ಸುಳ್ಯದಲ್ಲಿ ಅಂತರಾಷ್ಟ್ರೀಯ ರೈತರ ದಿನಾಚರಣೆ : ಐವರು ರೈತರಿಗೆ ಶ್ರೇಷ್ಠ ಕೃಷಿ ಪ್ರಶಸ್ತಿ ಪ್ರದಾನ

ಸುಳ್ಯ, ಡಿ.23 : ದ.ಕ. ಜಿಲ್ಲಾ ಪಂಚಾಯತ್, ಕೃಷಿ ಇಲಾಖೆಗಳ ಆಶ್ರಯದಲ್ಲಿ ಅಂತರಾಷ್ಟ್ರೀಯ ರೈತರ ದಿನಾಚರಣೆ ಹಾಗೂ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ ಕೃಷಿ ಇಲಾಖೆ ಸಭಾಂಗಣದಲ್ಲಿ ನಡೆಯಿತು.
ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ಎ.ಪಿ.ಎಂ.ಸಿ. ಅಧ್ಯಕ್ಷ ಜಾಕೆ ಮಾಧವ ಗೌಡ, ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಕೆಪೆಕ್ ನಿರ್ದೇಶಕ ಪಿ.ಎ.ಮಹಮ್ಮದ್, ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸೂರ್ಯನಾರಾಯಣ ಭಟ್ ಭಾಗವಹಿಸಿದ್ದರು.
2016-17ನೇ ಸಾಲಿನಲ್ಲಿ ಆತ್ಮ ಯೋಜನೆಯಡಿಯಲ್ಲಿ ಕೊಡಮಾಡುವ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.
ಸಮಗ್ರ ಕೃಷಿ ಪ್ರಶಸ್ತಿಯನ್ನು ಶ್ರೀಮತಿ ಪ್ರೇಮ ವಸಂತ್ ಭಟ್ ತೊಡಿಕಾನ, ಸಾವಯವ ಕೃಷಿ ವಿಭಾಗದಲ್ಲಿ ರಮಾನಂದ ರೈ ಪಿ.ಯು. ಮುರುಳ್ಯ, ಜೇನು ಕೃಷಿಕ ವಿಭಾಗದಲ್ಲಿ ಉಬರಡ್ಕದ ಪುಟ್ಟಣ್ಣ ಗೌಡ ಕೆ, ಕೋಳಿ ಸಾಕಾಣಿಕೆ ಕೃಷಿಯಲ್ಲಿ ಸನತ್ ಮುಳುಗಾಡುರಿಗೆ ತಾಲೂಕು ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಹೈನುಗಾರಿಕೆಯಲ್ಲಿ ಪ್ರೇಮಲತ ರೈ ಬೆಳ್ಳಾರೆಯವರು ಪ್ರಶಸ್ತಿ ಪಡೆದಿದ್ದಾರೆ.
ಇದೇ ಸಂದರ್ಭದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕ ಮೃತಪಟ್ಟ ಬಳ್ಪದ ಮೋನಪ್ಪ ಹಾಗೂ ಎಡಮಂಗಲದ ಬಾಲಕೃಷ್ಣ ಗೌಡ ಕುಟುಂಬಕ್ಕೆ ತಲಾ ಒಂದು ಲಕ್ಷದ ಚೆಕ್‌ನ್ನು ವಿತರಿಸಲಾಯಿತು. ಅಲ್ಲದೆ ಮಣ್ಣು ಆರೋಗ್ಯ ಚೀಟಿಯನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಜಿ.ಪಾಲಿಚಂದ್ರ ಸ್ವಾಗತಿಸಿ, ಗೀತಾ ಸನ್ಮಾನಿತರನ್ನು ಪರಿಚಯಿಸಿದರು. ಪ್ರಾಸ್ತಾವಿಕ ಮಾತನಾಡಿದರು.
ಕೃಷಿ ತಾಂತ್ರಿಕ ಅಧಿಕಾರಿ ಮೋಹನ್ ನಂಗಾರು ಕಾರ್ಯಕ್ರಮ ನಿರೂಪಿಸಿದರು.







