ಹನ್ನೊಂದು ವರ್ಷ ಜೈಲಿನಲ್ಲಿ ಕೊಳೆತ ಬಳಿಕ ಇಬ್ಬರು ಮುಸ್ಲಿಂ ಯುವಕರ ದೋಷಮುಕ್ತಿ

ಹೊಸದಿಲ್ಲಿ,ಡಿ.24 : ದಿಲ್ಲಿ ಪೊಲೀಸರ ವಿಶೇಷ ಘಟಕ ಹಾಗೂ ಇಂಟಲಿಜೆನ್ಸ್ ಬ್ಯೂರೋ 11 ವರ್ಷಗಳ ಹಿಂದೆ ಉಗ್ರವಾದ ಸಂಚಿನ ಪ್ರಕರಣವೊಂದರಲ್ಲಿ ಆರೋಪಿಗಳೆಂದು ಹೆಸರಿಸಿ ಬಂಧಿಸಲ್ಪಟ್ಟಿದ್ದ ಇಬ್ಬರು ಮುಸ್ಲಿಂ ಯುವಕರನ್ನು ವಿಚಾರಣಾ ನ್ಯಾಯಾಲಯವೊಂದು ಗುರುವಾರದಂದು ಕೊನೆಗೂ ದೋಷಮುಕ್ತಗೊಳಿಸಿದೆ.
ಇರ್ಷಾದ್ ಅಲಿ ಮತ್ತು ಮೌರೀಫ್ ಖಮರ್ ಎಂಬ ಈ ಇಬ್ಬರು ಯುವಕರು ದೆಹಲಿ ಪೊಲೀಸರು ವಿಶೇಷ ಘಟಕ ಹಾಗೂ ಗುಪ್ತಚರ ದಳದ ಮಾಹಿತಿದಾರರಾಗಿದ್ದು ಅದ್ಯಾವುದೋ ವಿಚಾರದಲ್ಲಿ ಮನಸ್ತಾಪವೇರ್ಪಟ್ಟ ನಂತರ ಅವರನ್ನು ಡಿಸೆಂಬರ್ 2005ರಲ್ಲಿ ಬಂಧಿಸಿ ಎರಡು ವಾರಗಳ ತನಕ ಅಕ್ರಮವಾಗಿ ವಶದಲ್ಲಿಟ್ಟುಕೊಳ್ಳಲಾಗಿತ್ತು. ಇದರ ನಂತರವೇ ಅವರನ್ನು ಉಗ್ರವಾದ ಪ್ರಕರಣದಲ್ಲಿ ಹೆಸರಿಸಲಾಗಿತ್ತು.
ಈ ಇಬ್ಬರನ್ನು ದಿಲ್ಲಿಯ ಮುಕಾರ್ಬ ಚೌಕ್ ಪ್ರದೇಶದಿಂದ ಫೆಬ್ರವರಿ 9, 2006ರಲ್ಲಿ ಬಂಧಿಸಲಾಗಿತ್ತು ಹಾಗೂ ಅವರ ಬಳಿ ಶಸ್ತ್ರಾಸ್ತ್ರಗಳಿದ್ದವು ಎಂದು ಪೊಲೀಸರ ಹೇಳಿಕೊಂಡಿದ್ದರು. ಖಮರ್ ಸಹೋದರ ದೆಹಲಿ ಹೈಕೋರ್ಟಿನ ಮೊರೆ ಹೋದ ನಂತರ ಸಿಬಿಐ ತನಿಖೆಗೆ ಆದೇಶ ನೀಡಲಾಗಿತ್ತು.ಈ ಪ್ರಕರಣದ ತನಿಖೆಯನ್ನು ನವೆಂಬರ್ 11, 2008ರಲ್ಲಿ ಮುಗಿಸಿದ್ದ ಸಿಬಿಐ ಇಬ್ಬರು ಆರೋಪಿಗಳೂ ಐಬಿ ಹಾಗೂ ವಿಶೇಷ ಘಟಕದ ಮಾಹಿತಿದಾರರಾಗಿದ್ದರು ಹಾಗೂ ಅವರ ಮೇಲೆ ಸುಳ್ಳು ಆರೋಪ ಹೊರಿಸಲಾಗಿತ್ತು ಎಂಬ ತೀರ್ಮಾನಕ್ಕೆ ಬಂದಿತ್ತು.
ದೋಷಮುಕ್ತಗೊಂಡ ಯುವಕರಿಬ್ಬರಲ್ಲಿ ಅಲಿ ಹಿಂದೆ ಆಟೋರಿಕ್ಷಾ ಚಾಲಕನಾಗಿದ್ದುಕೊಂಡು ಪೊಲೀಸ್ ಮಾಹಿತಿದಾರನಾಗಿದ್ದನು. ಡಿಸೆಂಬರ್ 2005ರಲ್ಲಿ ಅಲಿ ಹಾಗೂ ಐಬಿ ಅಧಿಕಾರಿಯೊಬ್ಬರ ನಡುವೆವಿವಾದವೊಂದು ಏರ್ಪಟ್ಟಿತ್ತು. ಈ ನಡುವೆ ಯಾರೋ ಆತನನ್ನು ಜಮ್ಮುಕಾಶ್ಮೀರದ ಉಗ್ರ ತಂಡವೊಂದನ್ನು ಸೇರಲು ಒತ್ತಾಯಿಸಿದ್ದರೂ ಆತ ನಿರಾಕರಿಸಿದ್ದನೆನ್ನಲಾಗಿದೆ.
ಡಿಸೆಂಬರ್ 12, 2005ರಂದು ಐಬಿ ಅಧಿಕಾರಿ ಧೌಲಾ ಖಾನ್ ಕರೆ ಕಳುಹಿಸಿದ್ದರು.ನಂತರಆತನನ್ನು ಅಪಹರಿಸಲಾಗಿತ್ತೆಂದು ಆರೋಪಿಸಲಾಗಿತ್ತು. ಡಿಸೆಂಬರ್ 22ರಂದು ಇದೇ ರೀತಿ ಖಮರ್ ನನ್ನೂ ಅಪಹರಿಸಲಾಗಿತ್ತು. ಇಬ್ಬರಕುಟುಂಬಗಳೂ ನಾಪತ್ತೆ ದೂರು ದಾಖಲಿಸಿದ್ದವು.
ಅವರು ಅಲ್ ಬದ್ರ್ ಉಗ್ರವಾದಿಗಳೆಂದೂ ಜಮ್ಮುವಿನಿಂದ ಹಿಂದಿರುಗಿ ಬರುತ್ತಿದ್ದಾಗ ಅವರನ್ನು ಬಂಧಿಸಲಾಯಿತೆಂದೂ ನಂತರ ಪೊಲೀಸರು ಹೇಳಿಕೊಂಡಿದ್ದರು.
2008ರ ಸಿಬಿಐ ವರದಿ ಅವರನ್ನು ಸುಳ್ಳು ಆರೋಪದ ಮೇಲೆ ಬಂಧಿಸಲಾಗಿತ್ತು ಎಂದು ಹೇಳಿದ್ದರೂ ಇದನ್ನು ದಿಲ್ಲಿ ಪೊಲೀಸರ ವಿಶೇಷ ಘಟಕ ಪ್ರಶ್ನಿಸಿತ್ತು, ವಿಚಾರಣಾ ನ್ಯಾಯಾಲಯವೂ ಸಿಬಿಐ ವರದಿಯನ್ನು ತಳ್ಳಿ ಹಾಕಿತ್ತು. ಇದರ ವಿರುದ್ಧಇರ್ಷಾದ್ ಹೈಕೋರ್ಟಿನ ಮೊರೆ ಹೋಗಿದ್ದ. ಸಿಬಿಐ ವರದಿಯಾಧರಿಸಿ ಎರಡೂ ಪಕ್ಷಗಳ ವಿಚಾರಣೆ ನಡೆಸಬೇಕೆಂದು ಹೈಕೋರ್ಟ್ ತನ್ನ ಆದೇಶದಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಹೇಳಿದರೂ ದಿಲ್ಲಿ ವಿಶೇಷ ಘಟಕ ಇದರ ವಿರುದ್ಧ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಒಂದೋ ಆರೋಪಿಗಳು ತಮ್ಮನ್ನು ಸಿಬಿಐ ವರದಿಯಾಧಾರದಲ್ಲಿ ಬಿಡುಗಡೆಗೊಳಿಸಬೇಕೆಂದು ಮಾಡಿದ ಮನವಿಯನ್ನು ಪರಿಗಣಿಸಬೇಕು,ವಿಚಾರಣೆಯನ್ನು ಕಾನೂನಿನ ಪ್ರಕಾರ ಮುಂದುವರಿಸಬೇಕು ಇಲ್ಲವೇ ಮುಂದಿನ ತನಿಖೆ ಅಗತ್ಯಬಿದ್ದರೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿತ್ತು.
ಇದೀಗ ಅಂತಿಮವಾಗಿ ವಿಚಾರಣಾ ನ್ಯಾಯಾಲಯ ಇಬ್ಬರು ಯುವಕರನ್ನೂ ದೋಷಮುಕ್ತಗೊಳಿಸಿದೆ.







