ಗೋವಿಂದರ ಕ್ಷಮೆ ಯಾಚಿಸಿದ ಕರಣ್ ಜೋಹರ್!

ಮುಂಬೈ, ಡಿ.24: ಖ್ಯಾತ ಚಿತ್ರ ನಿರ್ಮಾತೃ ಹಾಗೂ ಸೆಲೆಬ್ರಿಟಿ ಚಾಟ್ ಶೋ ‘ಕಾಫಿ ವಿದ್ ಕರಣ್’ ಕಾರ್ಯಕ್ರಮದ ಮೂಲಕ ಅಪಾರ ಜನಪ್ರಿಯತೆ ಪಡೆದಿರುವ ಕರಣ್ ಜೋಹರ್ ಹಿರಿಯ ನಟ ಗೋವಿಂದ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ. ಅಷ್ಟಕ್ಕೂ ಕ್ಷಮೆ ಯಾಚಿಸುವಂತಹ ತಪ್ಪನ್ನು ಅವರೇನು ಮಾಡಿದ್ದಾರೆ ಗೊತ್ತೇ? ತಮ್ಮನ್ನು ಕಾಫಿ ವಿದ್ ಕರಣ್ ಕಾರ್ಯಕ್ರಮಕ್ಕೆ ಆಹ್ವಾನಿಸಿಯೇ ಇಲ್ಲವೆಂದು ಇತ್ತೀಚೆಗೆ ಗೋವಿಂದ ಅಸಮಾಧಾನ ವ್ಯಕ್ತಪಡಿಸಿದ್ದರು ಅಷ್ಟೇ.
ಇದೊಂದೇ ಕಾರಣಕ್ಕೆ ಕ್ಷಮೆ ಯಾಚಿಸಿದ ಕರಣ್ ಜೋಹರ್, ತಮಗೆ ಗೋವಿಂದ ಅವರನ್ನು ತಮ್ಮ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮಾಡುವುದು ದೊಡ್ಡ ಗೌರವ ಎಂದಿದ್ದಾರೆ. ‘‘ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸುವ ಬಗ್ಗೆ ಮಾತುಕತೆಗಳು ನಡೆದಿದ್ದವು. ಆದರೆ ಅದು ಸಾಧ್ಯವಾಗಲಿಲ್ಲ. ಅದರ ಬಗ್ಗೆ ನಾವು ಯೋಚಿಸಿದ್ದೇವೆ. ಅವರು ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅದು ನಮಗೆ ದೊಡ್ಡ ಗೌರವವೇ ಸರಿ’’ ಎಂದಿದ್ದಾರೆ.
‘‘ಅವರಿಗೆ ನೋವುಂಟು ಮಾಡುವ ಯಾವುದೇ ಉದ್ದೇಶ ನಮಗಿಲ್ಲ. ಅವರೊಬ್ಬ ಅದ್ಭುತ ಕಲಾವಿದ ಹಾಗೂ ದೊಡ್ಡ ಸ್ಟಾರ್. ಅವರನ್ನು ಆಹ್ವಾನಿಸಲು ನನಗೆ ಸಂತೋಷವಿದೆ. ಇದನ್ನು ನಾನು ಗಮನದಲ್ಲಿರಿಸಿ ಅವರಿಗೆ ಆಹ್ವಾನ ನೀಡುತ್ತೇನೆ ಹಾಗೂ ನಮ್ಮ ಆಹ್ವಾನವನ್ನು ಅವರು ಸ್ವೀಕರಿಸುತ್ತಾರೆ ಎಂದು ನಂಬಿದ್ದೇನೆ’’ ಎಂದು ಕರಣ್ ಹೇಳಿದ್ದಾರೆ.





