71 ಲಕ್ಷ ರೂ. ಮೌಲ್ಯದ ವಾಹನಗಳ ವಶ: 15ಕ್ಕೂ ಅಧಿಕ ಜನರ ವಿರುದ್ಧ ಕೇಸ್
ಶಿವಮೊಗ್ಗ, ಡಿ. 23: ನಗರದ ಹೊರವಲಯ ಗೆಜ್ಜೇನಹಳ್ಳಿ ಗ್ರಾಮದ ಖಾಸಗಿ ಜಮೀನುಗಳಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಕಲ್ಲು ಗಣಿಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ, ಲಕ್ಷಾಂತರ ರೂ. ಮೌಲ್ಯದ ವಾಹನಗಳು ಸೇರಿದಂತೆ ಸಲಕರಣೆಗಳನ್ನು, ವಸ್ತುಗಳನ್ನು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ. ಅಧಿಕಾರಿಗಳ ದಾಳಿಯ ವೇಳೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳಗಳಲ್ಲಿದ್ದ 1 ಕಂಪ್ರೆಸ್ಸರ್, 8 ಟ್ರ್ಯಾಕ್ಟರ್, 1 ಹಿಟಾಚಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಾಹನಗಳ ಮೌಲ್ಯ 71 ಲಕ್ಷ ರೂ.ಎಂದು ಅಂದಾಜಿಸಲಾಗಿದ್ದು, ಸ್ಥಳದಲ್ಲಿ ದಾಸ್ತಾನು ಮಾಡಲಾಗಿದ್ದ ಜಲ್ಲಿ ಕಲ್ಲಿನ ಮೌಲ್ಯ ಎಷ್ಟೆಂಬುವುದನ್ನು ಇನ್ನಷ್ಟೇ ಲೆಕ್ಕ ಹಾಕಬೇಕಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನಯ ಇಲಾಖೆ ಮೂಲಗಳು ತಿಳಿಸಿವೆ. ಹಿರಿಯ ಭೂ ವಿಜ್ಞಾನಿ ಸಿ.ಆರ್.ರಶ್ಮಿ ಮಾರ್ಗದರ್ಶನದಲ್ಲಿ ಭೂ ವಿಜ್ಞಾನಿ ಎನ್.ಎಂ.ವಿಂಧ್ಯಾ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಿರಿಯ ಅಭಿಯಂತರ ಶಿವಶಂಕರ್ ಮತ್ತವರ ಸಿಬ್ಬಂದಿ ರವಿಕಿರಣ್, ಸೈಯದ್ ಹುಸೈನ್ ಭಾಗಿಯಾಗಿದ್ದರು.





