ಹಾಸ್ಯ ಪಾತ್ರದಿಂದ ಯಕ್ಷಗಾನ ಪರಿಪೂರ್ಣ: ಪೇಜಾವರ ಶ್ರೀ

ಉಡುಪಿ, ಡಿ.24: ನವರಸ ಕಲೆಗಳಲ್ಲಿ ಹಾಸ್ಯಕ್ಕೆ ಪ್ರಮುಖ ಸ್ಥಾನ. ಯಕ್ಷ ಗಾನ ಪರಿಪೂರ್ಣವಾಗಬೇಕಾದರೆ ಹಾಸ್ಯ ಪಾತ್ರ ಅತಿಮುಖ್ಯ. ಯಕ್ಷಗಾನ ಹಾಸ್ಯ ಪಾತ್ರದ ಬಣ್ಣಗಾರಿಕೆ, ಉಡುಗೆ, ಮಾತುಕತೆಯೇ ವಿಶೇಷ ನಗುವನ್ನು ತರಿಸುತ್ತದೆ. ಹೀಗೆ ವಿಶಿಷ್ಟವಾದ ಹಾಸ್ಯದ ಸಂಯೋಜನೆಯನ್ನು ಯಕ್ಷಗಾನ ಹೊಂದಿದೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ‘ರಸಿಕ ರತ್ನ’ ವಿಟ್ಲ ಜೋಷಿ ಪ್ರತಿಷ್ಠಾನ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಸಹಯೋಗ ದೊಂದಿಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾದ ಎರಡು ದಿನಗಳ ‘ರಸಿಕರತ್ನ’ ವಿಟ್ಲ ಜೋಷಿ ಜನ್ಮ ಶತಮಾನೋತ್ಸವ ಸರಣಿ ಕಾರ್ಯ ಕ್ರಮದ ಸಮಾರೋಪ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಿಟ್ಲ ಜೋಶಿಯವರು ಯಕ್ಷಗಾನದಲ್ಲಿ ಪ್ರೇಕ್ಷಕರನ್ನು ನಗಿಸುವ ಮೂಲಕ ಆ ಕಲೆಗೆ ಶೋಭೆ ತಂದುಕೊಟ್ಟಿದ್ದರು ಎಂದು ಪೇಜಾವರ ಶ್ರೀಗಳು ಹೇಳಿದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವ ಚನ ನೀಡಿದರು. ತಲ್ಲೂರು ಶಿವರಾಮ ಶೆಟ್ಟಿ ಅವರ ‘ಪಥದೀಪಿಕಾ ಮತ್ತು ಹೊಂಗಿರಣ’ ಪುಸ್ತಕವನ್ನು ಸ್ವಾಮೀಜಿ ಈ ಸಂದರ್ಭದಲ್ಲಿ ಬಿಡುಗಡೆ ಮಾಡಿ ದರು. ನಿವೃತ್ತ ಪ್ರಾಂಶುಪಾಲ ವಾಸುದೇವ ರಾವ್ ಪುಸ್ತಕ ಪರಿಚಯ ಮಾಡಿ ದರು.
ಅಂಬಲಪಾಡಿ ಬಿಲ್ಲವ ಸಮಾಜದ ಅಧ್ಯಕ್ಷ ಗೋಪಾಲ್ ಸಿ.ಬಂಗೇರ, ವಿಟ್ಲ ಜೋಶಿ ಅವರ ಪತ್ನಿ ಸಾವಿತ್ರಮ್ಮ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಡಾ.ಹರೀಶ್ ಜೋಶಿ ಉಪಸ್ಥಿತರಿದ್ದರು.
ಟ್ರಸ್ಟ್‌ನ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು.
ಪ್ರತಿಷ್ಠಾನ ಕಾರ್ಯದರ್ಶಿ ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮಣಿಪಾಲ ಪವನ ಬಾಲಚಂದರ ಆಚಾರ್ ಮತ್ತು ಬಳಗದಿಂದ ವೀಣಾ ವಾದನ ಮತ್ತು ಅತಿಥಿ ಕಲಾವಿದರಿಂದ ‘ಚಂದ್ರಾವಳಿ ವಿಲಾಸ’ ಯಕ್ಷಗಾನ ಪ್ರದರ್ಶನ ನಡೆಯಿತು.







