ಅಂಬಾನಿ-ಅದಾನಿಗೆ 1,85,000 ಕೋ.ರೂ.ಯುಪಿಎ ಸಾಲ ದಾಖಲೆಗಳನ್ನು ಬಹಿರಂಗಗೊಳಿಸಿದ ಬಿಜೆಪಿ

ಹೊಸದಿಲ್ಲಿ,ಡಿ.24: ಮೋದಿ ಸರಕಾರವು ಕಾರ್ಪೊರೇಟ್ ಕುಳಗಳ ಪರವಾಗಿದೆ ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಆರೋಪದಿಂದ ಕೆರಳಿರುವ ಬಿಜೆಪಿ, ಎನ್‌ಡಿಎ ಸರಕಾರವು ‘ಅದಾನಿ-ಅಂಬಾನಿ ಸರಕಾರ’ವಾಗಿದೆ ಎಂಬ ಟೀಕೆಗೆ ಅಂತ್ಯ ಹಾಡಲು ಇಂದು ಕೆಲವು ದಾಖಲೆಗಳನ್ನು ಬಹಿರಂಗಗೊಳಿಸುವ ಮೂಲಕ ಕಾಂಗ್ರೆಸ್‌ಗೆ ತಿರುಗೇಟು ನೀಡಿದೆ.
ಸರಕಾರವು ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಕಾರ್ಯಾಚರಿಸುತ್ತಿದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಸಹಾರಾ ಮತ್ತು ಬಿರ್ಲಾ ಉದ್ಯಮ ಸಮೂಹ ಗಳಿಂದ ಲಂಚ ಪಡೆದಿದ್ದಾರೆ ಎಂಬ ರಾಹುಲ್ ಆರೋಪಗಳಿಗೆ ಉತ್ತರಿಸಿರುವ ಬಿಜೆಪಿಯು, ವಾಸ್ತವದಲ್ಲಿ ಪ್ರಮುಖ ಉದ್ಯಮ ಸಂಸ್ಥೆಗಳ ಯುಪಿಎ ಅವಧಿಯ ಸಾಲಗಳ ಮರುವಸೂಲಿ ಕಾರ್ಯವನ್ನು ಆರಂಭಿಸಿರುವುದೇ ಎನ್‌ಡಿಎ ಸರಕಾರ ಎಂದು ಹೇಳಿದೆ.
ಇಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಶ್ರೀಕಾಂತ ಶರ್ಮಾ ಅವರು, ಯುಪಿಎ ಆಡಳಿತದ ಅವಧಿಯಲ್ಲಿ ಅದಾನಿ ಗುಂಪಿಗೆ 72,000 ಕೋ.ರೂ. ಮತ್ತು ಅಂಬಾನಿ ಗುಂಪಿಗೆ 1,13,000 ಕೋ.ರೂ.ಸಾಲಗಳನ್ನು ಮಂಜೂರು ಮಾಡಲಾಗಿತ್ತು. ಈ ಎರಡು ಉದ್ಯಮ ಸಮೂಹಗಳು ಸೇರಿದಂತೆ ಹಲವಾರು ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡಿದ್ದ ಸಾಲಗಳ ಮರುವಸೂಲಿ ಕಾರ್ಯ 2014ರಲ್ಲಿ ಮೋದಿಯವರು ಅಧಿಕಾರಕ್ಕೆ ಬಂದ ನಂತರವಷ್ಟೇ ಆರಂಭಗೊಂಡಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ‘ದಾನ’ಗಳನ್ನು ನೀಡಲು ಹೆಚ್ಚಿನ ಆಸಕ್ತಿ ವಹಿಸಿತ್ತು ಮತ್ತು ಮೋದಿ ಸರಕಾರವು ‘ವಸೂಲಿ’ಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದೆ ಎಂದ ಅವರು, ತನ್ನ ವಾದಕ್ಕೆ ಸಮರ್ಥನೆಯಾಗಿ ಬ್ಯಾಂಕ್ ವರದಿಗಳು ಮತ್ತು ಇತರ ದಾಖಲೆಗಳ ಉದ್ದನೆಯ ಪಟ್ಟಿಯನ್ನೇ ಸುದ್ದಿಗಾರೊಂದಿಗೆ ಹಂಚಿಕೊಂಡರು.
2005-2013ರ ನಡುವೆ ವಿವಿಧ ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡಲಾಗಿದ್ದ 36.5 ಲಕ್ಷ ಕೋಟಿ ರೂ.ಗಳ ಸಾಲಗಳನ್ನು ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರಕಾರದ ಎರಡು ಆಡಳಿತಾವಧಿಗಳಲ್ಲಿ ಮನ್ನಾ ಮಾಡಿರುವುದನ್ನು ಈ ದಾಖಲೆಗಳು ಬೆಟ್ಟು ಮಾಡಿವೆ.
ಮೋದಿ ಪ್ರಧಾನಿಯಾದ ಬಳಿಕ ಅದಾನಿಗಳು ಮತ್ತು ಅಂಬಾನಿಗಳಿಗೆ ಹೆಚ್ಚಿನ ಒಲವು ತೋರಿಸಲಾಗುತ್ತಿದೆ ಎಂಬ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳ ಆರೋಪಗಳನ್ನು ಅವುಗಳ ವಿರುದ್ಧವೇ ತಿರುಗಿಸುವ ಉದ್ದೇಶವನ್ನು ಈ ದಾಖಲೆಗಳು ಹೊಂದಿವೆ. ಬ್ಯಾಂಕುಗಳು ಸಾವಿರಾರು ಕೋ.ರೂ.ಸಾಲದ ಮರುವಸೂಲಾತಿ ಕ್ರಮಕ್ಕೆ ಮುಂದಾದ ಬೆನ್ನಿಗೇ ಬ್ರಿಟನ್ನಿಗೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ ಮಲ್ಯ ಅವರ ಬಗ್ಗೆ ಎನ್‌ಡಿಎ ಸರಕಾರವು ಉದಾರತೆಯನ್ನು ಪ್ರದರ್ಶಿಸಿದೆ ಎಂಬ ಆರೋಪದ ವಿರುದ್ಧವೂ ಬಿಜೆಪಿ ತೀವ್ರ ದಾಳಿ ನಡೆಸಿದೆ.
ಮಲ್ಯ 1,450 ಕೋ.ರೂ.ಗೂ ಹೆಚ್ಚಿನ ಸಾಲವನ್ನು ಮರುಪಾವತಿಸಲು ವಿಫಲ ಗೊಂಡಾಗ 2012ರಲ್ಲಿ ಎಸ್‌ಬಿಐ ಅವರ ಉದ್ಯಮ ಸಮೂಹದ ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಿತ್ತು. ಆದರೂ ಮಲ್ಯರಿಗೆ ಮತ್ತೆ 1,500 ಕೋ.ರೂ.ಸಾಲ ನೀಡಲಾಗಿತ್ತು. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಮಲ್ಯರಿಂದ ಸಾಲ ವಸೂಲಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದೂ ಬಿಜೆಪಿಯೇ ಎಂದು ಶರ್ಮಾ ಹೇಳಿದರು.ಕಿಂಗ್‌ಫಿಷರ್ ಸಮೂಹದ ಸಾಲದ ಮರುವಸೂಲಿಗಾಗಿ 700 ಕೋ.ರೂ.ವೌಲ್ಯದ ಮಲ್ಯರ ಆಸ್ತಿಗಳನ್ನು ಹರಾಜು ಹಾಕಲಾಗುತ್ತಿದೆ ಎಂದರು.
ಅಂಬಾನಿ,ಅದಾನಿ ಮತ್ತು ಮಲ್ಯ ಕಳೆದ ಎರಡೂವರೆ ವರ್ಷಗಳಲ್ಲಿ ಹುಟ್ಟಿದ್ದಲ್ಲ. ಕಾಂಗ್ರೆಸ್ ಪಕ್ಷದಂತೆ ಇವರು ಕೂಡ ಹಳಬರಾಗಿದ್ದಾರೆ. ಅವರು ಉದ್ಯಮ ರಂಗದಲ್ಲಿ ಬೆಳೆಯತೊಡಗಿದಾಗ ರಾಹುಲ್ ಗಾಂಧಿ ಇನ್ನೂ ಹುಟ್ಟಿಯೇ ಇರಲಿಲ್ಲ. ಹೀಗಾಗಿ ಈ ಉದ್ಯಮ ಸಮೂಹಗಳು ಕಳಂಕಿತ ಹಿನ್ನೆಲೆಯನ್ನು ಹೊಂದಿದ್ದಿದ್ದರೆ ಅವು ಹೇಗೆ ಹುಲುಸಾಗಿ ಬೆಳೆದವು ಎನ್ನುವುದಕ್ಕೆ ಕಾಂಗ್ರೆಸ್ ಪಕ್ಷವೇ ವಿವರಣೆಯನ್ನು ನಿಡಬೇಕಿದೆ ಎಂದು ಅವರು ಹೇಳಿದರು.
ಮಲ್ಯ ಮತ್ತು ಕಿಂಗ್‌ಫಿಷರ್ ಬಗ್ಗೆ ಯುಪಿಎ ಸರಕಾರ ಉದಾರ ಭಾವನೆಯನ್ನು ತಳೆದಿತ್ತು ಎಂಬ ಬಗ್ಗೆ ಸಾಕಷ್ಟು ವರದಿಗಳಿವೆ. ರಾಹುಲ್ ಇತರರಿಂದ ಉತ್ತರಗಳನ್ನು ಬಯಸುವ ಮುನ್ನ ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದರು.
ಕೆಲವು ಕಾರ್ಪೊರೇಟ್ ಸಂಸ್ಥೆಗಳ ‘ಕೆಟ್ಟ ಸಾಲಗಳನ್ನು ’ ಮನ್ನಾ ಮಾಡಲಾಗಿದೆ ಎಂಬ ಇತ್ತೀಚಿನ ಆರೋಪಗಳನ್ನು ತಿರಸ್ಕರಿಸಿದ ಶರ್ಮಾ,ಕೆಟ್ಟ ಸಾಲಗಳ ಅನುಪಾತ 2005-06 ಮತ್ತು 2013-14ರ ನಡುವಿನ ಅವಧಿಯಲ್ಲಿ ಶೇ.132ರಷ್ಟು ಹೆಚ್ಚಳ ಕಂಡಿತ್ತು, ಆದರೆ ಇಷ್ಟೊಂದು ಶೀಘ್ರವಾಗಿ ಈ ಅನುಪಾತ ಏರಿಕೆಯಾಗಿದ್ದು ಹೇಗೆ ಎಂಬ ಬಗ್ಗೆ ಕಾಂಗ್ರೆಸ್ ಬಳಿ ಯಾವುದೇ ವಿವರಣೆಯಿಲ್ಲ. ಕೆಟ್ಟ ಸಾಲಗಳ ಫಲಾನುಭವಿಗಳು ಯಾರಾಗಿದ್ದರು ಎಂದು ರಾಹುಲ್ ವಿವರಿಸಬೇಕು ಎಂದು ಹೇಳಿದರು.







