ಜೆಜೆಗೆ ‘ವರ್ಷದ ಫುಟ್ಬಾಲ್ ಆಟಗಾರ’ ಪ್ರಶಸ್ತಿ

ಹೊಸದಿಲ್ಲಿ, ಡಿ.22: ಮಿಜೋರಾಂನ ಸ್ಟ್ರೈಕರ್ ಜೆಜೆ ಲಾಲ್‌ಪೆಕ್ಲುವಾ ಎಐಎಫ್‌ಎಫ್ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜೆಜೆ 2016ರ ಸಾಲಿನಲ್ಲಿ ಮೋಹನ್ ಬಗಾನ್ ಹಾಗೂ ಚೆನ್ನೈಯಿನ್ ಎಫ್‌ಸಿ ಹಾಗೂ ಭಾರತೀಯ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ಬುಧವಾರ ಇಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್ ಅವರು ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಿದ್ದು, ಟ್ರೋಫಿ ಹಾಗೂ 2.5 ಲಕ್ಷ ರೂ. ನಗದು ಬಹುಮಾನವನ್ನು ನೀಡಿ ಗೌರವಿಸಿದ್ದಾರೆ.
‘‘ಈ ವರ್ಷ ನನ್ನ ಪಾಲಿಗೆ ಹರ್ಷದಾಯಕವಾಗಿತ್ತು. ಈ ವರ್ಷ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ದಾರಿದೀಪವಾಗಿದೆ. ಪ್ರತಿವರ್ಷವೂ ಈ ಪ್ರಶಸ್ತಿಯನ್ನು ಸ್ವೀಕರಿಸಲು ಬಯಸುವೆನು. ಈ ಪ್ರಶಸ್ತಿ ಜಯಿಸಲು ಭಾರತದ ಪ್ರತಿ ಆಟಗಾರನೂ ಬಯಸುತ್ತಾನೆ. ನಾನು ಎಲ್ಲ ಕೋಚ್‌ಗಳಿಗೆ ಕೃತಜ್ಞತೆ ಸಲ್ಲಿಸಲು ಬಯಸುವೆ. ಎಐಎಫ್‌ಎಫ್ ಬೆಂಬಲದಿಂದ ನಾನು ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಗಿದ್ದು, ಗೋವಾದಲ್ಲಿರುವ ಫುಟ್ಬಾಲ್ ಅಕಾಡೆಮಿ ನನಗೆ ಒಳ್ಳೆಯ ವೇಕದಿಕೆ ಒದಗಿಸಿತ್ತು’’ ಎಂದು ಜೆಜೆ ಪ್ರತಿಕ್ರಿಯಿಸಿದ್ದಾರೆ.
ಸಸ್ಮಿತ್ ಮಲಿಕ್ 2016ರ ಸಾಲಿನ ವರ್ಷದ ಮಹಿಳಾ ಫುಟ್ಬಾಲ್ ತಾರೆ ಪ್ರಶಸ್ತಿಗೆ ಆಯ್ಕೆಯಾದರು. ಒಡಿಶಾ ಮೂಲದ ಆಟಗಾರ್ತಿ ಮಲಿಕ್ ಟ್ರೋಫಿಯ ಜೊತೆಗೆ 2 ಲಕ್ಷ ರೂ. ನಗದು ಬಹುಮಾನವನ್ನು ಗೆದ್ದುಕೊಂಡರು.
‘ವಿಶೇಷವಾಗಿ ಗುರುತಿಸಿಕೊಂಡಿದ್ದಕ್ಕಾಗಿ’ ಗುರುಪ್ರೀತ್ ಸಿಂಗ್ ಸಂಧು ಹಾಗೂ ಯುವೆನಾ ಫೆರ್ನಾಂಡಿಸ್‌ಗೆ ಎಐಎಫ್‌ಎಫ್ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಇಬ್ಬರಿಗೆ ತಲಾ 1 ಲಕ್ಷ ರೂ. ಹಾಗೂ ಟ್ರೋಫಿ ನೀಡಿ ಗೌರವಿಸಿದೆ. ಗುರುಪ್ರೀತ್ ಯುರೋಪ್ ಲೀಗ್‌ನಲ್ಲಿ ಆಡಿರುವ ಭಾರತದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಫೆರ್ನಾಂಡಿಸ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಾರ್ಯನಿರ್ವಹಿಸಿರುವ ಭಾರತದ ಮೊದಲ ಅಧಿಕಾರಿ ಎನಿಸಿಕೊಂಡಿದ್ದರು. ಫೆರ್ನಾಂಡಿಸ್ ಜೋರ್ಡನ್‌ನಲ್ಲಿ ನಡೆದ 2016ರ ಫಿಫಾ ಅಂಡರ್-17 ವಿಶ್ವಕಪ್ ಫೈನಲ್‌ನಲ್ಲಿ ರೆಫರಿ ಆಗಿ ಕಾರ್ಯನಿರ್ವಹಿಸಿದ್ದರು.
ಇದೇ ವೇಳೆ ಫುಟ್ಬಾಲ್ ಹೌಸ್‌ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪ್ರಫುಲ್ ಪಟೇಲ್ ಅವರು ಎಐಎಫ್‌ಎಫ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.







