ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಲು ವೀರೇಂದ್ರ ಹೆಗ್ಗಡೆ ಕರೆ

ಬೆಳ್ತಂಗಡಿ , ಡಿ.24 : ರಾಜ್ಯದಲ್ಲಿ ಎಲ್ಲಾ ಶ್ರದ್ಧಾ ಕೇಂದ್ರಗಳನ್ನು (ದೇವಸ್ಥಾನ, ಚರ್ಚ್, ಮಸೀದಿ ಹಾಗೂ ಭೂತಾಲಯ) 2017ರ ಜ.13ರೊಳಗೆ ಒಳಗಿನ ಹಾಗೂ ಹೊರಗಿನ ಪರಿಸರವನ್ನು ಶುಚಿಗೊಳಿಸಿ ಪಾವಿತ್ರ್ಯ ಕಾಪಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕರೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನಘಟ್ಟದಲ್ಲಿ ಶನಿವಾರ ವೀಕ್ಷಣೆ ಬಳಿಕ ತಮ್ಮ ನಿವಾಸದಲ್ಲಿಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆ ಪಾಲನೆಯೊಂದಿಗೆ ಪಾವಿತ್ರ್ಯ ರಕ್ಷಣೆ ಬಗ್ಯೆ ಭಕ್ತರಲ್ಲಿ ಜಾಗೃತಿ ಮೂಡಿಸಬೇಕು. ಅವರು ಶ್ರದ್ಧಾಕೇಂದ್ರಗಳಿಗೆ ಬರುವಾಗ ಮಾನಸಿಕವಾಗಿ ಶುಚಿತ್ವ ಕಾಪಾಡಲು ಸಿದ್ಧರಾಗಬೇಕು, ಬದ್ಧರಾಗಬೇಕು. ಎಲ್ಲಾ ಕೇಂದ್ರಗಳಲ್ಲಿ ಶುಚಿತ್ವ ಕಾಪಾಡವ ಬಗ್ಯೆ ಅಲ್ಲಲ್ಲಿ ಫಲಕಗಳನ್ನು ಹಾಕಬೇಕು. ಸಾಕಷ್ಟು ಶೌಚಾಲಯಗಳನ್ನು ನಿರ್ಮಿಸಬೇಕು. ಕಸಕಡ್ಡಿ ಹಾಗೂ ತ್ಯಾಜ್ಯ ಬಿಸಾಡಲು ಸೂಕ್ತ ವ್ಯವಸ್ಥೆ ಮಾಡಬೇಕು. ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಶ್ರದ್ಧಾಕೇಂದ್ರಗಳಲ್ಲಿ ಮಡಿ ಅಂದರೆ ಅಸ್ಪಶ್ಯತೆ ಅಲ್ಲ. ಪಾವಿತ್ರ್ಯ ರಕ್ಷಣೆಗೆ ಪರಿಶುದ್ಧರಾಗಿರುವುದು ಎಂದು ಅರ್ಥ. ಶ್ರದ್ಧಾಕೇಂದ್ರಗಳ ಒಳಗೆ ಮತ್ತು ಹೊರಗೆ ಸ್ವಚ್ಛತೆ ಕಾಪಾಡಿದರೆ ವಿಶೇಷ ಶಕ್ತಿ ಸಂಚಯವಾಗಿ ಸಾನ್ನಿಧ್ಯ ವೃದ್ಧಿಯಾಗುತ್ತದೆ. ಭಕ್ತರ ಅಭೀಷ್ಟಗಳು ನೆರವೇರುತ್ತವೆ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿರುವ 18000 ಒಕ್ಕೂಟಗಳ ಮೂಲಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ ಆಯೋಜಿಸಲಾಗಿದೆ. 2017ರ ಜನವರಿ 13ರೊಳಗೆ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಕಳೆದ 5 ದಿನಗಳಲ್ಲಿ ತಾನು ಕಾರ್ಕಳ, ಉಡುಪಿ, ಕುಂದಾಪುರ ಹಾಗೂ ಧಾರವಾಡದಲ್ಲಿ ಕೆಲವು ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡಿರುವುದಾಗಿ ಹೆಗ್ಗಡೆಯವರು ತಿಳಿಸಿದರು.
ಎಲ್ಲಾ ಕಡೆ ಉತ್ತಮ ಸ್ಪಂದನೆ ದೊರಕಿದೆ. ಕೊಂಚ ಜನ ಜಾಗೃತಿಯೂ ಮೂಡಿ ಬಂದಿದೆ ಎಂದರು. ಚರ್ಚ್ ಹಾಗೂ ಮಸೀದಿಗಳವರೂ ಈ ಬಗ್ಯೆ ಸಹಕಾರ ನೀಡುತ್ತಿದ್ದಾರೆ.
ಸರ್ಕಾರವೂ ಇದಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದುಮುಜರಾಯಿ ಸಚಿವರು ಶ್ರದ್ಧಾಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡುವ ಬಗ್ಯೆ ಸದ್ಯದಲ್ಲಿಯೇ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಆಯಾ ಊರಿನ ಜನರು ಶ್ರದ್ಧಾ ಕೇಂದ್ರಗಳ ಸ್ವಚ್ಛತೆಯನ್ನು ಶ್ರಮದಾನದ ಮೂಲಕ ಮಾಡಬೇಕು ಎಂದು ಅವರು ಸಲಹೆ ನೀಡಿದರು.ಎಂದು ಅವ ಕರಾವಳಿಯಲ್ಲಿ ಹಾಗೂ ಮಲೆನಾಡಿನಲ್ಲಿ ನೀರಿನ ಅಭಾವ ತೀವ್ರವಾಗುತ್ತಿದ್ದು ನೀರನ ಸದುಪಯೋಗಕ್ಕೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.







