ಸ್ಕೂಟರ್ ಢಿಕ್ಕಿ: ಸಹ ಸವಾರ ಸಾವು

ಪಡುಬಿದ್ರಿ, ಡಿ.24 : ಸ್ಕೂಟರ್‌ಗೆ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸಹಸವಾರ ಮೃತಪಟ್ಟ ಘಟನೆ ಎರ್ಮಾಳು ಬಡಾದಲ್ಲಿ ನಡೆದಿದೆ.
ಮೃತರನ್ನು ಉಚ್ಚಿಲದ ಪೊಂಕ್ರಪಡ್ಪು ನಿವಾಸಿ ಅಬೂಬಕ್ಕರ್ (60) ಎಂದು ಗುರುತಿಸಲಾಗಿದೆ.
ಎರ್ಮಾಳು ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ತುಂಬಿಸಿ ಹೆದ್ದಾರಿಯಲ್ಲಿ ಸಂಚರಿಸುತಿದ್ದಾಗ ಹಿಂಬದಿಯಿಂದ ಟಿಪ್ಪರ್ ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತು. ಢಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್‌ನಲ್ಲಿದ್ದ ಸವಾರ ಮುಹಮ್ಮದ್ ಮಸೂರ್ ಮತ್ತು ಸಹಸವಾರ ಅಬೂಬಕ್ಕರ್ ರಸ್ತೆಗೆ ಎಸೆಯಲ್ಪಟ್ಟರು.
ತೀವ್ರಗಾಯಗೊಂಡ ಸಹಸವಾರ ಅಬೂಬಕ್ಕರ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು. ಮೃತರು ಪತ್ನಿ, ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಶುಭಕಾರ್ಯದ ಸಂಭ್ರಮ:
ಅಬೂಬಕ್ಕರ್ ಪರಿಸರದಲ್ಲಿ ಚಿರಪರಿಚಿತರಾಗಿದ್ದು, ಎಲ್ಲರೊಂದಿಗೆ ಬೆರೆಯುವವಾಗಿದ್ದರು. ಇತ್ತೀಚೆಗಷ್ಟೆ ಸಾಲ ಮಾಡಿ ನೂತನ ಮನೆಯೊಂದನ್ನು ನಿರ್ಮಿಸಿದ್ದರು.
ಭಾನುವಾರ ಮನೆಯ ಗೃಹಪ್ರವೇಶ ಮತ್ತು ಮುಹಮ್ಮದ್ ಮಸೂರ್ ಮತ್ತು ಫಕೀರ್ ಎಂಬವರ ಮದುವೆ ಇದೇ 28ಕ್ಕೆ ನಿಶ್ಚಯಿಸಲಾಗಿತ್ತು. ಮದುವೆ ಪ್ರಯುಕ್ತ ಭಾನುವಾರ ಗೃಹಪ್ರವೇಶ ಮತ್ತು ಮೆಹಂದಿ ಕಾರ್ಯಕ್ರಮ ನಡೆಯಬೇಕಿತ್ತು. ಈ ಬಗ್ಗೆ ಎರ್ಮಾಳಿನ ಮಸೀದಿಯ ಗುರುಗಳಿಗೆ ಹೇಳಿಕೆ ನೀಡಲೆಂದು ತನ್ನ ಪುತ್ರ ಮಸೂರ್ ಅವರೊಂದಿಗೆ ಸ್ಕೂಟರ್‌ನಲ್ಲಿ ತೆರಳಿದ್ದರು. ಎರ್ಮಾಳು ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ತುಂಬಿಸಿ ಯೂಟರ್ನ್‌ಗಾಗಿ ಹೋಗುತಿದ್ದಾಗ ಈ ಅಪಘಾತ ಸಂಭವಿಸಿದೆ.







