ಪ್ರಧಾನಿಯಿಂದ ರಾಹುಲ್ ಗೇಲಿ- ಸುಳ್ಯ ಬ್ಲಾಕ್ ಕಾಂಗ್ರೆಸ್ ಖಂಡನೆ
ಸುಳ್ಯ, ಡಿ.24 : ಪ್ರಧಾನ ಮಂದಿ ನರೇಂದ್ರ ಮೋದಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಗೇಲಿ ಮಾಡಿದ್ದನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವ್ಯವಹಾರದ ಕುರಿತು ಸಾಕ್ಷಿ ನೀಡಿದ್ದರೂ ಅದಕ್ಕೆ ಉತ್ತರಿಸದೇ ಪ್ರಧಾನಿ ಅಪಹಾಸ್ಯ ಮಾಡಿದ್ದು, ಇಂತಹ ಕ್ರಮವನ್ನು ಅವರು ನಿಲ್ಲಿಸಬೇಕು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಅಧ್ಯಕ್ಷ ಅಮಿತ್‌ಶಾ ನಿರ್ದೇಶಕರಾಗಿರುವ ಸಹಕಾರಿ ಬ್ಯಾಂಕ್‌ನಲ್ಲಿ ನವಂಬರ್ 8ರಿಂದ ಮೂರು ದಿನಗಳಲ್ಲಿ 500 ಕೋಟಿಗೂ ಹೆಚ್ಚು ಹಣ ಜಮೆ ಆಗಿದ್ದರೂ ಯಾವುದೇ ಕ್ರಮ ಆಗಿಲ್ಲ. ಪ್ರಧಾನಿ ಗಂಗೆಯಷ್ಟೇ ಪವಿತ್ರ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದು, ಮೋದಿ ವಿರುದ್ಧದ ಎಲ್ಲಾ ಆರೋಪಗಳ ತನಿಖೆ ನಡೆಸಲಿ. ಆಗ ಎಷ್ಟು ಪವಿತ್ರ ಎಂದು ಗೊತ್ತಾಗಲಿದೆ ಎಂದರು.
ನೋಟು ಅಮಾನ್ಯದಿಂದ ಸಮಸ್ಯೆ ಬಿಗಡಾಯಿಸಿದೆ. ಯಾರಲ್ಲೂ ಹಣ ಇಲ್ಲ, ಕೆಲಸವೂ ಇಲ್ಲದಾಗಿದೆ. ಜನವರಿ ಬಳಿಕ ಈ ಕಷ್ಟ ದ್ವಿಗುಣವಾಗಲಿದೆ ಎಂದರು.
ಸಮಾಜ ಕಲ್ಯಾಣ ಸಚಿವ ಆಂಜನೇಯ ಜನವರಿ 1ರಂದು ಸುಳ್ಯಕ್ಕೆ ಆಗಮಿಸಲಿದ್ದು, ಸಮಾಜ ಕಲ್ಯಾಣ ಇಲಾಖೆಯ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಅಂದು ಕಾರ್ಯಕರ್ತರ ಸಭೆಯೂ ನಡೆಯಲಿದೆ. ಸಾರ್ವಜನಿಕರಿಂದ ಸಚಿವರು ಅಹವಾಲು ಸ್ವೀಕರಿಸಲಿದ್ದಾರೆ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಹೇಳಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಕೋಲ್ಚಾರ್, ನಂದರಾಜ್ ಸಂಕೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







