ಫಿಫಾ ರ್ಯಾಂಕಿಂಗ್: ಅರ್ಜೆಂಟೀನ ನಂ.1, ಭಾರತಕ್ಕೆ ಭಡ್ತಿ
ಝೂರಿಚ್, ಡಿ.22: ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನ ತಂಡ ಫಿಫಾ ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆಯುವುದರೊಂದಿಗೆ 2016ರ ಋತುವನ್ನು ನಂ.1 ಸ್ಥಾನದೊಂದಿಗೆ ಕೊನೆಗೊಳಿಸಿದೆ. 2016ರ ಯುರೋ ಫೈನಲ್‌ನಲ್ಲಿ ಸೋತಿದ್ದ ಫ್ರಾನ್ಸ್ ತಂಡ ‘ಮೂವರ್ ಆಫ್ ದಿ ಇಯರ್’ ಆಗಿ ಗುರುತಿಸಿಕೊಂಡಿದೆ.
ಅರ್ಜೆಂಟೀನ ತಂಡ 2016ರ ಸಾಲಿನಲ್ಲಿ 15 ಪಂದ್ಯಗಳನ್ನು ಆಡಿದ್ದು, ಈ ಪೈಕಿ 10ರಲ್ಲಿ ಜಯ ಸಾಧಿಸಿದೆ. ಮೂರರಲ್ಲಿ ಸೋತಿದೆ. ಫ್ರಾನ್ಸ್ ತಂಡ ತವರು ನೆಲದಲ್ಲಿ ನಡೆದ 2016ರ ಯುರೋ ಕಪ್ ಫೈನಲ್‌ನಲ್ಲಿ ಹೆಚ್ಚುವರಿ ಸಮಯದಲ್ಲಿ ಪೋರ್ಚುಗಲ್ ವಿರುದ್ಧ ಶರಣಾಗಿ ರನ್ನರ್ಸ್-ಅಪ್ ಪ್ರಶಸ್ತಿ ಗೆ ತೃಪ್ತಿಪಟ್ಟುಕೊಂಡಿತ್ತು. 17 ಪಂದ್ಯಗಳಲ್ಲಿ 13ರಲ್ಲಿ ಜಯ ಸಾಧಿಸಿ ಅತ್ಯಂತ ಹೆಚ್ಚು ಅಂಕವನ್ನು ಗಳಿಸಿ ವರ್ಷದ ಮೂವರ್ ಆಗಿ ಗಮನ ಸೆಳೆದಿದೆ.
ಭಾರತ ಎರಡು ಸ್ಥಾನ ಭಡ್ತಿ
ಫಿಫಾ ರ್ಯಾಂಕಿಂಗ್‌ನಲ್ಲಿ ಭಾರತ ತಂಡ ಎರಡು ಸ್ಥಾನ ಭಡ್ತಿ ಪಡೆದು 135ನೆ ಸ್ಥಾನಕ್ಕೇರಿದೆ. ಇದು ಕಳೆದ ಆರು ವರ್ಷಗಳಲ್ಲಿ ಭಾರತದ ಉತ್ತಮ ಸಾಧನೆಯಾಗಿದೆ. ಭಾರತ 2009ರಲ್ಲಿ 134ನೆ ಸ್ಥಾನಕ್ಕೇರಿತ್ತು.
ಆಟಗಾರರ ಸಹಾಯವಿಲ್ಲದೆ ಈ ಸಾಧನೆ ಮಾಡಲು ಸಾಧ್ಯವಿಲ್ಲ. ನಮ್ಮದು ಉತ್ತಮ ಆಟಗಾರರ ತಂಡವಾಗಿದೆ. ಭವಿಷ್ಯದಲ್ಲಿ ಶ್ರೇಷ್ಠ ತಂಡವನ್ನು ರಚಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ ಎಂದು ಭಾರತದ ಕೋಚ್ ಸ್ಟೀಫನ್ ಕಾನ್‌ಸ್ಟನ್‌ಟೈನ್ ಹೇಳಿದ್ದಾರೆ.







