ಬಂಟ್ವಾಳ : ಸರಕಾರಿ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ

ಬಂಟ್ವಾಳ, ಡಿ. 12: ಪಂಚಾಯತ್ ರಾಜ್ ವ್ಯವಸ್ಥೆಯ ತಿದ್ದುಪಡಿ ಜಿಲ್ಲಾಪಂಚಾಯತ್‌ಗೆ ಹೆಚ್ಚು ಶಕ್ತಿ ತಂದುಕೊಟ್ಟಿದೆ. ಆ ಮೂಲಕ ಶೈಕ್ಷಣಿಕ ಕ್ಷೇತ್ರದ ಹೊಸ ಕ್ರಾಂತಿಗೆ ಕಾರಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಬೆಂಜನಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ 37.25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ಹಣ ನೇರವಾಗಿ ಜಿ.ಪಂ.ಗೆ ಬರುವುದರ ಮೂಲಕ ಸಾಕಷ್ಟು ಅಭಿವೃದ್ದಿ ಕಾರ್ಯಕ್ರಮಗಳು ಪಾರದರ್ಶಕವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದ ಅವರು ಸರ್ವಶಿಕ್ಷಣ ಅಭಿಯಾನದ ಮೂಲಕ ದ.ಕ.ಜಿಲ್ಲೆಯಲ್ಲಿ 100 ಕೋಟಿಗೂ ಹೆಚ್ಚಿನ ಮೊತ್ತದಲ್ಲಿ ಶಾಲಾ ಕಟ್ಟಡಗಳ ನಿರ್ಮಾಣ ಕಾಮಗಾರಿ ನಡೆದಿದೆ ಎಂದು ಸ್ಮರಿಸಿಕೊಂಡರು.
ಶಾಲೆಯ ಸರ್ವಕಾರ್ಯಗಳಲ್ಲಿ ಮಕ್ಕಳ ಪೋಷಕರು ಪೂರಕವಾಗಿ ತೊಡಗಿಸಿಕೊಂಡಾಗ ಶಾಲಾ ವಾತವರಣವು ಸುಂದರವಾಗಿರುತ್ತದೆ. ಬೆಂಜನಪದವಿನ ಶಾಲಾಭಿವೃದ್ದಿ ಸಮಿತಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದೆ ಎಂದವರು ಶ್ಲಾಘಿಸಿದರು.
ಆಂಗ್ಲ ಭಾಷ ವ್ಯಾಮೋಹ ಸಾಮಾನ್ಯ, ಆದರೆ ಆ ಮನೋಭಾವ ಸರಕಾರಿ ಶಾಲೆಗಳನ್ನು ದೂರಮಾಡದಿರಲಿ ಎಂದ ಅವರು ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು ಪೋಷಕರು ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಕರೆ ನೀಡಿದರು.
ಸಂಸದ ನಳಿನ್ ಕುಮಾರ್ ಕಟೀಲು ನೂತನ ಕಟ್ಟಡ ಉದ್ಘಾಟಿಸಿದರು.
ಅವರು ಮಾತನಾಡಿ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಸೌಲಭ್ಯಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರ, ಸರ್ಕಾರಿ ಶಾಲೆಗಳಿಗೆ ನೀಡುತ್ತಿದೆ. ಕುಗ್ರಾಮವೊಂದರ ಸರಕಾರಿ ಶಾಲೆಯಲ್ಲಿ ಕಲಿತವರು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಈ ಶಾಲೆಯಲ್ಲಿಯೇ ಕಲಿತ ಬಿ.ರಮಾನಾಥ ರೈ ಇಂದು ಸಚಿವರಾಗಿದ್ದಾರೆ ಎಂದ ಅವರು ತಾನು ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯಾಗಿದ್ದೇನೆ ಎಂದು ನೆನಪಿಸಿಕೊಂಡರು. ಸರಕಾರಿ ಶಾಲೆಗಳು ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಖಾಸಗಿ ಶಾಲೆಯ ಬಗ್ಗೆ ಪೋಷಕರಿಗಿರುವ ವ್ಯಾಮೋಹ ಬದಲಾಗಬೇಕು ಎಂದರು.
ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಅಮ್ಮುಂಜೆ ಗ್ರಾ.ಪಂ.ಅಧ್ಯಕ್ಷೆ ಪ್ರೇಮಲತಾ, ಉಪಾಧ್ಯಕ್ಷ ವಾಮನ ಆಚಾರ್ಯ, ಬೆಂಜನಪದವು ಸರಕಾರಿ ಕಾಲೇಜಿನ ಪ್ರಾಂಶುಪಾಲ ಟಿ.ಗಿರೀಶ್ಚಂದ್ರ, ಗುತ್ತಿಗೆದಾರ ಪುಷ್ಪರಾಜ ಶೆಟ್ಟಿ, ಪ್ರೌಢಶಾಲೆ ಮತ್ತು ಕಾಳೇಜು ಅಭಿವೃದ್ದಿ ಸಮಿತಿ ಕಾರ್ಯಧ್ಯಕ್ಷ ಚಮದ್ರಶೇಖರ ಭಂಡಾರಿ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀದೇವಿ ಸ್ವಾಗತಿಸಿ, ಶಿಕ್ಷಕ ದೇವದಾಸ್ ವಂದಿಸಿದರು.
ಶಿಕ್ಷಕಿ ಸುಜಾತ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.







