ಇಟಲಿಯಲ್ಲಿ ಬರ್ಲಿನ್ ಟ್ರಕ್ ದಾಳಿ ಆರೋಪಿಯ ಹತ್ಯೆ
.jpg)
ರೋಮ್ (ಇಟಲಿ), ಡಿ. 23: ಬರ್ಲಿನ್‌ನ ಕ್ರಿಸ್ಮಸ್ ಮಾರುಕಟ್ಟೆಯ ಮೇಲೆ ಟ್ರಕ್ ದಾಳಿ ನಡೆಸಿರುವನೆಂದು ನಂಬಲಾದ ವ್ಯಕ್ತಿಯೋರ್ವ ಉತ್ತರ ಇಟಲಿಯ ನಗರ ಮಿಲಾನ್‌ನಲ್ಲಿ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದಾನೆ ಎಂದು ಪೊಲೀಸ್ ಮೂಲವೊಂದು ರಾಯ್ಟರ್ಸ್‌ಗೆ ತಿಳಿಸಿದೆ.
ಟ್ಯುನೀಶಿಯದ 24 ವರ್ಷದ ಆನಿಸ್ ಆಮ್ರಿ ಮಂಗಳವಾರ ಬರ್ಲಿನ್ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಜನರ ಮೇಲೆ ಟ್ರಕ್ ಹರಿಸಿದ ಬಳಿಕ ನಾಪತ್ತೆಯಾಗಿದ್ದನು.ಆ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದರು.
ಮಿಲಾನ್‌ನ ಸೆಸ್ಟೊ ಸಾನ್ ಜಿಯೊವನ್ನಿ ಉಪನಗರದಲ್ಲಿ ಶುಕ್ರವಾರ ಮುಂಜಾನೆ ಸುಮಾರು 3 ಗಂಟೆಗೆ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಗುಂಡಿನ ಚಕಮಕಿ ನಡೆದಿದೆ.ಗುರುತಿನ ಚೀಟಿ ತೋರಿಸುವಂತೆ ಪೊಲೀಸರು ಶಂಕಿತನಿಗೆ ಸೂಚಿಸಿದಾಗ ಆತ ತನ್ನ ಬೆನ್ನಿನ ಚೀಲದಿಂದ ಪಿಸ್ತೂಲೊಂದನ್ನು ಹೊರೆಗೆಳೆದನು. ಬಳಿಕ ನಡೆದ ಗುಂಡಿನ ವಿನಿಮಯದಲ್ಲಿ ಆತನನ್ನು ಕೊಲ್ಲಲಾಯಿತು.ಓರ್ವ ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
Next Story





