ನ್ಯಾಯವಾದಿ ಜಾಲಿ ಎಲ್ ಎಲ್ ಬಿಯನ್ನೇ ಕಟಕಟೆಗೆ ಎಳೆದ ಬಾಟಾ !

ಮುಂಬೈ, ಡಿ.24: ನ್ಯಾಯಾಲಯದ ವಿಚಾರಣೆಯ ಕಥೆಯಿರುವ 'ಜಾಲಿ ಎಲ್ ಎಲ್ ಬಿ' ಚಿತ್ರವನ್ನು ಪಾದರಕ್ಷೆ ಉದ್ಯಮದ ದೈತ್ಯ ಕಂಪೆನಿಯೆಂದೇ ಹೆಸರಾದ ಬಾಟಾ ಕಟೆ ಕಟೆಗೆ ಎಳೆದಿದೆ .ಚಿತ್ರದ ಸಂಭಾಷಣೆಯೊಂದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಾಟಾತನ್ನ ಪಾದರಕ್ಷೆ ಬ್ರ್ಯಾಂಡನ್ನು ಕೆಟ್ಟ ದೃಷ್ಟಿಯಿಂದ ಬಿಂಬಿಸಿದ್ದಕ್ಕಾಗಿ ಚಿತ್ರ ನಿರ್ಮಾಣ ಸಂಸ್ಥೆ ಫಾಕ್ಸ್ ಸ್ಟಾರ್ ಸ್ಟುಡಿಯೋಸ್, ನಿರ್ಮಾಪಕ ನರೇನ್ ಕುಮಾರ್, ನಿರ್ದೇಶಕರುಗಳಾದ ದೀಪಕ್ ಜೇಕಬ್, ಅಮಿತ್ ಶಾ, ಸುಭಾಶ್ ಕಪೂರ್, ನಟರಾದ ಅನ್ನು ಕಪೂರ್, ಅಕ್ಷಯ್ ಕುಮಾರ್ ಹಾಗೂ ಯುಟ್ಯೂಬ್, ಪಿ ವಿಆರ್ ಸಿನೆಮಾಸ್ ಮತ್ತು ಸತ್ಯಂ ಸಿನೆಪ್ಲೆಕ್ಸ್ ಗೆ ನೊಟೀಸ್ ಜಾರಿಗೊಳಿಸಿದೆಯೆಂದು ಡೆಕ್ಕನ್ ಕ್ರಾನಿಕಲ್ ವರದಿಯೊಂದು ತಿಳಿಸಿದೆ. ಚಿತ್ರದ ಅಧಿಕೃತ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು.
ಚಿತ್ರದ ಒಂದು ದೃಶ್ಯದಲ್ಲಿ ಅನ್ನು ಕಪೂರ್ ಅವರು ಅಕ್ಷಯ್ ಕುಮಾರ್ ಅವರನ್ನುದ್ದೇಶಿಸಿ ಹೀಗೆಂದು ಹೇಳುತ್ತಾರೆ- ‘‘ವರ್ನಾ ಕ್ಯಾ.... ಬಾಟಾ ಕಾ ಜೂತೆ ಪೆಹೆನ್ ಕರ್, ತುಚ್ಚಿ ಸಿ ಟೆರಿಕಾಟ್ ಶರ್ಟ್ ಪೆಹೆನ್ ಕರ್, ಸಾಲಾ ಹಮ್ಸೆ ಝಬಾನ್ ಲಡಾ ರಹಾ ಏ.’’ (ನನ್ನೊಡನೆ ಜಗಳಕ್ಕೆ ಬರಲು ಕಳಪೆ ಶೂ ಹಾಗೂ ಶರ್ಟ್ ಧರಿಸಿದ ನೀನ್ಯಾರು).
‘‘ಬಾಟಾ ಪಾದರಕ್ಷೆಗಳನ್ನು ಸಮಾಜದ ಕೆಳಗಿನ ಸ್ತರದ ಜನರು ಮಾತ್ರ ಧರಿಸುತ್ತಾರೆ ಹಾಗೂ ಬಾಟಾ ಪಾದರಕ್ಷೆ ಧರಿಸಿದವ ಅವಮಾನವೆದುರಿಸುತ್ತಾನೆ ಎಂಬರ್ಥವನ್ನು ಈ ಸಂಭಾಷಣೆ ನೀಡುತ್ತದೆ. ಈ ಸಂಭಾಷಣೆ ಹೇಳಿದ ಅನ್ನು ಕಪೂರ್ ಅವರಿಗೆ ಅಕ್ಷಯ್ ಕುಮಾರ್ ಕೆನ್ನೆಗೆ ಬಾರಿಸುವುದನ್ನು ತೋರಿಸಲಾಗಿದೆ. ಪ್ರಾಯಶಃ ಅಕ್ಷಯ್ ಕುಮಾರ್ ಅವರು ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಬಾಟಾದ ಎದುರಾಳಿ ಕಂಪೆನಿಯ ಉತ್ತೇಜನದಿಂದ ಇಂತಹ ಒಂದು ಸಂಭಾಷಣೆಯ ದೃಶ್ಯವನ್ನು ಚಿತ್ರದಲ್ಲಿ ತೋರಿಸಿದ್ದಿರಬಹುದು’’ ಎಂದು ನೊಟೀಸ್ ತಿಳಿಸುತ್ತದೆಯೆಂದು ವರದಿಯಲ್ಲಿ ಹೇಳಲಾಗಿದೆ.
ಕಂಪೆನಿಯು ಸಂಬಂಧಿತರಿಂದ ವೈಯಕ್ತಿಕ ಕ್ಷಮಾಪಣೆ ಹಾಗೂ ರಾಷ್ಟ್ರೀಯ ದೈನಿಕಗಳಲ್ಲಿ ಕ್ಷಮಾಪಣಾ ಪತ್ರವನ್ನು ಪ್ರಕಟಿಸಬೇಕೆಂದೂ ಹಾಗೂ ಚಿತ್ರದ ಎಲ್ಲಾ ಟ್ರೇಲರ್ ಗಳಲ್ಲಿಯೂ ಬಾಟಾ ಗೌರವಕ್ಕೆ ಚ್ಯುತಿ ತಂದಿದ್ದಕ್ಕಾಗಿ ಕ್ಷಮಾಪಣೆ ಪ್ರಕಟಿಸಬೇಕೆಂದೂ ಹೇಳಿದೆ.