ಜ್ವರಪೀಡಿತ ತನ್ನ 11 ದಿವಸದ ಹಸುಗೂಸನ್ನು ಎತ್ತಿಕೊಂಡು 4 ಕಿ.ಮೀ. ನಡೆದ ಬಾಣಂತಿ !

ನಿಲಂಬೂರ್,ಡಿ. 24: ಮಾವೊವಾದಿ ಬೆದರಿಕೆಯಿರುವ ಆದಿವಾಸಿ ಕಾಲನಿಯಲ್ಲಿ ವೈದ್ಯಕೀಯ ಪರೀಕ್ಷೆ ಸ್ಥಗಿತಗೊಂಡ ಪರಿಣಾಮ 11ದಿವಸ ದ ಹಸುಗೂಸನ್ನೆತ್ತಿಕೊಂಡು ಬಾಣಂತಿ ಮಹಿಳೆ ಅರಣ್ಯದಾರಿಯಲ್ಲಿ ನಾಲ್ಕುಕಿ.ಮೀ ನಡೆದು ಆರೋಗ್ಯಕೇಂದ್ರಕ್ಕೆ ತಲುಪಿದ ಘಟನೆ ಕೇರಳದ ನಿಲಂಬೂರ್ ವ್ಯಾಪ್ತಿಯಲ್ಲಿ ನಡೆದಿದೆ. ವಯಿಕಡವ್ ಗ್ರಾಮಪಂಚಾಯತ್ ನೆಲ್ಲಿಕುತ್ತ್ ಪುಂಚಿಕೊಲ್ಲಿ ಕಾಲನಿಯ ಶೋಭಾ ಜ್ವರ ಪೀಡಿತ ತನ್ನ ಹಸುಗೂಸನ್ನೆತ್ತಿ ಚಿಕಿತ್ಸೆಗಾಗಿ 4ಕಿ.ಮೀ ನಡೆದು ಬಂದ ಆದಿವಾಸಿ ಮಹಿಳೆಯಾಗಿದ್ದಾರೆ.
ಆನೆಗಳಹಾವಳಿಯಿದ್ದ ದಟ್ಟ ಅರಣ್ಯ ದಾರಿಯಲ್ಲಿ ಪತಿ ಸೆಲ್ವಂ, ಹಿರಿಮಗಳ ಜೊತೆ 4ಕಿ.ಮೀ. ನಡೆದು ಆನಮರಿ ಎಂಬಲ್ಲಿಗೆ ಬಂದು ಅಲ್ಲಿಂದ ಬಸ್‌ನಲ್ಲಿ ಪ್ರಯಾಣಿಸಿ ಆರೋಗ್ಯಕೇಂದ್ರ ತಲುಪಿದ್ದಾರೆ ಎನ್ನಲಾಗಿದೆ. ಶೋಭಾ ಕಳೆದ ವಾರ ತನ್ನ ಕಾಲನಿಯಲ್ಲಿ ನಾಲ್ಕನೆ ಮಗುವಿಗೆ ಜನ್ಮ ನೀಡಿದ್ದರು. ಗುರುವಾರ ಸಂಜೆ ವೇಳೆ ಮಗುವಿನ ಜ್ವರ ಉಲ್ಬಣಗೊಂಡಿತ್ತು. ಶುಕ್ರವಾರ ಬೆಳಗ್ಗೆ ಕಾಡಿನ ದಾರಿಯಾಗಿ ಆಸ್ಪತ್ರೆ ಹೊರಟು ಬಂದಿದ್ದಾರೆ.
ಪುಂಚಿಕೊಲ್ಲಿ ಆದಿವಾಸಿ ಕಾಲನಿಗೆ ತಿಂಗಳಿಗೆ ಓರ್ವ ಆರೋಗ್ಯ ಅಧಿಕಾರಿ ಭೇಟಿ ನೀಡುತ್ತಿದ್ದರು.ಆದರೆ ಮಾವೊವಾದಿಗಳ ಎನ್‌ಕೌಂಟರ್ ನಡೆದ ಬಳಿಕ ಆರೋಗ್ಯ ಅಧಿಕಾರಿ ಕಾಲನಿಗೆ ಭೇಟಿ ನೀಡಿಲ್ಲ. ಮೊಬೈಲ್ ಯುನಿಟ್‌ಕೂಡಾ ಬಂದಿರಲಿಲ್ಲ. ನೆಲ್ಲಿಕುತ್ತ್ ಪುಂಚಿಕೊಲ್ಲಿ ಕಾಲನಿಯಲ್ಲಿ 62 ಕುಟುಂಬಗಳು ವಾಸವಿದೆ. ನೀರು, ಬೆಳಕು, ಪ್ರಯಾಣ ಸೌಕರ್ಯದ ರಸ್ತೆಗಳು ಇತ್ಯಾದಿ ಇನ್ನು ಕೂಡಾ ಇಲ್ಲಿಗೆ ತಲುಪಿಲ್ಲ ಎಂದು ವರದಿ ತಿಳಿಸಿದೆ.





