ವಿಮಾನ ನಿಲ್ದಾಣಗಳಲ್ಲಿ ಶೀಘ್ರವೇ ಜೈವಿಕ ಭದ್ರತಾ ತಪಾಸಣೆ ಸಾಧ್ಯತೆ

ಹೊಸದಿಲ್ಲಿ, ಡಿ.23: ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆಗಾಗಿ ವಿಮಾನ ಪ್ರಯಾಣಿಕರು ಜೈವಿಕ ವಿವರ ಉಪಯೋಗಿಸುವುದು ಶೀಘ್ರವೇ ಸಾಧ್ಯವಾಗಲಿದೆ. ಈ ಪ್ರಾಯೋಗಿಕ ಯೋಜನೆಗೆ ‘ಉತ್ತಮ ಪ್ರತಿಕ್ರಿಯೆ’ ದೊರೆತ ಬಳಿಕ ಸರಕಾರವು ಅಂತಹ ವ್ಯವಸ್ಥೆಯನ್ನು ಅಳವಡಿಸುವತ್ತ ಕಾರ್ಯೋನ್ಮುಖವಾಗಿದೆ.
ಈ ಬಗ್ಗೆ ಪ್ರಬಲ ಸೂಚನೆ ನೀಡಿರುವ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು, ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸುವುದು ಉತ್ತಮ ಯೋಜನೆಯಂತೆ ತೋರುತ್ತಿದೆ ಎಂದಿದ್ದಾರೆ.
ಆಯ್ದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಕೈ ಚೀಲಗಳಿಗೆ ಟ್ಯಾಗ್ ಅಳವಡಿಸುವ ಪದ್ಧತಿಯನ್ನು ಅಧಿಕಾರಿಗಳು ಕೈ ಬಿಡುತ್ತಿರುವ ಹಾಗೂ ವಿಮಾನಯಾನ ಭದ್ರತಾ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿ ಹಾಗೂ ಕಡಿಮೆ ತ್ರಾಸದಾಯಕವನ್ನಾಗಿಸುವ ಪ್ರಯತ್ನ ನಡೆಯುತ್ತಿರುವ ವೇಳೆಯೇ ಈ ಹೊಸ ಪದ್ಧತಿ ಬರಲಿದೆ.
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಬಯೋಮೆಟ್ರಿಕ್ ಪದ್ಧತಿಯ ಪ್ರಯೋಗ ನಡೆಸಲಾಗಿದೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಭದ್ರತೆಯ ದೃಷ್ಟಿಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಉತ್ತಮವಾಗಿರುವಂತೆ ತೋರುತ್ತಿದೆಯೆಂದು ಅಶೋಕ್ ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.







