ಲಾಡ್ಜ್‌ನಲ್ಲಿ ಅಶ್ಲೀಲ ಚಿತ್ರೀಕರಣ ಪ್ರಕರಣ
ಆರೋಪಿಗಳ ಬಂಧನಕ್ಕೆ ಆಗ್ರಹ
ಕಡೂರು, ಡಿ.23: ಕಡೂರು ಪಟ್ಟಣದ ಶ್ರೀ ನಂಜುಂಡೇಶ್ವರ ಲಾಡ್ಜ್‌ನಲ್ಲಿ ಅಶ್ಲೀಲ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಯುವ ಕಾಂಗ್ರೆಸ್, ಕರವೇ ಘಟಕಗಳು ಮತ್ತು ನಾಗರಿಕರು ಆಗ್ರಹಿಸಿದ್ದಾರೆ.
ಪಟ್ಟಣದ ವೃತ್ತ ನಿರೀಕ್ಷಕರ ಕಚೇರಿಗೆ ರಾಜ್ಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಆನಂದ್,ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಲ್.ರುದ್ರೇಗೌಡ ನಾಗರಿಕರೊಂದಿಗೆ ಭೇಟಿ ನೀಡಿ,ಕಳೆದ ಮಂಗಳವಾರ ಕಡೂರು ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗದ ಶ್ರೀನಂಜುಂಡೇಶ್ವರ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ ದಂಪತಿಯೋರ್ವರ ಕೊಠಡಿಯಲ್ಲಿ ಅಶ್ಲೀಲವಾಗಿ ಚಿತ್ರ ತೆಗೆಯಲಾಗಿದೆ ಎಂದು ನಾಗರಿಕರು ಪ್ರತಿಭಟನೆ ನಡೆಸಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವೃತ್ತ ನಿರೀಕ್ಷಕ ಸತ್ಯನಾರಾಯಣ್‌ರವರಿಗೆ ದೂರಿದರು.
ಕೆ.ಎಸ್.ಆನಂದ್ ಮಾತನಾಡಿ, ಪೊಲೀಸರು ಸ್ವಲ್ಪಮುತುವರ್ಜಿ ವಹಿಸಿದ್ದರೆ ಆರೋಪಿಗಳನ್ನು ಬಂಧಿಸಬಹುದಿತ್ತು.
ಆದರೂ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಪ್ರತಿಭಟನೆ ನಡೆದರೂ ಕ್ರಮ ಜರಗಿಸದಿರುವುದು ಪ್ರಭಾವಕ್ಕೆ ಪೊಲೀಸರು ಮಣಿದಿದ್ದಾರೆಯೇ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.ಆದ್ದರಿಂದ ಲಾಡ್ಜಿನ ಮಾಲಕ ಸೇರಿದಂತೆ ಕೃತ್ಯದಲ್ಲಿ ಶಾಮೀಲಾಗಿರುವವರನ್ನು ಬಂಧಿಸುವಂತೆ ಆಗ್ರಹಿಸಿದರು.
ರುದ್ರೇಗೌಡ ಮಾತನಾಡಿ, ಪೊಲೀಸ್ ಇಲಾಖೆ ಬಗ್ಗೆ ನಮಗೆ ಗೌರವ ಇದೆ. ಅದರಂತೆ ಕೂಡಲೇ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ.ಅದಕ್ಕೆ ಅವಕಾಶ ನೀಡದಂತೆ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಬೇಕು ಎಂದರು.
ವೃತ್ತ ನಿರೀಕ್ಷಕ ಸತ್ಯನಾರಾಯಣ ಮಾತನಾಡಿ, ಪ್ರಕರಣದ ಬಗ್ಗೆ ಗಂಭೀರವಾಗಿದ್ದು ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ಯಾವುದೇ ಒತ್ತಡ ಅಥವಾ ಮುಲಾಜಿಲ್ಲ. ಶೀಘ್ರವೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ವಿಕಾಸ್,ಜಿಮ್ ಶ್ರಿನಿವಾಸ್, ನಯಾಝ್,ಸತೀಶ್,ಪಟ್ಟಣದ ನಾಗರಿಕರು ಉಪಸ್ಥಿತರಿದ್ದರು.







