ಎಬೋಲಾ ರೋಗಕ್ಕೆ ಸುರಕ್ಷಿತ, ಪರಿಣಾಮಕಾರಿ ಲಸಿಕೆ : ವಿಶ್ವ ಆರೋಗ್ಯ ಸಂಸ್ಥೆ

ಜಿನೇವ, ಡಿ. 23: ಗಿನಿ ದೇಶದಲ್ಲಿ ಮಾನವರ ಮೇಲೆ ನಡೆದ ಮಹತ್ವದ ಪರೀಕ್ಷೆಯಲ್ಲಿ ಎಬೋಲಾ ಲಸಿಕೆ 100 ಶೇಕಡ ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇಂದು ಹೇಳಿದೆ.
ಈ ಹಿನ್ನೆಲೆಯಲ್ಲಿ, ಭವಿಷ್ಯದಲ್ಲಿ ಮಾರಕ ರೋಗ ತಲೆದೋರಿದರೆ ಅದನ್ನು ನಿಭಾಯಿಸಲು ವೈದ್ಯರಿಗೆ ಸುರಕ್ಷಿತ ಹಾಗೂ ಸಮರ್ಥ ಅಸ್ತ್ರವೊಂದು ದೊರೆತಂತಾಗಿದೆ.
‘ಆರ್‌ವಿಎಸ್‌ವಿ-ಝಡ್‌ಇಬಿಒವಿ’ ಎಂಬ ಹೆಸರಿನ ಲಸಿಕೆಗೆ ಸಂಬಂಧಿಸಿ ಗಿನಿಯಲ್ಲಿ ಕಳೆದ ವರ್ಷ 11,841 ಮಂದಿಯನ್ನು ಅಧ್ಯಯನಕ್ಕೆ ಗುರಿಪಡಿಸಲಾಗಿತ್ತು. ಆ ಪೈಕಿ 5,837 ಮಂದಿಗೆ ಲಸಿಕೆ ನೀಡಲಾಗಿತ್ತು. ಲಸಿಕೆ ನೀಡಿದ 10 ಅಥವಾ ಅದಕ್ಕೂ ಹೆಚ್ಚಿನ ದಿನಗಳ ಬಳಿಕ ಅವರಲ್ಲಿ ಎಬೋಲಾ ರೋಗ ಮತ್ತೆ ಕಾಣಿಸಿಕೊಂಡಿಲ್ಲ ಎಂಬುದಾಗಿ ‘ದ ಲ್ಯಾನ್ಸೆಟ್’ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯೊಂದು ತಿಳಿಸಿದೆ.
ಅದೇ ವೇಳೆ, ಲಸಿಕೆ ಪಡೆಯದವರ ಪೈಕಿ 23 ಮಂದಿಯಲ್ಲಿ ಎಬೋಲಾ ರೋಗ ಕಾಣಿಸಿಕೊಂಡಿತ್ತು.
ಪ್ರಯೋಗವನ್ನು ಗಿನಿಯ ಆರೋಗ್ಯ ಸಚಿವಾಲಯ ಮತ್ತು ಇತರ ಅಂತಾರಾಷ್ಟ್ರೀಯ ಭಾಗೀದಾರರ ಸಹಯೋಗದೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ಕೈಗೆತ್ತಿಕೊಂಡಿತ್ತು.





