ಕನ್ನಡಿಗ ಫ್ರಾಂಕ್ ನರೋನ್ಹ ಪಿಐಬಿ ಪ್ರಧಾನ ಮಹಾನಿರ್ದೇಶಕರಾಗಿ ಪದೋನ್ನತಿ
ಮಂಗಳೂರು, ಡಿ.23: ಭಾರತ ಸರಕಾರದ ವಾರ್ತಾಶಾಖೆ(ಪಿಐಬಿ)ಯ ಪ್ರಧಾನ ಮಹಾನಿರ್ದೇಶಕರಾಗಿ ಕನ್ನಡಿಗ ಎ.ಪಿ.ಫ್ರಾಂಕ್ ನರೋನ್ಹ ಇಂದು ಪದೋನ್ನತಿ ಹೊಂದಿದ್ದಾರೆ. ಭಾರತೀಯ ವಾರ್ತಾ ಸೇವೆಯ ಹಿರಿಯ ಅಧಿಕಾರಿಯಾದ ಅವರು ಇದೀಗ ಕೇಂದ್ರ ಸರಕಾರದ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲಿದ್ದಾರೆ.
ಮೂಲತಃ ಹಾಸನದವರಾಗಿರುವ ನರೋನ್ಹ 1982ರ ಕೇಂದ್ರ ಸಿವಿಲ್ ಸರ್ವಿಸ್ ಅಧಿಕಾರಿಯಾಗಿದ್ದಾರೆ. ಅವರು ಈ ಹಿಂದೆ ಹೊಸದಿಲ್ಲಿಯ ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮಾಜಿ ರಾಷ್ಟ್ರಪತಿ ದಿ.ಶಂಕರ್ ದಯಾಳ್ ಶರ್ಮ ಅವರ ಉಪಪತ್ರಿಕಾ ಕಾರ್ಯದರ್ಶಿಯಾಗಿ, ಭಾರತ ಸರಕಾರದ ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ (ಡಿ.ಎ.ವಿ.ಪಿ)ಮತ್ತು ಕ್ಷೇತ್ರ ಪ್ರಚಾರ ನಿರ್ದೇಶನಾಲಯ (ಡಿ.ಎಫ್.ಪಿ) ಪಿ.ಐ.ಬಿ ಯ ಮಹಾನಿರ್ದೇಶಕರಾಗಿ ಹಾಗೂ ಪ್ರಧಾನಮಂತ್ರಿ ಕಾರ್ಯಾಲಯದಲ್ಲೂ ಸೇವೆ ಸಲ್ಲಿಸಿದ್ದರು. ಭಾರತೀಯ ವಾರ್ತಾ ಸೇವೆಯ ಶ್ರೇಣಿಯಲ್ಲಿ ಪ್ರಧಾನ ಮಹಾ ನಿರ್ದೇಶಕ ಪದವಿ ಅತ್ಯುನ್ನತ ಸೇವಾ ಪದವಿಯಾಗಿದೆ.





