ್ಷೆಗಳನ್ನು ಸ್ವೀಕರಿಸುವೆ ಎಂದು ಪೀಟರ್ಸನ್ ಹೇಳಿದ್ದಾರೆ.
ಪೀಟರ್ಸನ್ ನಿಷೇಧಕ್ಕೆ ಗುರಿಯಾಗುತ್ತಿರುವ ಜೋಹಾನ್ಸ್‌ಬರ್ಗ್ ಮೂಲದ ಲಯನ್ಸ್ ಫ್ರಾಂಚೈಸಿಯ ಐದನೆ ಆಟಗಾರ. ಮಾಜಿ ಟೆಸ್ಟ್ ವಿಕೆಟ್‌ಕೀಪರ್ ಥಾಮಿ ಸೊಲೆಕಿಲ್ ಆಗಸ್ಟ್‌ನಲ್ಲಿ 12 ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ 34.88ರ ಸರಾಸರಿಯಲ್ಲಿ 2,093 ರನ್ ಗಳಿಸಿರುವ ಪೀಟರ್ಸನ್ 2009-10ರಲ್ಲಿ ಭಾರತ ವಿರುದ್ಧ ಕೋಲ್ಕತಾದಲ್ಲಿ ಆಡಿರುವ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಮಾಜಿ ನಾಯಕ ಗ್ರೇಮ್ ಸ್ಮಿತ್‌ರೊಂದಿಗೆ ಯಶಸ್ವಿ ಆರಂಭಿಕ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಐದು ಶತಕಗಳನ್ನು ಬಾರಿಸಿರುವ ಪೀಟರ್ಸನ್ 2012ರಲ್ಲಿ ಇಂಗ್ಲೆಂಡ್‌ನ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್(182) ದಾಖಲಿಸಿದ್ದರು.
2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಲಯನ್ಸ್ ಹಾಗೂ ಇಂಗ್ಲೆಂಡ್ ಕೌಂಟಿ ಲಂಕಾಶೈರ್‌ನಲ್ಲಿ ಯಶಸ್ವಿ ಆಟಗಾರನಾಗಿದ್ದರು.







