ಮಲಯಾಳದ ವಿರುದ್ಧ ಕೇಂದ್ರದ ಪಕ್ಷಪಾತ: ಚೆನ್ನಿತ್ತಿಲ ಆರೋಪ

ಕೊಚ್ಚಿ, ಡಿ.24: 2017-18ರಲ್ಲಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ನಡೆಸಲಾಗುವ ‘ನೀಟ್’ ಪರೀಕ್ಷೆ ಬರೆಯಲು ಸೂಚಿಸಿರುವ ಪ್ರಾದೇಶಿಕ ಭಾಷೆಗಳ ಪಟ್ಟಿಯಲ್ಲಿ ಮಲಯಾಳ ಭಾಷೆಯನ್ನು ಸೇರಿಸದಿರುವುದು ಕೇಂದ್ರ ಸರಕಾರದ ಪಕ್ಷಪಾತತನದ ಧೋರಣೆಗೆ ನಿದರ್ಶನವಾಗಿದೆ ಎಂದು ಕೇರಳ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗಿರುವ ರಮೇಶ್ ಚೆನ್ನಿತ್ತಲ ದೂರಿದ್ದಾರೆ.
ಮಲಯಾಳ ಭಾಷೆಗಾಗಿರುವ ಅನ್ಯಾಯವನ್ನು ತಕ್ಷಣ ಕೇಂದ್ರ ಸರಕಾರದ ಗಮನಕ್ಕೆ ತರಬೇಕು ಮತ್ತು ಮಲಯಾಳ ಭಾಷೆಯನ್ನೂ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಬೇಕು ಎಂದು ಅವರು ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಸರಕಾರವನ್ನು ಆಗ್ರಹಿಸಿದ್ದಾರೆ.
ಮಲಯಾಳ ಮತ್ತು ಕನ್ನಡ ಭಾಷೆಯನ್ನು ಪಟ್ಟಿಯಿಂದ ಕೇಂದ್ರ ಸರಕಾರ ಕೈಬಿಟ್ಟಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ , ಕನ್ನಡ ಮತ್ತು ಮಲಯಾಳ ಎರಡನ್ನೂ ಪಟ್ಟಿಯಲ್ಲಿ ಸೇರಿಸಬೇಕು ಎಂದವರು ಉತ್ತರಿಸಿದರು.
ಸರಕಾರ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಬಹುತೇಕ ವಿದ್ಯಾರ್ಥಿಗಳಿಗೆ ಇಂಗ್ಲೀಷ್‌ಗಿಂತ ತಮ್ಮ ಮಾತೃಭಾಷೆ ಹೆಚ್ಚು ರೂಢಿಯಾಗಿರುತ್ತದೆ. ಆದ್ದರಿಂದ ಮಲಯಾಳ ಭಾಷೆಯನ್ನು ಪಟ್ಟಿಯಲ್ಲಿ ಸೇರಿಸದಿದ್ದರೆ ಮೆಡಿಕಲ್ ಶಿಕ್ಷಣಕ್ಕೆ ಸೇರುವ ಮಲಯಾಳಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಬಹುದು ಎಂದವರು ತಿಳಿಸಿದ್ದಾರೆ.







