ಮೋದಿಯ ಪಾದ ಬುಡದಲ್ಲೇ ಸಂಭವಿಸುತ್ತಿರುವ ಭೂಕಂಪ
‘ತಾನು ಮಾತನಾಡಿದರೆ ಭೂಕಂಪವಾಗುತ್ತದೆ’ ಎಂಬ ರಾಹುಲ್‌ಗಾಂಧಿಯ ಮಾತುಗಳನ್ನು ಕೆಲವರು ಲೇವಡಿ ಮಾಡುವುದಕ್ಕೆ ಬಳಸಿಕೊಂಡರೇ ಹೊರತು, ಓರ್ವ ವಿರೋಧ ಪಕ್ಷದ ನಾಯಕ ಅಂತಹದೊಂದು ರಹಸ್ಯವನ್ನು ಹೊರಗೆಡಹುವುದಕ್ಕೆ ಹಿಂಜರಿಯುತ್ತಿರುವುದು ಯಾಕೆ? ಎಂದು ಯಾರೂ ಕೇಳಿಲ್ಲ. ದೇಶ ಅಲ್ಲೋಲಕಲ್ಲೋಲವಾಗುತ್ತದೆಯೆಂಬ ಭಯದಿಂದ ರಾಹುಲ್ ಗಾಂಧಿ ಆ ಕುರಿತಂತೆ ಮಾತನಾಡುತ್ತಿಲ್ಲವೇ? ಮಾಹಿತಿ ಪ್ರಧಾನಿಗೆ ಸಂಬಂಧಪಟ್ಟಿರುವುದರಿಂದ, ಅದನ್ನು ದೇಶಕ್ಕೆ ಅಥವಾ ಸಂಬಂಧಪಟ್ಟ ತನಿಖಾಧಿಕಾರಿಗಳಿಗಾದರೂ ಬಹಿರಂಗಪಡಿಸೋದು ಅವರ ಕರ್ತವ್ಯವಲ್ಲವೇ? ಎಂದು ಯಾರೂ ಕೇಳಲಿಲ್ಲ. ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವುದಕ್ಕಾದರೂ ‘ಅಂತಹ ಮಾಹಿತಿಯಿದ್ದರೆ ದೇಶದ ಮುಂದೆ ಇಡಿ’ ಎಂದು ಪ್ರಧಾನಿ ಅಥವಾ ಬಿಜೆಪಿ ಮುಖಂಡರು ರಾಹುಲ್ ಗಾಂಧಿಗೆ ಸವಾಲು ಹಾಕಬೇಕಾಗಿತ್ತು. ರಾಹುಲ್‌ಗಾಂಧಿ ಅಥವಾ ಅವರ ಬಳಗಕ್ಕೆ ಮಾತ್ರವಲ್ಲ, ಮೋದಿ ಬಳಗಕ್ಕೂ ಅವರು ಮಾತನಾಡುವುದು ಬೇಡವಾಗಿತ್ತು. ಆದುದರಿಂದಲೇ, ವ್ಯರ್ಥ ತಮಾಷೆ ಮಾಡುತ್ತಾ, ವ್ಯಂಗ್ಯ ಮಾಡುತ್ತಾ ಕಾಲ ಕಳೆದರು. ಇದಾದ ಬಳಿಕ ಕಾಂಗ್ರೆಸ್ ನಿಯೋಗದಿಂದ ಪ್ರಧಾನಿ ಮೋದಿಯವರ ಅನಿರೀಕ್ಷಿತ ಭೇಟಿ ನಡೆಯಿತು. ಆ ಭೇಟಿಯಲ್ಲಿ ಏನೇನು ಮಾತುಕತೆ ನಡೆಯಿತು ಎನ್ನುವುದು ದೇಶಕ್ಕೆ ಇನ್ನೂ ಸ್ಪಷ್ಟವಾಗಿರಲಿಲ್ಲ. ಇನ್ನು ವಿರೋಧ ಪಕ್ಷ ಒಂದಾಗಿ ನಿಂತು ನೋಟು ನಿಷೇಧದ ಅನಾಹುತಗಳ ವಿರುದ್ಧ ಧ್ವನಿಯೆತ್ತಬೇಕಾದ ಸಂದರ್ಭದಲ್ಲಿ ಕಾಂಗ್ರೆಸ್ ನಿಯೋಗ ಅನಿರೀಕ್ಷಿತವಾಗಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ್ದು ಯಾಕೆ ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.
ಇದೇ ಸಂದರ್ಭದಲ್ಲಿ ಭೇಟಿ ಮಾಡಿದ ಕಾಂಗ್ರೆಸ್ ನಿಯೋಗವನ್ನು ಪ್ರಶಂಶಿಸಿದ ಮೋದಿ ‘ಇಂತಹ ಭೇಟಿ ಆಗಾಗ ನಡೆಯುತ್ತಿರಬೇಕು’ ಎಂದು ಹೇಳಿದ್ದಾರೆ. ಅಂದರೆ, ನಿಮಗೇನಾದರೂ ಅಗತ್ಯವಿದ್ದರೆ ಖಾಸಗಿಯಾಗಿ ಭೇಟಿ ಮಾಡಿ ಇತ್ಯರ್ಥ ಮಾಡಿಕೊಳ್ಳಿ ಎಂಬ ಪರೋಕ್ಷ ಆಮಿಷವಾಗಿತ್ತು ಅದು. ಇದಾದ ಬಳಿಕ ರಾಹುಲ್‌ಗಾಂಧಿಯವರು ನರೇಂದ್ರ ಮೋದಿಯ ಬಗ್ಗೆ ಆರೋಪಗಳನ್ನು, ಟೀಕೆಗಳನ್ನು ಮಾಡುತ್ತಾ ಬಂದರಾದರೂ, ಅದರಲ್ಲಿ ‘ಭೂಕಂಪ’ದ ಸೂಚನೆಯೇನೂ ಇದ್ದಿರಲಿಲ್ಲ. ಮಾಧ್ಯಮಗಳು ಈ ಬಗ್ಗೆ ತೀವ್ರವಾಗಿ ರಾಹುಲ್ ಗಾಂಧಿಯವರನ್ನು ಕೆಣಕುವುದಕ್ಕೆ ಆರಂಭಿಸಿದ ಬಳಿಕ, ಬುಧವಾರ ಮೋದಿಯ ವಿರುದ್ಧ ಆರೋಪವೊಂದನ್ನು ಮಾಡಿದ್ದಾರೆ. ‘‘ಸಹಾರಾ ಕಂಪೆನಿಯಿಂದ ಮೋದಿಗೆ 40 ಕೋಟಿ ರೂಪಾಯಿ ಲಂಚ’’ ನೀಡಲಾಗಿದೆ ಎನ್ನುವುದೇ ಆರೋಪ. ಇದು ರಾಜಕೀಯವಾಗಿ ಅಲ್ಲೋಲಕಲ್ಲೋಲ ಮಾಡುವಂತಹ ಆರೋಪಗಳೇನೂ ಆಗಿರಲಿಲ್ಲ. ಇದಕ್ಕಿಂತಲೂ ಕೆಟ್ಟ ಆರೋಪಗಳನ್ನು ಮೈಮೇಲೆ ಹೊತ್ತುಕೊಂಡು ಬಿಜೆಪಿ ಸಾಚಾ ಎಂಬಂತೆ ತಿರುಗಾಡುತ್ತಿದೆ. ಹಲವು ಜನರ ನಿಗೂಢ ಸಾವಿಗೂ ಕಾರಣವಾಗಿರುವ ವ್ಯಾಪಂ ಹಗರಣದಲ್ಲಿ ಬಿಜೆಪಿ ಮಧ್ಯಪ್ರದೇಶದ ಮುಖ್ಯಮಂತ್ರಿಯನ್ನು ರಕ್ಷಿಸಿದೆ. ಲಲಿತ್ ಮೋದಿಯ ಜೊತೆಗೆ ಅವ್ಯವಹಾರ ಹೊಂದಿದ್ದ ವಸುಂಧರಾರಾಜೇ ಸೇರಿದಂತೆ ದಿಲ್ಲಿಯ ಹಲವು ಪ್ರಮುಖರನ್ನು ಮೋದಿಯವರು ರಕ್ಷಿಸಿದ್ದಾರೆ.
ರಾಹುಲ್ ಗಾಂಧಿ ಮಾಡಿರುವ ಆರೋಪ ಹಳೆಯದು. ಮೋದಿ ‘ಮುಖ್ಯಮಂತ್ರಿಯಾಗಿದ್ದ ಸಂದರ್ಭದ್ದು’. ಅದೂ 40 ಕೋಟಿ ರೂಪಾಯಿ ಲಂಚ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಅಂಬಾನಿ ಮತ್ತು ಅದಾನಿ ಜೊತೆಗೆ ಸೇರಿ ದೇಶಕ್ಕೆ ತಂದಿಟ್ಟಿರುವ ದುರ್ಗತಿಯನ್ನು, ಪ್ರಧಾನಿಯಾದ ಬಳಿಕ ಬಿಜೆಪಿಯ ನಾಯಕರು ದೇಶವನ್ನು ಹೇಗೆ ದೋಚಿ ಬಡವರನ್ನು ಬೀದಿ ಪಾಲು ಮಾಡಿದರು ಎನ್ನುವುದಕ್ಕೆ ಹೋಲಿಸಿದರೆ ಈ 40 ಕೋಟಿ ರೂಪಾಯಿ ಏನೇನೂ ಅಲ್ಲ. ಬಹುಶಃ ರಾಹುಲ್‌ಗಾಂಧಿ ಮಾಡಿರುವ ಆರೋಪಕ್ಕಿಂತ, ಬಿಜೆಪಿಯೊಳಗೆ ಗುರುತಿಸಿಕೊಂಡಿರುವ ಬಾಬಾ ರಾಮ್‌ದೇವ್ ಮಾಡಿರುವ ಆರೋಪವೇ ಹೆಚ್ಚು ಗಂಭೀರವಾದುದು. ಬಿಜೆಪಿಯ ಜೊತೆಗೆ ಹತ್ತು ಹಲವು ಋಣಭಾರಗಳಿದ್ದರೂ, ನೋಟು ನಿಷೇಧದ ವೈಫಲ್ಯವನ್ನು ಬಾಬಾ ರಾಮ್‌ದೇವ್ ನೇರವಾಗಿ ಪ್ರಸ್ತಾಪಿಸಿದರು. ‘ಹಲವು ಲಕ್ಷ ಕೋಟಿ ರೂಪಾಯಿಯ ಹಗರಣ ಇದು’ ಎಂದು ಅವರು ಹೇಳಿದ್ದಾರೆ. ಈ ಹಗರಣದಲ್ಲಿ ಮೋದಿಯವರನ್ನು ರಾಮ್‌ದೇವ್ ನೇರವಾಗಿ ಉಲ್ಲೇಖಿಸಲಿಲ್ಲ. ಬದಲಾಗಿ ‘ಆರ್‌ಬಿಐ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ನರೇಂದ್ರ ಮೋದಿಯವರನ್ನು ಹಾದಿ ತಪ್ಪಿಸಿದ್ದಾರೆ ಮತ್ತು ಕಪ್ಪು ಹಣ ದಾಸ್ತಾನಿಗೆ ಕಾರಣವಾಗಿದ್ದಾರೆ’ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ. ಸದ್ಯಕ್ಕೆ ಆರ್‌ಬಿಐ ಗವರ್ನರ್‌ಕೆಲಸವನ್ನೂ ನರೇಂದ್ರ ಮೋದಿಯವರೇ ನಿರ್ವಹಿಸುತ್ತಿರುವುದರಿಂದ ಅಥವಾ ಆರ್‌ಬಿಐಯಲ್ಲಿ ಕೇಂದ್ರ ಸರಕಾರ ನೇರ ಹಸ್ತಕ್ಷೇಪ ನಡೆಸುತ್ತಿರುವುದರಿಂದ, ಈ ಹಗರಣದಲ್ಲಿ ನರೇಂದ್ರ ಮೋದಿಯವರಿಗೆ ಕ್ಲೀನ್ ಚಿಟ್ ನೀಡುವಂತೆಯೇ ಇಲ್ಲ. ಅದೇನೇ ಇರಲಿ, ಇಷ್ಟರಮಟ್ಟಿಗೆ ಬಾಯಿ ತೆರೆಯುವ ಧೈರ್ಯವೂ ಕಾಂಗ್ರೆಸ್ ಪಕ್ಷಕ್ಷೆ ಇಲ್ಲದೇ ಇರುವುದು ಇಂದಿನ ದುರಂತ.
ರಾಹುಲ್‌ಗಾಂಧಿಯ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬಳಗ ಪ್ರತಿಕ್ರಿಯಿಸಿರುವ ರೀತಿಯೂ ಈ ದೇಶದ ಜನತೆಯನ್ನು ಅಣಕಿಸುವಂತಿದೆ. ‘ರಾಹುಲ್ ಗಾಂಧಿ ಮಾತನಾಡಿದ್ದಾರೆ. ಆದರೆ ಭೂಕಂಪವಾಗಿಲ್ಲ’ ಎಂದು ನರೇಂದ್ರ ಮೋದಿ ಕುಟುಕಿದ್ದಾರೆ. ಒಂದಿಷ್ಟು ಆತ್ಮಸಾಕ್ಷಿಯಿದ್ದ ಯಾವುದೇ ಪ್ರಧಾನಿ ಮೊತ್ತ ಮೊದಲು ತನ್ನ ಮೇಲೆ ಬಂದಿರುವ ಕಳಂಕಕ್ಕೆ ಸ್ಪಷ್ಟೀಕರಣ ನೀಡಬೇಕಾಗಿತ್ತು. ಸಹಾರಾ ಕಂಪೆನಿಯ ಬೃಹತ್ ಹಗರಣಗಳು ತನಿಖೆಗೊಳಗಾಗಿವೆ. ಹಾಗೆಯೇ ಅದರ ಅಧ್ಯಕ್ಷರ ಬಂಧನವೂ ಆಗಿದೆ. ಇಂತಹದೊಂದು ಕಂಪೆನಿಯಿಂದ 40 ಕೋಟಿ ರೂಪಾಯಿಯನ್ನು ಪ್ರಧಾನಿಯಾಗುವ ಮುಂಚೆ ಚುನಾವಣಾ ವೆಚ್ಚಕ್ಕಾಗಿ ನರೇಂದ್ರ ಮೋದಿ ಪಡೆದಿದ್ದಾರೆ ಎಂದರೆ, ಅದು ಗಂಭೀರ ಆರೋಪವೇ ಆಗಿದೆ. ಕನಿಷ್ಠ ಆ ಆರೋಪದ ಸತ್ಯಾಸತ್ಯತೆಯ ಬಗ್ಗೆ ಮೋದಿ ಮಾತನಾಡಬೇಕಿತ್ತು. ಅದರ ಬದಲು, ತಮಾಷೆಯ, ವ್ಯಂಗ್ಯದ ಮಾತನಾಡಿ ಆರೋಪದಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿಯ ಹಿರಿಯರೊಬ್ಬರು, ಆರೋಪವನ್ನು ಪರೋಕ್ಷವಾಗಿ ಸಮರ್ಥಿಸಿ ‘ಮೋದಿ ಗಂಗೆಯಷ್ಟೇ ಪವಿತ್ರರು’ ಎಂದು ವ್ಯಂಗ್ಯವಾಡಿದ್ದಾರೆ. ಗಂಗಾನದಿ ಇಂದು ಎಷ್ಟು ಮಲಿನಗೊಂಡಿದೆ ಎಂದರೆ ಹಲವು ಸಾವಿರ ಕೋಟಿ ರೂಪಾಯಿಗಳನ್ನು ಸುರಿದರೂ ಅದನ್ನು ಶುದ್ಧೀಕರಿಸಲು ಸಾಧ್ಯವಾಗುತ್ತಿಲ್ಲ. ಅರೆಬೆಂದ, ಕೊಳೆತ ಹೆಣಗಳ ಆವಾಸವಾಗಿರುವ ಗಂಗಾನದಿಗೆ ಮೋದಿಯನ್ನು ಹೋಲಿಸುವ ಮೂಲಕ, ಆರೋಪವನ್ನು ಬಿಜೆಪಿಯ ಈ ನಾಯಕರು ಒಪ್ಪಿಕೊಂಡಿದ್ದಾರೆ. ಮೋದಿಗೆ ಮಾತ್ರ ಭೂಕಂಪವಾಗದ ಸಂತೋಷ. ಆದರೆ ನಿಜಕ್ಕೂ ಅವರು ಪ್ರಾಮಾಣಿಕ ಪ್ರಧಾನಿಯಾಗಿದ್ದರೆ, ರಾಹುಲ್‌ಗಾಂಧಿಯ ಆರೋಪದಿಂದ ಸಣ್ಣ ಕಂಪನವಾದರೂ ಅವರ ಎದೆಯಲ್ಲಿ ಏಳಬೇಕಾಗಿತ್ತು. ಆದರೆ ಯಾವ ಕಂಪನವೂ ಅವರಲ್ಲಿ ಮೂಡಲಿಲ್ಲ ಯಾಕೆಂದರೆ, ಅದಕ್ಕಿಂತಲೂ ಬೃಹತ್ ಹಗರಣಗಳಲ್ಲಿ ಅವರು ಸುತ್ತಿಕೊಂಡಿದ್ದಾರೆ. ಅವೆಲ್ಲವುಗಳ ನಡುವೆ ಈ ಪುಡಿ 40 ಕೋಟಿ ರೂಪಾಯಿ ಯಾವ ಲೆಕ್ಕ?
ಇಂದು ನೋಟು ನಿಷೇಧದ ಮೂಲಕ ದೇಶಾದ್ಯಂತ ನಡೆಯುತ್ತಿರುವ ವ್ಯಾಪಕ ಹಗರಣಗಳ ವಿರುದ್ಧ ವಿರೋಧ ಪಕ್ಷಗಳು ಸ್ಪಷ್ಟವಾಗಿ ಮಾತನಾಡಬೇಕಾಗಿದೆ. ಅದರ ವಿರುದ್ಧ ಗಂಭೀರ ಧ್ವನಿಯೆತ್ತಬೇಕಾಗಿದೆ. ಮೋದಿಯ ರಾಜೀನಾಮೆಗಾಗಿ ಚಳವಳಿ ನಡೆಸಬೇಕಾಗಿದೆ. ಆದರೆ ವಿರೋಧ ಪಕ್ಷಗಳು ಬೇರೆ ಬೇರೆ ವಿಷಯಗಳನ್ನು ಪ್ರಸ್ತಾಪಿಸಿ ವಿಷಯಾಂತರ ಮಾಡುತ್ತಿವೆ. ನೋಟು ನಿಷೇಧದಿಂದ ತಳಸ್ತರದ ಬದುಕು ಛಿದ್ರವಾಗಿದ್ದರೂ, ಈ ಕುರಿತಂತೆ ಎಡಪಕ್ಷಗಳೂ ಬೇಕೋ ಬೇಡವೋ ಎಂಬಂತೆ ಮೋದಿಯ ವಿರುದ್ಧ ಹೇಳಿಕೆಗಳನ್ನು ನೀಡುತ್ತಿವೆ. ಇದ್ದುದರಲ್ಲಿ ಮಮತಾ ಬ್ಯಾನರ್ಜಿ ಮತ್ತು ಕೇಜ್ರಿವಾಲ್ ಗಟ್ಟಿಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಉಳಿದವರೆಲ್ಲ, ದೇಶದ ನೋಟು ನಿಷೇಧದ ವೈಫಲ್ಯ ಮತ್ತು ದುರಂತಗಳನ್ನು ಮುಚ್ಚಿ ಹಾಕಲು ತಮಗೆ ಸಾಧ್ಯವಿರುವ ಕೊಡುಗೆಗಳನ್ನು ಕೊಡುತ್ತಿದ್ದಾರೆ. ನೋಟು ನಿಷೇಧವೇ ಈ ದೇಶಕ್ಕೆ ಅಪ್ಪಳಿಸಿರುವ ಭೂಕಂಪ. ಜನರು ಅವಶೇಷಗಳಡಿಯಲ್ಲಿ ಉಸಿರಾಟಕ್ಕಾಗಿ ಒದ್ದಾಡುತ್ತಿದ್ದಾರೆ. ಈ ಭೂಕಂಪವನ್ನು ಮುಚ್ಚಿ ಹಾಕಲು ಕೃತಕ ಭೂಕಂಪವನ್ನು ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನರೇಂದ್ರ ಮೋದಿಯ ವಿರುದ್ಧ ವಿರೋಧಪಕ್ಷಗಳು ಧ್ವನಿಯೆತ್ತಲಿ, ಎತ್ತದಿರಲಿ, ಜನರ ಆಕ್ರೋಶವೇ ಮೋದಿಯ ಪಾಲಿಗೆ ಬಹುದೊಡ್ಡ ಭೂಕಂಪವಾಗಿ ಕೆಲಸ ಮಾಡಲಿದೆ.







