ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು
ಸುಳ್ಳು ಪ್ರಮಾಣ ಪತ್ರ ಸಲ್ಲಿಕೆ ಪ್ರಕರಣ

ಹೊಸದಿಲ್ಲಿ, ಡಿ.24: 2013ರ ಅಸೆಂಬ್ಲಿ ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ನ್ಯಾಯಾಲಯ ಶನಿವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿದೆ.
ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಆಶೀಷ್ ಗುಪ್ತಾ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದ ಕೇಜ್ರಿವಾಲ್‌ಗೆ 10,000 ರೂ. ವೈಯಕ್ತಿಕ ಬಾಂಡ್‌ನ ಮೇಲೆ ಜಾಮೀನು ನೀಡಿದರು. ಮುಂದಿನ ವಿಚಾರಣೆಯನ್ನು ಎ.7,2017ಕ್ಕೆ ಮುಂದೂಡಿದರು.
ಕೇಜ್ರಿವಾಲ್‌ಗೆ ನ್ಯಾಯಾಲಯ ಆಗಸ್ಟ್ 31 ರಂದು ಕೋರ್ಟ್‌ಗೆ ಹಾಜರಾಗುವುದರಿಂದ ವಿನಾಯಿತಿ ನೀಡಿತ್ತು. ಡಿ.24 ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಆದೇಶಿಸಿತ್ತು. 2013ರ ಅಸೆಂಬ್ಲಿ ಚುನಾವಣೆಯಲ್ಲಿ ಕೇಜ್ರಿವಾಲ್ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ತಪ್ಪು ಮಾಹಿತಿ ನೀಡಿರುವುದರ ವಿರುದ್ಧ ಎನ್‌ಜಿಒ ಪರ ನೀರಜ್ ಸಕ್ಸೇನಾ ಹಾಗೂ ಅನುಜ್ ಅಗರವಾಲ್ ಕೇಜ್ರಿವಾಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ನ್ಯಾಯಾಲಯ ಈ ವರ್ಷದ ಫೆಬ್ರವರಿಯಲ್ಲಿ ಕೇಜ್ರಿವಾಲ್‌ಗೆ ಸಮನ್ಸ್ ಜಾರಿ ಮಾಡಿತ್ತು.
ನಾಮಪತ್ರ ಸಲ್ಲಿಕೆಯ ವೇಳೆ ತಪ್ಪು ಮಾಹಿತಿ ನೀಡಿರುವ ಕೇಜ್ರಿವಾಲ್‌ರನ್ನು ವಿಚಾರಣೆ ನಡೆಸಬೇಕೆಂದು ಈ ಮೊದಲು ಎನ್‌ಜಿಒ ದಿಲ್ಲಿ ಹೈಕೋರ್ಟ್‌ನ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದ್ದ ಹೈಕೋರ್ಟ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಮೊರೆ ಹೋಗಲು ಸೂಚಿಸಿತ್ತು.





