ಅಮೆರಿಕ ಪರಮಾಣು ಸಾಮರ್ಥ್ಯವನ್ನು ಬಲಪಡಿಸಲಿ : ಡೊನಾಲ್ಡ್ ಟ್ರಂಪ್ ಕರೆ

ವಾಶಿಂಗ್ಟನ್, ಡಿ. 23: ಪರಮಾಣು ಅಸ್ತ್ರಗಳ ವಿಷಯದಲ್ಲಿ ಜಗತ್ತಿಗೆ ಜ್ಞಾನೋದಯವಾಗುವವರೆಗೆ ಅಮೆರಿಕ ತನ್ನ ಪರಮಾಣು ಸಾಮರ್ಥ್ಯವನ್ನು ಭಾರೀ ಪ್ರಮಾಣದಲ್ಲಿ ಬಲಪಡಿಸಬೇಕು ಹಾಗೂ ವಿಸ್ತರಿಸಬೇಕು ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ದಿಢೀರ್ ಕರೆ ನೀಡಿದ್ದಾರೆ.
ತನ್ನ ದೇಶದ ಪರಮಾಣು ಸಾಮರ್ಥ್ಯವನ್ನು ಬಲಪಡಿಸುವುದು 2017ರಲ್ಲಿ ರಶ್ಯದ ಮುಖ್ಯ ಸೇನಾ ಗುರಿಯಾಗಿರಬೇಕು ಎಂಬುದಾಗಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ ಗಂಟೆಗಳ ಬಳಿಕ ಟ್ರಂಪ್ ಟ್ವಿಟರ್‌ನಲ್ಲಿ ತನ್ನ ಅಭಿಪ್ರಾಯವನ್ನು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಒಂದು ದಿನ ಮುಂಚೆ ನಿಯೋಜಿತ ಅಧ್ಯಕ್ಷರು ಪೆಂಟಗನ್‌ನ ಉನ್ನತ ಅಧಿಕಾರಿಗಳು ಮತ್ತು ರಕ್ಷಣಾ ಗುತ್ತಿಗೆದಾರರನ್ನು ಭೇಟಿಯಾಗಿದ್ದರು.ಈ ನಿಟ್ಟಿನಲ್ಲಿ ಅಮೆರಿಕ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಾನು ಬಯಸುತ್ತೇನೆ ಅಥವಾ ತಾನು ಈ ವಿಷಯವನ್ನು ಈಗ ಯಾಕೆ ಪ್ರಸ್ತಾಪಿಸಿದೆ ಎಂಬ ಬಗ್ಗೆ ಟ್ರಂಪ್ ಟ್ವೀಟ್‌ನಲ್ಲಿ ವಿವರಣೆ ನೀಡಿಲ್ಲ.ಅವರು ಈಗ ಫ್ಲೋರಿಡದಲ್ಲಿರುವ ತನ್ನ ಅರಮನೆ ಸದೃಶ ಖಾಸಗಿ ಕ್ಲಬ್ ಒಂದರಲ್ಲಿ ರಜೆ ಕಳೆಯುತ್ತಿದ್ದಾರೆ.







