ಕರೀನಾ ಮಗು ಹೆಸರಿನ ಬಗ್ಗೆ ತಕರಾರು ಹಾಸ್ಯಾಸ್ಪದ: ಕರಣ್ ಜೋಹರ್

ಮುಂಬೈ, ಡಿ.23: ಸೈಫ್ ಅಲಿಖಾನ್- ಕರೀನಾ ಕಪೂರ್ ಅವರ ಮಗುವಿಗೆ ಇಡಲಾಗಿರುವ ಹೆಸರಿನ ಬಗ್ಗೆ ತಕರಾರು ಎತ್ತಿರುವ ವಿಷಯ ಹಾಸ್ಯಾಸ್ಪದವಾಗಿದೆ ಎಂದು ಖ್ಯಾತ ಸಿನೆಮಾ ನಿರ್ಮಾಪಕ ಕರಣ್ ಜೋಹರ್ ಹೇಳಿದ್ದಾರೆ.
ಮಗುವಿಗೆ ಹೆಸರಿಡುವ ವಿಶೇಷ ಅಧಿಕಾರ ತಂದೆ ತಾಯಿಗಿದೆ. ತಮಗಿಷ್ಟ ಬಂದ ಹೆಸರನ್ನು ಅವರು ಇಡಬಹುದು. ಇದನ್ನು ಪ್ರಶ್ನಿಸಲು ಇವರ್ಯಾರು. ಸೈಫ್- ಕರೀನಾ ತಮ್ಮ ಮಗುವಿಗೆ ಇಟ್ಟಿರುವ ಹೆಸರನ್ನು ನಾನು ಬೆಂಬಲಿಸುತ್ತೇನೆ. ಎಂದು ‘ಜಿಯೊ’ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕರಣ್ ಜೋಹರ್ ತಿಳಿಸಿದರು.
ಹೆಸರಿನ ಬಗ್ಗೆ ತಲೆಕೆಡಿಸಿಕೊಳ್ಳದೆ ತಾರಾ ದಂಪತಿಗೆ ಮಗುವಾಗಿರುವ ಬಗ್ಗೆ ನಾವು ಖುಷಿ ಪಡುವ ಎಂದ ಜೋಹರ್, ಅದಾಗ್ಯೂ ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರವಿದೆ ಎಂದು ಹೇಳಿದರು. ಕರೀನಾ ಅವರ ಮಾವ, ಖ್ಯಾತ ಸಿನೆಮಾ ನಟ ರಿಷಿ ಕಪೂರ್ ಅವರೂ ಮಗುವಿನ ಹೆಸರಿನ ಬಗ್ಗೆ ತಕರಾರು ಎತ್ತಿರುವವರನ್ನು ಟ್ವೀಟರ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಡಿ. 20ರಂದು ಕರೀನಾ ಗಂಡು ಮಗುವಿಗೆ ಜನ್ಮನೀಡಿದ್ದು ಮಗುವಿಗೆ ತೈಮೂರ್ ಅಲಿಖಾನ್ ಪಟೌಡಿ ಎಂದು ಹೆಸರಿಡಲಾಗಿತ್ತು. ಆದರೆ ಈ ಹೆಸರಿನ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಕರಾರು ಎಬ್ಬಿಸಿದ್ದರು.







