ಉಡುಪಿ : ಗ್ರಾಹಕರ ದಿನಾಚರಣೆ

ಉಡುಪಿ, ಡಿ.24: ಗ್ರಾಹಕರು ತಮ್ಮ ಹಕ್ಕುಗಳಿಗೆ ತೊಂದರೆಯಾದರೆ ಪ್ರತಿಭಟಿಸುವ ಗುಣವನ್ನು ಬೆಳೆಸಿಕೊಳ್ಳುವುದರ ಮೂಲಕ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರೀಕ ಸರಬ ರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಮತ್ತು ವಾರ್ತಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕಡಿಯಾಳಿಯ ಕಮಲಾ ಬಾ ಹೈಸ್ಕೂಲ್‌ನಲ್ಲಿ ಆಯೋಜಿಸಲಾದ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಖರೀದಿಯಲ್ಲಿ ತೊಡಗುವ ಪ್ರತಿಯೊಬ್ಬ ನಾಗರಿಕ ಗ್ರಾಹಕರೇ ಆಗಿರುತ್ತಾರೆ. ಮಾರುಕಟ್ಟೆಯಲ್ಲಿ ಗ್ರಾಹಕನೇ ರಾಜ ಇದ್ದಂತೆ. ಪ್ರತಿಯೊಬ್ಬ ಗ್ರಾಹಕ ಉತ್ತಮ ಗುಣಮಟ್ಟದ ವಸ್ತುಗಳನ್ನು ಪಡೆಯುವುದು ಆತನ ಹಕ್ಕು. ಯಾವುದೇ ಉತ್ಪನ್ನ ಅಥವಾ ಸೇವೆಯಲ್ಲಿ ವ್ಯತ್ಯಯ ಕಂಡುಬಂದಲ್ಲಿ ಗ್ರಾಹಕರು ಪ್ರತಿಭಟಿಸಬೇಕು, ಇಲ್ಲವಾದಲ್ಲಿ ಉತ್ಪಾದಕರು ಕಳಪೆ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡಿ ಮೋಸ ಮಾಡುತ್ತಾರೆ. ವಸ್ತುಗಳನ್ನು ಪಡೆಯುವುದು ಯಾವುದೇ ಭಿಕ್ಷೆಯಲ್ಲ ಎಂಬುದನ್ನು ಗ್ರಾಹಕರು ಅರಿಯಬೇಕು ಎಂದರು. ಗ್ರಾಹಕರು ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಲ್ಲಿ ಗ್ರಾಹಕ ನ್ಯಾಯಾಲಯದಲ್ಲಿ ನ್ಯಾಯ ಪಡೆಯಬಹುದು. ಶಾಲಾ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಪ್ರತಿಭಟಿಸುವ ಗುಣ ಬಂದಲ್ಲಿ ಉತ್ತಮ ಗ್ರಾಹಕರು ಮೂಡಿ ಬರಲು ಸಾಧ್ಯ. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಗ್ರಾಹಕ ಕ್ಲಬ್ ಆರಂಭಿಸಬೇಕು. ಈ ಮೂಲಕ ಮಕ್ಕಳಲ್ಲಿ ಗ್ರಾಹಕ ಜಾಗೃತಿ ಮೂಡಿಸಬೇಕು ಎಂದು ಸಚಿವರು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಗ್ರಾಹಕರ ವೇದಿಕೆ ವಿಶ್ವಸ್ಥ ಎ.ಪಿ. ಕೊಡಂಚ, ಗ್ರಾಹಕರ ರಕ್ಷಣೆಗಾಗಿ ಜಾರಿಗೆ ತಂದಿರುವ ಗ್ರಾಹಕ ರಕ್ಷಣಾ ಕಾನೂನು ಅತ್ಯಂತ ಬಲಿಷ್ಠವಾಗಿದ್ದು, ಗ್ರಾಹಕರು ಕಳಪೆ ಗುಣಮಟ್ಟದ ಸರಕು ಸೇವೆಯನ್ನು ಪಡೆದಿದ್ದಲ್ಲಿ, ನಿಗಧಿತ ಅವಧಿಯೊಳಗೆ ಸೂಕ್ತ ದಾಖಲೆ ಗಳೊಂದಿಗೆ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು. ಗ್ರಾಹಕರ ವ್ಯಾಜ್ಯಗಳು ನ್ಯಾಯಾಲಯದಲ್ಲಿ ಹೆಚ್ಚಿನ ಅವಧಿಗೆ ಮುಂದೂಡದೆ ಶೀಘ್ರದಲ್ಲಿ ನ್ಯಾಯ ಒದಗಿಸಿಕೊಡಬೇಕು ಎಂದು ಹೇಳಿದರು.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆ ವಹಿಸಿ ದ್ದರು. ತಾಪಂ ಅಧ್ಯಕ್ಷೆ ನಳನಿ ಪ್ರದೀಪ್ ರಾವ್, ಬಸ್ರೂರು ಬಳಕೆದಾರರ ವೇದಿಕೆಯ ಸಂಚಾಲಕ ಸತ್ಯನಾರಾಯಣ ಉಡುಪ, ತಹಶೀಲ್ದಾರ್ ಮಹೇಶ್ಚಂದ್ರ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿರ್ದೇ ಶಕ ಎಂ.ಎನ್.ಹಿಪ್ಪರಗಿ ಉಪಸ್ಥಿತರಿದ್ದರು.
ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಗಳ ಇಲಾಖೆಯ ಉಪನಿರ್ದೇಶಕ ಎಸ್.ಯೋಗೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮಲಾ ಬ್ಯಾ ಹೈಸ್ಕೂಲ್‌ನಲ್ಲಿ ಮುಖ್ಯೋಪಧ್ಯಾಯ ಎನ್.ಎಂ. ಪೂಜಾರಿ ಸ್ವಾಗತಿಸಿದರು.
ಸುದರ್ಶನ ನಾಯಕ್ ವಂದಿಸಿದರು. ವಿದ್ಯಾರ್ಥಿನಿಯರಾದ ಅಮೃತವರ್ಷಿಣಿ ಮತ್ತು ಬಸಮ್ಮ ಕಾರ್ಯಕ್ರಮ ನಿರೂಪಿಸಿದರು.







