ಸಹಕಾರಿ ಸಂಘಗಳ ವ್ಯವಹಾರದಲ್ಲಿ ಡಿಜಿಟಲೀಕರಣ ಅವಶ್ಯ: ಡಾ.ಎಂ.ಎನ್. ರಾಜೇಂದ್ರಕುಮಾರ್
ತರ ಬೇತಿ ಕಾರ್ಯಾಗಾರ

ಮಂಗಳೂರು, ಡಿ.23: ದೇಶದ ಬದಲಾದ ಆರ್ಥಿಕ ಸನ್ನಿವೇಶದಲ್ಲಿ ಸಹಕಾರಿ ಸಂಘಗಳು ಎದುರಿಸುತ್ತಿರುವ ಸವಾಲುಗಳಿಗೆ ಸಂಘಗಳ ಡಿಜಿಟಲೀಕರಣದಿಂದ ಪರಿಹಾರ ಸಾಧ್ಯ. ಈ ನಿಟ್ಟಿನಲ್ಲಿ ಕೋರ್ ಬ್ಯಾಂಕಿಂಗ್, ಆರ್‌ಟಿಜಿಎಸ್/ನೆಫ್ಟ್ ಸೇರಿದಂತೆ ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆಗಳನ್ನು ನೀಡುವಲ್ಲಿ ಸಹಕಾರಿ ಸಂಘಗಳು ಡಿಜಿಟಲೀಕರಣಗೊಳ್ಳಬೇಕಾದ ಅಗತ್ಯವಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ನ ಆಶ್ರಯದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ತರ ಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇಂದು ಸಹಕಾರಿ ಕ್ಷೇತ್ರ ಸಂಕಷ್ಟಮಯ ಪರಿಸ್ಥಿತಿಯನ್ನು ಎದುರಿಸುತ್ತಿದೆ. ನೋಟುಗಳ ಅಪಮೌಲ್ಯವಾದ ಬಳಿಕ ಸಹಕಾರಿ ಕ್ಷೇತ್ರವನ್ನು ಸಂಶಯದ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ಆದರೆ ಸಹಕಾರಿ ಸಂಘಗಳ ವ್ಯವಹಾರವು ಅತ್ಯಂತ ಪಾರದರ್ಶಕವಾಗಿದ್ದು ಇಲಾಖೆ, ನಬಾರ್ಡ್, ಭಾರತೀಯ ರಿಸರ್ವ್‌ಬ್ಯಾಂಕ್‌ಗಳ ಮಾರ್ಗಸೂಚಿಯಂತೆ ಕಾರ್ಯಾಚರಿಸುತ್ತಿದೆ ಎಂದು ಅವರು ಹೇಳಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಜಿಲ್ಲಾ ಯೂನಿಯನ್‌ನ ಅಧ್ಯಕ್ಷ ಹರೀಶ್ ಆಚಾರ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಹಕಾರಿ ಸಂಘಗಳ ನಿವೃತ್ತ ಅಪರ ನಿಬಂಧಕ ಬಿ.ಎ. ಮಹಾದೇವಪ್ಪ, ಮತ್ತು ಲೆಕ್ಕ ಪರಿಶೋಧಕ ಬಿ.ವಿ.ರವೀಂದ್ರನಾಥ ಭಾಗವಹಿಸಿ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯರಾಜ ರೈ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಟಿ.ಜಿ. ರಾಜಾರಾಮ ಭಟ್, ವಿನಯ ಕುಮಾರ್ ಸೂರಿಂಜೆ, ಶಶಿಕುಮಾರ್ ರೈ, ಸದಾಶಿವ ಉಳ್ಳಾಲ್ ಭಾಗವಹಿಸಿದ್ದರು. ಲಕ್ಷ್ಮಣ್‌ಕುಮಾರ್ ಮಲ್ಲೂರು ಕಾರ್ಯಕ್ರಮ ನಿರೂಪಿಸಿದರು.







