ಲಿಬಿಯ ವಿಮಾನ ಅಪಹರಣಕ್ಕೆ ನಕಲಿ ಆಯುಧಗಳ ಬಳಕೆ

ವಲೆಟ್ಟ (ಮಾಲ್ಟ), ಡಿ. 24: ಶುಕ್ರವಾರ ಲಿಬಿಯದ ವಿಮಾನವೊಂದನ್ನು ಅಪಹರಿಸಿ ಮಾಲ್ಟಾಗೆ ತಿರುಗಿಸಲು ಇಬ್ಬರು ವ್ಯಕ್ತಿಗಳು ನಕಲಿ ಆಯುಧಗಳನ್ನು ಬಳಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
117 ಜನರನ್ನು ಹೊತ್ತು ದಕ್ಷಿಣ ಲಿಬಿಯದ ಸಭದಿಂದ ರಾಜಧಾನಿ ಟ್ರಿಪೋಲಿಗೆ ಹೊರಟಿದ್ದ ಆಫ್ರಿಕಿಯಾ ಏರ್‌ವೇಸ್‌ನ ಎ320 ಏರ್‌ಬಸ್ ವಿಮಾನವನ್ನು ಅಪಹರಣಕಾರರು ಮಾಲ್ಟಕ್ಕೆ ಬಲವಂತವಾಗಿ ಒಯ್ದಿದ್ದರು. ನಾಲ್ಕು ಗಂಟೆಗಳ ಬಿಕ್ಕಟ್ಟಿನ ಬಳಿಕ ಅಪಹರಣಕಾರರು ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿ ಪೊಲೀಸರಿಗೆ ಶರಣಾಗಿದ್ದರು.
ವಿಮಾನವನ್ನು ಅಪಹರಿಸಲು ಅಪಹರಣಕಾರರು ನಿಜವಾದ ಗ್ರೆನೇಡ್ ಮತ್ತು ಕನಿಷ್ಠ ಒಂದು ಪಿಸ್ತೂಲ್ ಬಳಸಿದ್ದಾರೆ ಎಂಬುದಾಗಿ ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ, ಇಬ್ಬರು ಅಪಹರಣಕಾರರು ಬಳಸಿದ್ದು ನಕಲಿ ಆಯುಧಗಳು ಎಂಬುದಾಗಿ ಬಳಿಕ ಬೆಳಕಿಗೆ ಬಂದಿದೆ ಎಂದು ಮಾಲ್ಟ ಸರಕಾರದ ಹೇಳಿಕೆಯೊಂದು ತಿಳಿಸಿದೆ.
‘‘ಅಪಹರಣಕ್ಕೆ ಸಂಬಂಧಿಸಿದ ಆರಂಭಿಕ ವಿಧಿವಿಜ್ಞಾನ ತನಿಖೆಗಳಲ್ಲಿ, ಅಪರಾಧಕ್ಕೆ ಬಳಸಿದ ಆಯುಧಗಳು ನೈಜ ಆಯುಧಗಳ ತದ್ರೂಪಿಗಳಾಗಿವೆ ಎನ್ನುವುದು ಬೆಳಕಿಗೆ ಬಂದಿದೆ’’ ಎಂದು ಹೇಳಿಕೆ ತಿಳಿಸಿದೆ.
ತಮಗೆ ಯುರೋಪ್‌ನಲ್ಲಿ ಆಶ್ರಯ ನೀಡಬೇಕು ಹಾಗೂ ಲಿಬಿಯದ ದಿವಂಗತ ಅಧ್ಯಕ್ಷ ಮುಅಮ್ಮರ್ ಗದ್ದಾಫಿಯ ಸ್ಮರಣಾರ್ಥ ನೂತನ ರಾಜಕೀಯ ಪಕ್ಷವೊಂದನ್ನು ರಚಿಸಬೇಕು ಎಂದು ಆಗ್ರಹಿಸಿ ಲಿಬಿಯದವರೇ ಆದ ವ್ಯಕ್ತಿಗಳು ವಿಮಾನವನ್ನು ಅಪಹರಿಸಿದ್ದರು.
ಮನೆಗೆ ಹೊರಟ ಪ್ರಯಾಣಿಕರು
ಲಿಬಿಯದಿಂದ ಅಪಹರಣಗೊಂಡು ಮೆಡಿಟರೇನಿಯನ್ ದ್ವೀಪ ಮಾಲ್ಟಕ್ಕೆ ಬಂದಿದ್ದ ವಿಮಾನದ ಪ್ರಯಾಣಿಕರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದಾರೆ.ಪ್ರಯಾಣಿಕರು ಶನಿವಾರ ಮುಂಜಾನೆ ಮಾಲ್ಟದಿಂದ ಹೊರಟರು ಎಂದು ಮಾಲ್ಟದ ಆಂತರಿಕ ಸಚಿವ ಕಾರ್ಮೆಲೊ ಅಬೆಲ ತಿಳಿಸಿದರು.







