618 ಶತಕೋಟಿ ಡಾಲರ್ ರಕ್ಷಣಾ ಬಜೆಟ್‌ಗೆ ಒಬಾಮ ಸಹಿ
ಭಾರತದೊಂದಿಗಿನ ರಕ್ಷಣಾ ಸಹಕಾರಕ್ಕೆ ಉತ್ತೇಜನ

ವಾಶಿಂಗ್ಟನ್, ಡಿ.24: ಅಮೆರಿಕದ 2017ನೆ ಸಾಲಿನ 618 ಶತಕೋಟಿ ಡಾಲರ್‌ಗಳ ರಕ್ಷಣಾ ಬಜೆಟ್‌ಗೆ ಅಧ್ಯಕ್ಷ ಬರಾಕ್ ಒಬಾಮ ಸಹಿ ಹಾಕಿದ್ದಾರೆ. ಬಜೆಟ್ ಭಾರತದೊಂದಿಗಿನ ರಕ್ಷಣಾ ಸಹಕಾರವನ್ನು ವೃದ್ಧಿಸಿದೆ ಹಾಗೂ ಪಾಕಿಸ್ತಾನವು ಹಕ್ಕಾನಿ ಜಾಲದ ವಿರುದ್ಧ ಗಮನಿಸಬಹುದಾದ ಕ್ರಮ ಕೈಗೊಳ್ಳುತ್ತಿದೆಯೆಂಬ ಪ್ರಮಾಣೀಕರಣದ ಮೇಲೆ ಸುಮಾರು ಅರ್ಧದಷ್ಟು ನಿಧಿಯನ್ನು ಒದಗಿಸಲಿದೆ.
ಪ್ರಕೃತ ಹವಾಯಿಯಲ್ಲಿ ರಜೆಯ ಮೇಲಿರುವ ಒಬಾಮ, ಶುಕ್ರವಾರ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆ (ಎನ್‌ಡಿಎಎ)-2017ಕ್ಕೆ ಸಹಿ ಹಾಕಿದ್ದಾರೆ. ಭಾರತವನ್ನು ಅಮೆರಿಕದ ‘ಮಹತ್ವದ ರಕ್ಷಣಾ ಭಾಗಿದಾರನೆಂದು’ ಗುರುತಿಸಲುಗತ್ಯ ಕ್ರಮ ಕೈಗೊಳ್ಳುವಂತೆ ರಕ್ಷಣಾ ಕಾರ್ಯದರ್ಶಿ ಹಾಗೂ ರಾಜ್ಯಾಂಗ ಕಾರ್ಯದರ್ಶಿಗಳಿಗೆ ಬಜೆಟ್ ಸೂಚಿಸಿದೆ.
ಎನ್‌ಡಿಎಎ-2017 ಭಾರತ ಮತ್ತು ಅಮೆರಿಕದ ನಡುವಣ ರಕ್ಷಣಾ ಸಹಕಾರವನ್ನು ಹೆಚ್ಚಿಸುತ್ತದೆಂದು ಸೆನೆಟ್ ಸಶಸ್ತ್ರ ಸೇವಾ ಸಮಿತಿಯ ಅಧ್ಯಕ್ಷ ಸೆನೆಟರ್ ಜಾನ್ ಮೆಕೈನ್ ಬಿಡುಗಡೆಗೊಳಿಸಿರುವ, ಮಸೂದೆಯ ಸಾರಾಂಶ ತಿಳಿಸಿದೆ.
ಭಾರತ-ಅಮೆರಿಕ ರಕ್ಷಣಾ ಸಂಬಂಧಕ್ಕಾಗಿ ಚೌಕಟ್ಟಿನ ಯಶಸ್ಸನ್ನು ಅಂತಃ ಸಾಂಸ್ಥಿಕ ನೀತಿ ಸಮನ್ವಯದ ಮೂಲಕ ಜಾರಿಗೊಳಿಸಲು ಹಾಗೂ ಖಚಿತಪಡಿಸಲು, ಕಾರ್ಯಕಾರಿ ಶಾಖೆಯೊಳಗಿನ, ರಕ್ಷಣಾ ಖರೀದಿ ಮತ್ತು ತಂತ್ರಜ್ಞಾನದಲ್ಲಿ ಅನುಭವವಿರುವ ವ್ಯಕ್ತಿಯೊಬ್ಬನನ್ನು ನಿಯೋಜಿಸುವಂತೆ ಆಡಳಿತಕ್ಕೆ ಬಜೆಟ್ ಸೂಚಿಸಿದೆ.
ಎನ್‌ಡಿಎಎ, ಇತರ ವಿಷಯಗಳೊಂದಿಗೆ 1.2 ಶತಕೋಟಿ ಡಾಲರ್‌ಗಳ ಐಎಸ್‌ಐಎಲ್ ವಿರೋಧಿ ನಿಧಿಯನ್ನು ಸೃಷ್ಟಿಸುತ್ತದೆ. 90 ಕೋಟಿ ಡಾಲರ್ ಮೈತ್ರಿಕೂಟ ಬೆಂಬಲ ನಿಧಿಯಿಂದ 40 ಕೋಟಿ ಡಾಲರ್ ಪಡೆಯುವ ಅರ್ಹತೆಗಳಿಸಲು ಪಾಕಿಸ್ತಾನಕ್ಕೆ 4 ಶರ್ತಗಳನ್ನು ಅದು ವಿಧಿಸಿದೆ.
ಪಾಕಿಸ್ತಾನವು ಹಕ್ಕಾನಿ ಜಾಲದ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸಿದೆ ಹಾಗೂ ಇಸ್ಲಾಮಾಬಾದ್, ತನ್ನ ಯಾವುದೇ ಪ್ರಾಂತ್ಯವನ್ನು ಹಕ್ಕಾನಿ ಜಾಲವು ಸುರಕ್ಷಿತ ಸ್ವರ್ಗವಾಗಿ ಉಪಯೋಗಿಸುವುದನ್ನು ತಡೆಯುವ ಬದ್ಧತೆ ಪ್ರದರ್ಶಿಸಲು ಕ್ರಮ ಕೈಗೊಂಡಿದೆಯೆಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಕಾಂಗ್ರೆಸ್‌ಗೆ ಪ್ರಮಾಣೀಕರಿಸಬೇಕೆಂಬುದು ಅವುಗಳಲ್ಲಿ ಸೇರಿವೆ.
ಈ ವರ್ಷಾರಂಭದಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಶ್ಟನ್ ಕಾರ್ಟರ್ ಪಾಕಿಸ್ತಾನಕ್ಕೆ ಅಂತಹ ಪ್ರಮಾಣ ಪತ್ರ ನೀಡಲು ನಿರಾಕರಿಸಿದ್ದರು. ಆದರಿಂದಾಗಿ ಪಾಕಿಸ್ತಾನಕ್ಕೆ ಮೈತ್ರಿಕೂಟ ಬೆಂಬಲ ನಿಧಿಯಿಂದ 30 ಕೊಟಿ ಡಾಲರ್ ನೆರವು ನೀಡಿರಲಿಲ್ಲ.







