ಅಲೆಪ್ಪೊ ತೆರವು ಕಾರ್ಯಾಚರಣೆ ಪೂರ್ಣ: ರೆಡ್‌ಕ್ರಾಸ್
6 ವರ್ಷಗಳ ಬಳಿಕ ಯುದ್ಧಗ್ರಸ್ತ ನಗರ ಬಶರ್ ವಶಕ್ಕೆ

ಜಿನೇವ, ಡಿ. 23: ಸಿರಿಯದ ಪೂರ್ವ ಅಲೆಪ್ಪೊದಿಂದ ಸಾವಿರಾರು ಜನರನ್ನು ಹಾಗೂ ಇಡ್ಲಿಬ್ ಪ್ರಾಂತದ ಎರಡು ಶಿಯಾ ಗ್ರಾಮಗಳ ಜನರನ್ನು ಸ್ಥಳಾಂತರಿಸುವ ಒಂದು ವಾರ ಅವಧಿಯ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿ (ಐಸಿಆರ್‌ಸಿ) ಗುರುವಾರ ತಿಳಿಸಿದೆ.
‘‘ಸ್ಥಳಾಂತರಗೊಳ್ಳಲು ಬಯಸಿದ ಎಲ್ಲ ನಾಗರಿಕರು ಹಾಗೂ ಗಾಯಗೊಂಡವರು ಮತ್ತು ಹೋರಾಟಗಾರರನ್ನು ತೆರವುಗೊಳಿಸಲಾಗಿದೆ’’ ಎಂದು ಐಸಿಆರ್‌ಸಿ ವಕ್ತಾರೆ ಕ್ರಿಸ್ಟಾ ಆರ್ಮ್‌ಸ್ಟ್ರಾಂಗ್ ಹೇಳಿದರು.
ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯು ಥರಗುಟ್ಟುವ ಚಳಿ ವಾತಾವರಣದಲ್ಲಿ ತೆರವು ಕಾರ್ಯಾಚರಣೆಯ ಹೊಣೆಯನ್ನು ಹೊತ್ತುಕೊಂಡಿತ್ತು. ಈ ಕಾರ್ಯಾಚರಣೆಯಲ್ಲಿ ಅದಕ್ಕೆ ಸಿರಿಯನ್ ಅರಬ್ ರೆಡ್ ಕ್ರೆಸೆಂಟ್ ನೆರವು ನೀಡಿತ್ತು.
ಜರ್ಝರಿತ ನಗರ ಅಲೆಪ್ಪೊದಿಂದ ಬಂಡುಕೋರರ ಕೊನೆಯ ತಂಡ ಹೊರ ಹೋದ ಬಳಿಕ ಗುರುವಾರ ಅಲೆಪ್ಪೊದ ಸಂಪೂರ್ಣ ನಿಯಂತ್ರಣವನ್ನು ತಾನು ತೆಗೆದುಕೊಂಡಿರುವುದಾಗಿ ಸಿರಿಯದ ಸೇನೆ ಹೇಳಿದೆ. ಇದು ಸುಮಾರು ಆರು ವರ್ಷಗಳ ಆಂತರಿಕ ಯುದ್ಧದಲ್ಲಿ ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸಾದ್‌ಗೆ ಲಭಿಸಿದ ಅತ್ಯಂತ ದೊಡ್ಡ ವಿಜಯವಾಗಿದೆ.
3.12 ಲಕ್ಷ ಜನರ ಸಾವು, 48 ಲಕ್ಷ ನಿರಾಶ್ರಿತರು
ಸಿರಿಯದ ಕೆಲವು ಭಾಗಗಳ ಮೇಲೆ ಬಂಡುಕೋರರು ಹೊಂದಿದ್ದ ನಿಯಂತ್ರಣ ಗುರುವಾರ ಕೊನೆಗೊಂಡಿದೆ.
ಈ ಆರು ವರ್ಷಗಳ ಅವಧಿಯ ಸಂಘರ್ಷದಲ್ಲಿ 3.12 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ, ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆ ನಿರ್ವಸಿತವಾಗಿದೆ ಹಾಗೂ ದೇಶದ ಹೆಚ್ಚಿನ ಪ್ರದೇಶಗಳು ಜರ್ಝರಿತವಾಗಿವೆ.
2011ರ ಮಾರ್ಚ್‌ನಲ್ಲಿ ಸರಕಾರ ವಿರೋಧಿ ಪ್ರತಿಭಟನೆಗಳು ನಡೆಯುವುದರೊಂದಿಗೆ ಸಿರಿಯದಲ್ಲಿ ಸಂಘರ್ಷ ಆರಂಭಗೊಂಡಿತ್ತು. ಮೃತಪಟ್ಟವರಲ್ಲಿ 16,000 ಮಕ್ಕಳು ಸೇರಿದಂತೆ 90,000 ನಾಗರಿಕರು ಇದ್ದಾರೆ ಎಂದು ಬ್ರಿಟನ್‌ನಲ್ಲಿ ನೆಲೆ ಹೊಂದಿರುವ ಸಿರಿಯ ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ.







