ನಿವೇಶನಕ್ಕಾಗಿ ಕೂಲಿ ಕಾರ್ಮಿಕರಿಂದ ತಾತ್ಕಾಲಿಕ ಶೆಡ್ ನಿರ್ಮಿಸಿ ಪ್ರತಿಭಟನೆ
_0.png)
ಚಿಕ್ಕಮಗಳೂರು, ಡಿ.23: ಕೊಪ್ಪ ತಾಲೂಕಿನ ಸೀಗೋಡು ಗ್ರಾಮದಲ್ಲಿ ನಿವೇಶನಕ್ಕಾಗಿ ಕೂಲಿ ಕಾರ್ಮಿಕರು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ಪ್ರತಿಭಟನೆಯ ವೇಳೆ ಪೊಲೀಸರು ಬಲವಂತವಾಗಿ ಅವರನ್ನು ಜಾಗದಿಂದ ತೆರವು ಮಾಡಿರುವ ಘಟನೆ ನಡೆದಿದೆ.
ಕೊಪ್ಪತಾಲೂಕಿನ ಸೀಗೋಡು ಗ್ರಾಮದ ಅಕ್ಕಪಕ್ಕದ ತೋಟಗಳಲ್ಲಿ, ಕಾಫಿ ಎಸ್ಟೇಟ್‌ಗಳಲ್ಲಿ ಕೂಲಿ ಕೆಲಸ ಮಾಡುವ ಬಡ ಕೂಲಿ ಕಾರ್ಮಿಕರಿಗೆ ಬದುಕು ಸಾಗಿಸಲು ಸೂರಿನಾಸರೆ ಇಲ್ಲದೆ ಪ್ರತಿನಿತ್ಯ ಸಂಕಷ್ಟದಲ್ಲಿದ್ದಾರೆ. ಅಂತವರು ಶಾಶ್ವತ ಸೂರಿಗಾಗಿ ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಒಟ್ಟು ಹದಿನೈದು ಗುಡಿಸಲುಗಳನ್ನು ನಿರ್ಮಿಸಿ ಪ್ರತಿಭಟನೆ ಮಾಡುತ್ತಿದ್ದಾಗ ಕಳೆದ ಎರಡು ದಿನಗಳ ಹಿಂದೆ ಆದಿವಾಸಿ ಹಿತರಕ್ಷಣಾ ಸಮಿತಿಯ ಕೌಳಿ ರಾಮುರನ್ನು ಬಾಳೆಹೊನ್ನೂರು ಪೊಲೀಸರು ಬಲವಂತವಾಗಿ ಬಂಧಿಸಿದ್ದರು.
ಈ ಹಿನ್ನೆಲೆಯಲ್ಲಿ ಗುರುವಾರ ಕೊಪ್ಪ ತಾಲೂಕು ಕಚೇರಿ ಎದುರಿಗೆ ದಲಿತ ಸಂಘರ್ಷ ಸಮಿತಿ ಮತ್ತು ರಾಜ್ಯ ಮಟ್ಟದ ವಸತಿ ಭೂ ಹಕ್ಕು ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಜನರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರದೊಂದಿಗೆ ಪ್ರತಿಭಟನೆ ನಡೆಸಿದರು.
ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಸೂರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಜನರನ್ನು ಅಲ್ಲಿಂದ ತೆರಳುವಂತೆ ಸೂಚನೆ ನೀಡಿದ್ದರು. ಇದಕ್ಕೆ ಒಪ್ಪದ 12 ಮಂದಿಯನ್ನು ವಶಕ್ಕೆ ಪಡೆದುಕೊಂಡರು.
ಇದೇ ಸಮಯದಲ್ಲಿ ಪ್ರತಿಭಟನಾ ನಿರತ ಗೌರಿ ಎಂಬ ಮಹಿಳೆಗೆ ಹೊಟ್ಟೆ ನೋವು ತಾಳಲಾರದೇ ನೆಲದಲ್ಲಿ ಉರುಳಿ ಬಿದ್ದು ತೀವ್ರ ರೀತಿಯಲ್ಲಿ ನರಳಾಡಿದ ದೃಶ್ಯ ಮನಕಲಕುವಂತಿತ್ತು. ಕೂಡಲೇ 108 ಆ್ಯಂಬುಲೆನ್ಸ್ ಕರೆಸಿ ಅವಳನ್ನು ಹತ್ತಿರದ ಬಾಳೆಹೊನ್ನೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಮಹಿಳೆಯ ಮೇಲೆ ಪೊಲೀಸರು ವಶಕ್ಕೆ ಪಡೆಯುವ ವೇಳೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಗೌರಿಯ ಗರ್ಭ ಕೋಶಕ್ಕೆ ತೊಂದರೆಯುಂಟಾಗಿದೆ. ಎಕ್ಸರೆ ಮಾಡಲಾಗಿದ್ದು, ಎದ್ದು ಕುಳಿತುಕೊಳ್ಳುವ ಸ್ಥಿತಿಯಲ್ಲಿ ಮಹಿಳೆ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಸೂರಿಗಾಗಿ ನಾವು ಹೋರಾಟ ಮಾಡಿದ್ದೇ ತಪ್ಪಾ ಎಂದು ಪ್ರಶ್ನಿಸುತ್ತಿರುವ ಗೌರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಪ್ಪ ತಹಶೀಲ್ದಾರ್ ಈ ಎಲ್ಲಾ ಘಟನೆಗಳಿಗೂ ನೇರ ಹೊಣೆಗಾರರು ಎಂದು ಪ್ರತಿಭಟನಾಕಾರರ ಆರೋಪವಾಗಿದೆ.
ಇಲ್ಲಿನ ನಿವೇಶನಕ್ಕಾಗಿ ಪ್ರತಿಭಟನೆ ನಡೆಸುತ್ತಿರುವುದು ದಿನದಿಂದ ದಿನಕ್ಕೆ ಉಗ್ರರೂಪ ಪಡೆಯುತ್ತಿದೆ. ಪ್ರತಿಭಟನಾನಿರತರು ತಹಶೀಲ್ದಾರ್ ಮತ್ತು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು,ಸೂರು ಸಿಗುವವರೆಗೂ ನಿರಂತರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಈ ಪ್ರತಿಭಟನೆ ಯಾವ ಹಂತಕ್ಕೆ ತಲುಪಬಹುದು ಎಂಬುವುದು ಗಂಭೀರವಾಗಿದೆ.







