ಕಚೇರಿ ಸಿಬ್ಬಂದಿ ಮೇಲೆ ಡಿಎಫ್‌ಒ ಹಲ್ಲೆ: ಆರೋಪ
ಕ್ರಮ ಜರಗಿಸಲು ಒತ್ತಾಯಿಸಿ ಸಾರ್ವಜನಿಕರಿಂದ ಧರಣಿ
.jpg)
ಸಾಗರ, ಡಿ.23: ಇಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುವ ದಿನಗೂಲಿ ನೌಕರ ತಿಮ್ಮಪ್ಪ ಅವರ ಮೇಲೆ ಡಿಎಫ್‌ಒ ಮೋಹನ್ ಗಂಗೊಳ್ಳಿ ಹಲ್ಲೆ ನಡೆಸಿರುವುದರ ವಿರುದ್ಧ ಕ್ರಮ ಜರಗಿಸುವಂತೆ ಒತ್ತಾಯಿಸಿ ಶುಕ್ರವಾರ ಸಾರ್ವಜನಿಕರು ಧರಣಿ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅರಣ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ತುಕಾರಾಮ ಬಿ. ಶಿರವಾಳ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಗಂಗೊಳ್ಳಿ ಅವರು ಹದ್ದುಮೀರಿ ವರ್ತಿಸುತ್ತಿದ್ದು, ಇವರ ಸರ್ವಾಧಿಕಾರಿ ಧೋರಣೆಯಿಂದ ಅವರ ಕೈಕೆಳಗಿನ ಅಧಿಕಾರಿಗಳು, ನೌಕರರು ನೆಮ್ಮದಿಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ತಮ್ಮ ಮಾತು ಕೇಳದ ಅಧಿಕಾರಿ ನೌಕರರ ಮೇಲೆ ಗಂಗೊಳ್ಳಿಯವರು ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ದಿನಗೂಲಿ ನೌಕರ ತಿಮ್ಮಪ್ಪ ಅವರ ಮೇಲೆ ವಿನಾಕಾರಣ ಕೋಪಗೊಂಡ ಮೋಹನ್ ಗಂಗೊಳ್ಳಿಯವರು ನೌಕರನನ್ನು ಎಳೆದಾಡಿ, ಹಲ್ಲೆ ನಡೆಸಿದ್ದಾರೆ. ಇದರಿಂದ ರಕ್ತದೊತ್ತಡಕ್ಕೆ ಒಳಗಾದ ತಿಮ್ಮಪ್ಪ ಪ್ರಜ್ಞೆ ತಪ್ಪಿಬಿದ್ದಿದ್ದು, ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂತಹ ದಬ್ಬಾಳಿಕೆ ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಮೋಹನ್ ಗಂಗೊಳ್ಳಿ ವಾರದಲ್ಲಿ ಮೂರು ದಿನ ಬೆಂಗಳೂರಿನಲ್ಲಿ ಇರುತ್ತಿದ್ದು, ತಮ್ಮ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ದೂರಿದರು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೆಸರು ಹೇಳಿಕೊಂಡು ಮೋಹನ್ ಗಂಗೊಳ್ಳಿ ವ್ಯಾಪಕ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ.
ಸಚಿವರು ಇಂತಹವರನ್ನು ದೂರ ಇರಿಸಬೇಕು. ಇನ್ನು ಒಂದು ವಾರದಲ್ಲಿ ಮೋಹನ್ ಗಂಗೊಳ್ಳಿ ಅವರನ್ನು ಇಲ್ಲಿಂದ ವರ್ಗಾವಣೆ ಮಾಡದೆ ಹೋದಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಪಂ ಸದಸ್ಯ ಆರ್.ಸಿ.ಮಂಜುನಾಥ್, ತಾಪಂ ಸದಸ್ಯರಾದ ರಘುಪತಿ ಭಟ್, ದೇವೇಂದ್ರಪ್ಪ, ಗ್ರಾಪಂ ಸದಸ್ಯ ಭೀಮನೇರಿ ಆನಂದ್, ನಾರಾಯಣಪ್ಪ, ಪ್ರಮುಖರಾದ ರಾಮು ಸೂರನಗದ್ದೆ, ರಾಜೇಂದ್ರ ಆವಿನಹಳ್ಳಿ, ಹುಚ್ಚಪ್ಪ, ಗಣಪತಿ ಮಂಡಗಳಲೆ, ಅಣ್ಣಪ್ಪ ಭೀಮನೇರಿ, ಅರುಣ ಸೂರನಗದ್ದೆ, ಧರ್ಮ ಶಿರವಾಳ ಇನ್ನಿತರರು ಹಾಜರಿದ್ದರು. ಡಿಎಫ್‌ಒ ವಿರುದ್ಧ ದೂರು ದಾಖಲು
ಇಲ್ಲಿನ ಅರಣ್ಯ ಇಲಾಖೆಯ ದಿನಗೂಲಿ ನೌಕರ ತಿಮ್ಮಪ್ಪ ಎಂಬವರ ಮೇಲೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಗಂಗೊಳ್ಳಿ ಹಲ್ಲೆ ನಡೆಸಿರುವುದಕ್ಕೆ ಸಂಬಂಧಪಟ್ಟಂತೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಯಿಂದ ತೀವ್ರ ಗಾಬರಿಗೊಂಡಿದ್ದ ತಿಮ್ಮಪ್ಪ ಅವರು ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಮ್ಮ ಮೇಲೆ ನಡೆದ ಹಲ್ಲೆಗೆ ಸಂಬಂಧಪಟ್ಟಂತೆ ನಗರ ಠಾಣೆಗೆ ಗುರುವಾರ ದೂರು ನೀಡಿ, ನ್ಯಾಯ ದೊರಕಿಸುವಂತೆ ಒತ್ತಾಯಿಸಿದ್ದಾರೆ. ಹಲ್ಲೆ ನಡೆಸಿಲ್ಲ ಡಿಎಫ್‌ಒಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಗಂಗೊಳ್ಳಿ ನಾನು ತಿಮ್ಮಪ್ಪ ಅವರ ಮೇಲೆ ಹಲ್ಲೆ ನಡೆಸಿಲ್ಲ. ನನ್ನ ಅಧಿಕಾರದ ವ್ಯಾಪ್ತಿ ನನಗೆ ಗೊತ್ತಿದೆ. ಸಣ್ಣ ನೌಕರನ ಮೇಲೆ ಹಲ್ಲೆ ನಡೆಸುವಷ್ಟು ಕೀಳುಮಟ್ಟಕ್ಕೆ ನಾನು ಇಳಿಯುವುದಿಲ್ಲ. ತಿಮ್ಮಪ್ಪ ಅವರು ಸರಿಯಾಗಿ ಕರ್ತವ್ಯ ಮಾಡದೆ, ನಿರ್ಲಕ್ಷ್ಯ ತೋರಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ತಿಮ್ಮಪ್ಪ ಅವರನ್ನು ಬೇರೆ ಕಡೆ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದೆ. ಬಹುಶ ಇದು ನನ್ನ ವಿರುದ್ಧ ದೂರು ನೀಡಲು ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ. ಹಲ್ಲೆಯಿಂದ ಪ್ರಜ್ಞೆ ತಪ್ಪಿ ಬಿದ್ದ ತಿಮ್ಮಪ್ಪತಿಮ್ಮಪ್ಪ ಅವರು ದೂರಿನಲ್ಲಿ, ತಾವು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೋಹನ್ ಗಂಗೊಳ್ಳಿಯವರು ಬಂದು ನೀನು ನನ್ನ ಕೊಠಡಿಯ ಎದುರು ಯಾಕೆ ಕೆಲಸ ಮಾಡುತ್ತಿದ್ದೀಯಾ. ನಿನಗೆ ಇಲ್ಲಿ ಕೆಲಸ ಮಾಡಬೇಡ ಎಂದು ಹೇಳಿರಲಿಲ್ಲವೇ ಎಂದು ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ನಾನು ರಕ್ತದೊತ್ತಡಕ್ಕೆ ಸಿಲುಕಿ ಪ್ರಜ್ಞೆ ತಪ್ಪಿ ಬಿದ್ದಾಗ ಸ್ಥಳೀಯರು ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಗೆ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಭೀಮನೇರಿ ಗ್ರಾಪಂ ಸದಸ್ಯ ಭೀಮನೇರಿ ಆನಂದ್, ಅರಣ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿ.ತುಕಾರಾಮ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ ಇನ್ನಿತರರು ಭೇಟಿ ನೀಡಿ ತಿಮ್ಮಪ್ಪ ಅವರ ಆರೋಗ್ಯ ವಿಚಾರಿಸಿದ್ದಾರೆ.







