ದಲಿತರಿಗಿಂತ ಮೇಲ್ವರ್ಗಕ್ಕೇ ಹೆಚ್ಚು ಮೀಸಲಾತಿ: ಡಾ.ಸಿ.ಜಿ.ಲಕ್ಷ್ಮೀಪತಿ
ಸಮಾನತೆಯ ಆಶಯ ಮತ್ತು ರಾಜಕಾರಣ

ಮಂಗಳೂರು, ಡಿ.24: ಜಾತಿ ಇಲ್ಲ ಅಂದರೆ ಇಲ್ಲ , ಇದೆ ಅಂದರೆ ಇದೆ. ಜಾತಿ ಎಂಬುದು ಕೆಲವರಿಗೆ ದಾಸ್ಯವಾಗಿ ಪರಿಣಮಿಸಿದೆ. ಕೆಲವರಿಗೆ ಜಾತಿ ಎಂಬುದೇ ಬಂಡವಾಳವಾಗಿದೆ. ಮೇಲ್ವರ್ಗ ಅದನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದೆ. ಆ ಮೂಲಕ ದಲಿತ ವರ್ಗ ಪಡೆಯುವ ಮೀಸಲಾತಿಗಿಂತಲೂ ಮೇಲ್ವರ್ಗ ಹೆಚ್ಚು ಅವಕಾಶಗಳನ್ನು ಮತ್ತು ಮೀಸಲಾತಿಯನ್ನು ಪಡೆಯುತ್ತಿದೆ ಎಂದು ಡಾ. ಸಿ.ಜಿ.ಲಕ್ಷ್ಮೀಪತಿ ಹೇಳಿದರು.
‘ಅಭಿಮತ ಮಂಗಳೂರು’ ನಗರದ ನಂತೂರು ಶಾಂತಿಕಿರಣದಲ್ಲಿ ಆಯೋಜಿಸಿದ ‘ಜನನುಡಿ’ಯ ‘ಸಮಾನತೆಯ ಆಶಯ ಮತ್ತು ಮೀಸಲಾತಿ’ ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮೀಸಲಾತಿ ಅಂದ ತಕ್ಷಣ ಅದು ದಲಿತರ ಅಸ್ಮಿತೆಯ ಪ್ರಶ್ನೆಯಾಗಿ ಬಿಡುತ್ತದೆ. ಆದರೆ, ದಲಿತರು ಪಡೆಯುವ ಮೀಸಲಾತಿಗಿಂತ ಮೇಲ್ವರ್ಗ ಎಲ್ಲ ಬಗೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಿದೆ. ಅಷ್ಟೇ ಅಲ್ಲ, ದಲಿತರನ್ನು ಭೌತಿಕವಾಗಿ ದಾಸ್ಯರನ್ನಾಗಿಸಿ ಸಬಲಗೊಳ್ಳುತ್ತಿದೆ. ಇದನ್ನು ಅರಿತುಕೊಂಡು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಡಾ.ಸಿ.ಜಿ.ಲಕ್ಷ್ಮೀಪತಿ ನುಡಿದರು.
ಇತ್ತೀಚಿನ ನೋಟು ಅಮಾನ್ಯ ಸಂದರ್ಭ ಮುಸ್ಲಿಂ ಅಧಿಕ ಇರುವ ಪ್ರದೇಶಗಳಲ್ಲಿ ಎಟಿಎಂಗಳಲ್ಲೂ ಹಣ ತುಂಬದೆ ಅನ್ಯಾಯ ಎಸಗಿದ ವಿದ್ಯಮಾನ ನಡೆದಿದೆ. ಸುಳ್ಳು ಸುದ್ದಿಗಳನ್ನು ಹಬ್ಬುವ ಮೂಲಕ ಅಹಿಂದ ವರ್ಗದಲ್ಲಿ ಭಿನ್ನಮತ ಹುಟ್ಟು ಹಾಕುತ್ತಿವೆ. ಇದರ ವಿರುದ್ಧ ಪ್ರಗತಿಪರ ದಲಿತರು, ಮುಸ್ಲಿಮರು, ಕ್ರೈಸ್ತರು ಒಂದಾಗಬೇಕು. ರಾಜಕೀಯ ಸಂಚಲನಕ್ಕೆ ಮನಸ್ಸನ್ನು ತೆರೆದಿಡಬೇಕು ಎಂದು ಡಾ.ಸಿ.ಜಿ.ಲಕ್ಷ್ಮೀಪತಿ ಹೇಳಿದರು.
ವಿಚಾರ ಮಂಡಿಸಿದ ಹುಲಿಕುಂಟೆ ಮೂರ್ತಿ, ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ವಿದ್ಯಾರ್ಥಿಗಳನ್ನು ಕೀಳಾಗಿ ಕಾಣಲಾಗುತ್ತದೆ. ಮೀಸಲಾತಿ ವಿಚಾರದಲ್ಲಂತೂ ದಲಿತ ವಿದ್ಯಾರ್ಥಿಗಳಿಗೆ ನಿರಂತರ ಹಿಂಸೆ ನೀಡಲಾಗುತ್ತದೆ. ಇದನ್ನು ಎದುರಿಸಲಾಗದೆ ರೋಹಿತ್ ವೇಮುಲಾ ಮಾತ್ರವಲ್ಲ, ಇನ್ನೂ ಅನೇಕ ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡದ್ದಿದೆ. ಆದರೆ, ಅವು ಬೆಳಕಿಗೆ ಬಾರದ ಕಾರಣ ಚರ್ಚೆಗಳಾಗಲಿಲ್ಲ ಎಂದರು.
ಮನುಷ್ಯನನ್ನು ಮನುಷ್ಯನನ್ನಾಗಿ ಗುರುತಿಸುವ ಪ್ರಕ್ರಿಯೆಯೇ ಮೀಸಲಾತಿಯಾಗಿದೆ. ಮೀಸಲಾತಿ ಅನರ್ಹರಿಗೆ ನೀಡಲಾಗುವ ಅವಕಾಶ ಎಂಬ ಭಾವನೆ ಇದೆ. ಆದರೆ, ಅದು ಅರ್ಹರ ಪ್ರತಿಭೆಯನ್ನು ಗುರುತಿಸಲು ಜಾತಿ ವ್ಯವಸ್ಥೆ ಸಮಾಜ ವಿಫಲವಾದ ಕಾರಣ ಕಿತ್ತೆಸೆಯುವುದಾಗಿದೆ. ಮೀಸಲಾತಿ ಆರ್ಥಿಕ ಅವಕಾಶ ಅಲ್ಲ. ವ್ಯಕ್ತಿಗತವೂ ಅಲ್ಲ. ಅದೊಂದು ಸಮುದಾಯದ ಭಾಗವಷ್ಟೆ ಎಂದು ಡಾ. ಕಿರಣ್ ಗಾಜನೂರು ಹೇಳಿದರು.
ಮುರಳಿ ಕಾಟಿ ಕಾರ್ಯಕ್ರಮ ನಿರೂಪಿಸಿದರು.







