ನಮ್ಮನ್ನು ಬಿಟ್ಟು ಯಾರೂ ಟ್ರಂಪ್ ಜಯವನ್ನು ನಿರೀಕ್ಷಿಸಿರಲಿಲ್ಲ: ಪುಟಿನ್

ಮಾಸ್ಕೊ, ಡಿ. 23: ಅಮೆರಿಕದ ನಾಡಿಬಡಿತವನ್ನು ಸರಿಯಾಗಿ ಗ್ರಹಿಸಿದ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರು, ಆದರೆ, ಅವರ ಯಶಸ್ಸಿನ ಬಗ್ಗೆ ನಮ್ಮನ್ನು ಹೊರತುಪಡಿಸಿ ಬೇರೆ ಯಾರಿಗೂ ನಂಬಿಕೆಯಿರಲಿಲ್ಲ ಎಂದು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶುಕ್ರವಾರ ಹೇಳಿದ್ದಾರೆ.
‘‘ಅಮೆರಿಕದ ನಿಯೋಜಿತ ಅಧ್ಯಕ್ಷರು ಸಮಾಜದ ಮನಸ್ಸನ್ನು ಸರಿಯಾಗಿ ಗ್ರಹಿಸಿದರು ಹಾಗೂ ಆ ನಿಟ್ಟಿನಲ್ಲಿ ಕೆಲಸ ಮಾಡಿದರು ಹಾಗೂ ಅದರಲ್ಲಿ ಯಶಸ್ಸು ಪಡೆದರು. ಆದರೆ, ನಮ್ಮನ್ನು ಹೊರತುಪಡಿಸಿ ಯಾರೂ ಅವರ ವಿಜಯವನ್ನು ನಿರೀಕ್ಷಿಸಿರಲಿಲ್ಲ’’ ಎಂದು ತನ್ನ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪುಟಿನ್ ನುಡಿದರು.
ಕೆಲವು ಅಮೆರಿಕನ್ನರು ನಿಮ್ಮನ್ನು ಬೆಂಬಲಿಸುತ್ತಾರೆ ಎಂಬ ಬಗ್ಗೆ ಏನು ಹೇಳುವಿರಿ ಎಂಬ ಪ್ರಶ್ನೆಗೆ, ‘‘ಅದನ್ನು ನಾನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ಭಾರೀ ಸಂಖ್ಯೆಯ ರಿಪಬ್ಲಿಕನ್ ಮತದಾರರು ರಶ್ಯದ ಅಧ್ಯಕ್ಷರನ್ನು ಬೆಂಬಲಿಸುತ್ತಾರೆ’’ ಎಂದರು.
‘‘ಜಗತ್ತು ಹೇಗಿರಬೇಕು ಎಂಬ ವಿಷಯದಲ್ಲಿ ಹಾಗೂ ನಮ್ಮ ಸಾಮಾನ್ಯ ಅಪಾಯಗಳು ಮತ್ತು ಸಮಸ್ಯೆಗಳ ಬಗ್ಗೆ ಹೆಚ್ಚಿನ ಸಂಖ್ಯೆಯ ಅಮೆರಿಕನ್ನರು ರಶ್ಯದ ಅಭಿಪ್ರಾಯವನ್ನೇ ಹೊಂದಿದ್ದಾರೆ ಎನ್ನುವುದನ್ನು ಇದು ತೋರಿಸುತ್ತದೆ’’ ಎಂದು ಪುಟಿನ್ ನುಡಿದರು.







