ಅಕ್ರಮ-ಸಕ್ರಮ ಮಂಜೂರಾತಿ ತ್ವರಿತ: ಶಾಸಕ ಬಾವಾ

ಮಂಗಳೂರು, ಡಿ.24: ಹಲವು ವರ್ಷಗಳಿಂದ ಅರ್ಜಿ ಸಲ್ಲಿಸಿ ವಿಲೇವಾರಿಗೆ ಬಾಕಿ ಇರುವ ಅಕ್ರಮ-ಸಕ್ರಮ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಭೂಮಿ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಂಗಳೂರು ಉತ್ತರ ಶಾಸಕ ಬಿ.ಎ. ಮೊದಿನ್ ಬಾವಾ ತಿಳಿಸಿದ್ದಾರೆ.
ಅವರು ಮಂಗಳೂರು ತಾಲೂಕು ಕಚೇರಿಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಅಕ್ರಮ-ಸಕ್ರಮ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರಕ್ಕೆ ಸಂಬಂಧಿಸಿದ ಕಲಂ 50-53ರಡಿ ಅಕ್ರಮ ಸಕ್ರಮ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಅರ್ಹರಿಗೆ ಭೂಮಿ ಹಕ್ಕುಪತ್ರ ನೀಡಲು ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ಅಕ್ರಮ-ಸಕ್ರಮ ಸಮಿತಿಯ ಸಭೆಯನ್ನು ಪ್ರತೀ ವಾರ ತಾಲೂಕು ಕಚೇರಿಯಲ್ಲಿ ನಡೆಸಲಾಗುತ್ತದೆ. ಈಗಾಗಲೇ ಹಲವಾರು ಪ್ರಕರಣಗಳನ್ನು ಇತ್ಯರ್ಥಪಡಿಸಿ, ಮಂಜೂರಾತಿ ನೀಡಲಾಗಿದೆ. ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳು ಸೇರಿದಂತೆ ಮಂಗಳೂರು ಉತ್ತರ ಕ್ಷೇತ್ರದ ಅಕ್ರಮ-ಸಕ್ರಮಗಳ ಎಲ್ಲಾ ಅರ್ಜಿಗಳನ್ನು ತ್ವರಿತ ರೀತಿಯಲ್ಲಿ ಇತ್ಯರ್ಥ ಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು.





