ಕಾರಿನಲ್ಲಿ ಮಹಿಳೆ ಸಹಿತ ರಾಜಸ್ಥಾನ ಪೊಲೀಸ್ ಅಧಿಕಾರಿಯ ಶವ ಪತ್ತೆ
ಜೈನಗರ, ಡಿ.23: ಇತ್ತೀಚೆಗಷ್ಟೇ ಭಯೋತ್ಪಾದನೆ ನಿಗ್ರಹ ದಳಕ್ಕೆ ನಿಯೋಜಿಸಲ್ಪಟ್ಟಿದ್ದ ರಾಜಸ್ಥಾನದ ಪೊಲೀಸ್ ಅಧಿಕಾರಿಯೊಬ್ಬರು ನಿನ್ನೆ ರಾತ್ರಿ ತನ್ನ ಅಧಿಕೃತ ಕಾರಿನಲ್ಲಿ ಮೃತಾವಸ್ಥೆಯಲ್ಲಿ ಪತ್ತೆಯಾಗಿದ್ದಾರೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿದ್ದ 42ರ ಹರೆಯದ ಆಶಿಷ್ ಪ್ರಭಾಕರ್ ತನ್ನ ರಿವಾಲ್ವರ್‌ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ. ಜೈಪುರದ ಹೊರ ವಲಯದಲ್ಲಿ ರಸ್ತೆಯೊಂದರ ಮೇಲೆ ನಿಲ್ಲಿಸಲಾಗಿದ್ದ ಕಾರ್‌ನ ಮುಂದಿನ ಆಸನದಲ್ಲಿ ಅವರ ಬಳಿಯೇ ಸುಮಾರು 30ರ ಹರೆಯದ ಮಹಿಳೆಯೊಬ್ಬಳ ಶವವೂ ಪತ್ತೆಯಾಗಿದೆ. ಆಕೆಯ ಮೊಬೈಲ್ ಫೋನ್ ಪೊಲೀಸರಿಗೆ ಲಭಿಸಿದ್ದು, ಮಹಿಳೆಯ ಗುರುತು ಪತ್ತೆಗೆ ಅವರು ಪ್ರಯತ್ನಿಸುತ್ತಿದ್ದಾರೆ.
ನಿನ್ನೆ ಸಂಜೆ ಪ್ರಭಾಕರ್ ಸುಮಾರು 5 ಗಂಟೆಗೆ ಕಚೇರಿಯಿಂದ ಹೊರ ಹೋಗಿದ್ದರು. ಅದರ ಕೆಲವೇ ತಾಸುಗಳಲ್ಲಿ ಈ ಗುಂಡಿಕ್ಕಿಕೊಳ್ಳುವಿಕೆ ನಡೆದಿರುವ ಶಂಕೆಯಿದೆ.
ಪ್ರಭಾಕರ್ ತನ್ನ ಪತ್ನಿಯಲ್ಲಿ ಕ್ಷಮೆಯಾಚನೆ ಮಾಡಿರುವ ಪತ್ರವೊಂದು ಪೊಲೀಸರಿಗೆ ದೊರೆತಿದೆ. ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆ ಕಾರಣವೆಂದು ಪೊಲೀಸರು ಅಭಿಪ್ರಾಯಿಸಿದ್ದಾರೆ.
ಸುಮಾರು ಒಂದು ತಿಂಗಳ ಹಿಂದಷ್ಟೇ ಭಯೋತ್ಪಾದನೆ ನಿಗ್ರಹ ದಳಕ್ಕೆ ನಿಯೋಜನೆಗೊಂಡಿದ್ದ ಅವರು, ಯಾವುದೇ ಭಯೋತ್ಪಾದನೆ ಪ್ರಕರಣವನ್ನು ನಿಭಾಯಿಸುತ್ತಿರಲಿಲ್ಲ. ಪ್ರಭಾಕರ್ ಆಡಳಿತಾತ್ಮಕ ಕೆಲಸ ನಿರ್ವಹಿಸುತ್ತಿದ್ದರು.





