ಇಸ್ಲಾಂ ಶಾಂತಿ ಮತ್ತು ಸಹಿಷ್ಣುತೆಯ ಸಂದೇಶವಾಗಿದೆ : ಡಾ. ಹುಸೈನ್ ಮಡವೂರು

ಮಂಗಳೂರು, ಡಿ.24 : ಉಗ್ರವಾದ ಮತ್ತು ವಿಧ್ವಂಸಕತೆಗಳು ಯಾವುದೇ ಧರ್ಮದ ಸಿದ್ಧಾಂತವಲ್ಲ. ಅದು ಮಾನವೀಯತೆಯನ್ನು ನಾಚಿಸುವ ರಾಕ್ಷಸೀಯ ಕೃತ್ಯವಾಗಿದೆ. ಇಂತಹ ಅಮಾನುಷ ಕೃತ್ಯಗಳನ್ನು ತೀವ್ರವಾಗಿ ಖಂಡಿಸುವ ಇಸ್ಲಾಮ್ ಶಾಂತಿ ಮತ್ತು ಸಹಿಷ್ಣುತೆಯ ಸಂದೇಶವಾಗಿದೆ. ಫ್ಯಾಸಿಸ್ಟ್ ಶಕ್ತಿಗಳು ಮತ್ತು ಅವರ ಮಾಧ್ಯಮಗಳು ನಡೆಸುತ್ತಿರುವ ಇಸ್ಲಾಂ ವಿರೋಧಿ ಅಪಪ್ರಚಾರಗಳನ್ನು ನಂಬದೆ, ಇಸ್ಲಾಮಿನ ಮೂಲ ಪ್ರಮಾಣಗಳಾದ ಕುರ್‍ಆನ್ ಹಾಗೂ ಪ್ರವಾದಿ ವಚನಗಳನ್ನು ನಿಷ್ಪಕ್ಷಪಾತವಾಗಿ ಅವಲೋಕಿಸಿದರೆ ವಾಸ್ತವಿಕತೆ ಮನವರಿಕೆಯಾದೀತು ಎಂದು ಕೇರಳ ನದ್ವತುಲ್ ಮುಜಾಹಿದೀನ್‍ನ ರಾಜ್ಯ ಉಪಾಧ್ಯಕ್ಷ ಡಾ. ಹುಸೈನ್ ಮಡವೂರು ಹೇಳಿದರು.
ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್‍ನ ವತಿಯಿಂದ ನಗರದ ದಾರುಲ್ ಖೈರ್ ಸಭಾಭವನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಸ್ಲಾಮಿನ ಕುರಿತಾಗಿ ಅಪಾರ್ಥ ಮಾಡಿಕೊಂಡಿರುವ ಸಹೋದರ ಸಮುದಾಯಗಳಿಗೆ ಇಸ್ಲಾಮಿನ ನೈಜತೆಯನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಎಲ್ಲಾ ಮುಸ್ಲಿಮರು ಕುರ್ ಆನ್ ಹಾಗೂ ಪ್ರವಾದಿ ಸುನ್ನತ್‍ಗಳೆಂಬ ಅಲ್ಲಾಹನ ಪಾಶವನ್ನು ಬಿಗಿಯಾಗಿ ಹಿಡಿದು ಒಂದಾಗಬೇಕಾದ ಅನಿವಾರ್ಯತೆಯಿದೆಯೆಂದು ಅಭಿಪ್ರಾಯಪಟ್ಟರು.
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಎಸ್.ಕೆ.ಎಸ್.ಎಮ್.ನ ಅಧ್ಯಕ್ಷ ಯು.ಎನ್.ಅಬ್ದುಲ್ ರಝಾಕ್‍ರವರು ಡಾ. ಹುಸೈನ್ ಮಡವೂರ್‍ರವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಎಸ್.ಕೆ.ಎಸ್.ಎಮ್.ನ ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್, ಉಳ್ಳಾಲದ ಇಸ್ಲಾಹಿ ಶಿಕ್ಷಣ ಸಂಸ್ಥೆಯ ಪ್ರವರ್ತಕ ಅಬ್ದುಲ್ ರಹ್ಮಾನ್ ಬಾಷಾ, ದಯಾ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಸಿ.ಪಿ. ಅಬ್ದುಲ್ ಲತೀಫ್ ಮತ್ತು ಸಾಹಿತಿ ಯು.ಎ.ಕಾಸಿಮ್ ಉಳ್ಳಾಲ ಶುಭಕೋರಿ ಮಾತನಾಡಿದರು. ಮೌಲವಿ ಫೈಝಲ್ ಚಕ್ಕರಕಲ್ ಮುಖ್ಯ ಭಾಷಣ ಮಾಡಿದರು.
ಮೌಲವಿ ಹಸನ್ ಶರೀಫ್ ಕುಂಜತ್ತಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್.ಕೆ.ಎಸ್.ಎಮ್.ನ ಉಪಾಧ್ಯಕ್ಷರುಗಳಾದ ಅಬೂಬಕ್ಕರ್ ಪಾಂಡೇಶ್ವರ ಮತ್ತು ಅಬ್ದುಲ್ ರಹ್ಮಾನ್ ಉಪ್ಪಿನಂಗಡಿ, ಕೋಶಾಧಿಕಾರಿ ಜಿ.ಅಬ್ದುಲ್ ರಝಾಕ್, ಮಾಜಿ ಅಧ್ಯಕ್ಷ ಅಹ್ಮದ್ ಅನ್ಸಾರ್, ಸಲಫಿ ಎಜುಕೇಶನ್ ಬೋರ್ಡ್‍ನ ಅಧ್ಯಕ್ಷ ಮೌಲವಿ ಮುಸ್ತಫಾ ದಾರಿಮಿ, ದಯಾ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕುಂಜತ್ತಬೈಲ್, ಕೋಶಾಧಿಕಾರಿ ನೌಶಾದ್, ನ್ಯಾಯವಾದಿ ಮುಹಮ್ಮದ್ ಇಲ್ಯಾಸ್, ಮೌಲವಿ ಸಿರಾಜ್ ತಲಪಾಡಿ ಮತ್ತು ಅನ್ಸಾರ್ ಎಮ್.ಟಿ.ಪಿ. ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಎಸ್.ಕೆ.ಎಸ್.ಎಮ್.ನ ಉಪಕಾರ್ಯದರ್ಶಿ ಮುಹಮ್ಮದ್ ಗುಲಾಂ ಕಾರ್ಯಕ್ರಮ ನಿರೂಪಿಸಿದರು.
ಕೇಂದ್ರೀಯ ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ ಪ್ರಾರಂಭದಲ್ಲಿ ಸ್ವಾಗತಿಸಿ, ಕೊನೆಯಲ್ಲಿ ಧನ್ಯಾವಾದವಿತ್ತರು.







