ಪುತ್ತೂರು ವಿವೇಕಾನಂದ ಕ್ಯಾಂಪಸ್‌ನಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಸಿದ್ಧತೆ
ಮುನ್ನೂರಕ್ಕೂ ಅಧಿಕ ಕಂಪೆನಿಗಳ ಸಂಪರ್ಕ-ನೋಂದಾವಣೆ ಆರಂಭ
ಸುಳ್ಯ, ಡಿ.24 : ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘವು ಇದೇ ಪ್ರಥಮ ಬಾರಿಗೆ ನೆಹರು ನಗರದ ತನ್ನ ವಿಶಾಲ ಕ್ಯಾಂಪಸ್ ನಲ್ಲಿ ಜನವರಿ 13ರಂದು ಉದ್ಯೋಗ ಮೇಳವೊಂದನ್ನು ಆಯೋಜಿಸುತ್ತಿದೆ ಎಂದು ಸಂಘದ ನಿರ್ದೇಶಕ ನ.ಸೀತಾರಾಮ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಯುವ ಸಮೂಹ ಎದುರಿಸುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು ಲಕ್ಷ್ಯದಲ್ಲಿರಿಸಿ ಈ ಉದ್ಯೋಗ ಮೇಳವನ್ನು ರೂಪಿಸಲಾಗಿದೆ. ಉದ್ಯೋಗ ಮೇಳದಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ಕಂಪೆನಿಗಳನ್ನು ಸಂಪರ್ಕಿಸಲಾಗಿದೆ. ರಾಜ್ಯ ಹಾಗೂ ಹೊರರಾಜ್ಯದ ಅನೇಕ ಸಂಸ್ಥೆಗಳು ಈ ಉದ್ಯೋಗಮೇಳದಲ್ಲಿ ಭಾಗವಹಿಸಿ ಈ ಭಾಗದ ಯುವಕ ಯುವತಿಯರಿಗೆ ಉದ್ಯೋಗ ಕೊಡುವುದಕ್ಕೆ ಉತ್ಸಾಹ ತೋರಿವೆ. ಮಾಹಿತಿ ತಂತ್ರಜ್ಞಾನ, ರಿಯಲ್ ಎಸ್ಟೇಟ್, ಬ್ಯಾಂಕಿಂಗ್, ರಿಟೇಲ್ ಕ್ಷೇತ್ರದ ಉದ್ಯಮ, ಉತ್ಪಾದನ ಘಟಕಗಳೇ ಮೊದಲಾದ ಅನೇಕ ಉದ್ಯಮಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ ಎಂದರು.
ಪ್ರಾಥಮಿಕ, ಪ್ರೌಢಶಾಲಾ ಮಟ್ಟದಿಂದ ತೊಡಗಿ ಪಾರಂಪರಿಕ ಪದವಿಗಳಾದ ಬಿ.ಎ, ಬಿ.ಎಸ್ಸಿ, ಬಿ.ಕಾಂ ಮುಂತಾದ ಪದವೀಧರರು, ಐಟಿಐ, ಡಿಪ್ಲಮೋದಂತಹ ವಿಷಯ ವೃತ್ತಿ ಶಿಕ್ಷಣ ಪಡೆದವರು, ಇಂಜಿನಿಯರಿಂಗ್, ಎಂ.ಬಿ.ಎ ಮೊದಲಾದ ವೃತ್ತಿಪರ ಶಿಕ್ಷಣ ಹೊಂದಿದವರು, ಹೀಗೆ ಇನ್ನೂ ಹಲವಾರು ವಿಷಯಗಳಲ್ಲಿ ಪ್ರಶಿಕ್ಷಿತರೂ ಈ ಉದ್ಯೋಗಮೇಳದಲ್ಲಿ ಭಾಗವಹಿಸಬಹುದು. ರಾಜ್ಯದ ಯಾವುದೇ ಭಾಗದ ಉದ್ಯೋಗಾರ್ಥಿಗಳು ಈ ಮೇಳದಲ್ಲಿ ಭಾಗವಹಿಸಬಹುದು.
ಈಗಾಗಲೇ ಈ ಉದ್ಯೋಗ ಮೇಳದ ಹಿನ್ನಲೆಯಲ್ಲಿ ವೆಬ್‌ಸೈಟ್ ಒಂದನ್ನು ರೂಪಿಸಲಾಗಿದೆ. ಆ ವೆಬ್ ಸೈಟ್ನಲ್ಲಿರುವ ಅರ್ಜಿಯನ್ನು ತುಂಬಿ ಭಾಗವಹಿಸುವ ಉಮೇದುಗಾರಿಕೆಯನ್ನು ನೋಂದಾವಣೆ ಮಾಡಬೇಕು. ವೆಬ್ಸೈಟ್ ವಿಳಾಸ ಡಬ್ಲುಡಬ್ಲುಡಬ್ಲು. ವಿವೇಕ ಉದ್ಯೋಗ.ಕಾಂನಲ್ಲಿ ದಾಖಲೆ ಮಾಡಲು ಸಾಧ್ಯವಾಗದವರು ನೆಹರು ನಗರದ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ರೂಪಿಸಲಾಗಿರುವ ಉದ್ಯೋಗ ಮೇಳದ ಮಾಹಿತಿ ಕೇಂದ್ರಕ್ಕೆ ನೇರವಾಗಿ ಆಗಮಿಸಿ ಅಥವಾ 810565044 ಈ ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾವಣೆ ಮಾಡಿಕೊಳ್ಳಬಹುದು. ತಮ್ಮ ಹೆಸರನ್ನು ದಾಖಲೆ ಮಾಡಿಕೊಂಡವರಿಗೆ ಕೆಲವು ದಿನಗಳ ಅನಂತರ ಉದ್ಯೋಗ ಮೇಳಕ್ಕೆ ಆಗಮಿಸುವಾಗಿನ ಸಿದ್ಧತೆಯ ಬಗೆಗೆ ಸೂಕ್ತ ಮಾಹಿತಿ ನೀಡಲಾಗುತ್ತದೆ. ಈ ಮಾಹಿತಿ ಕೇಂದ್ರ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ ಎಂದು ಉದ್ಯೋಗ ಮೇಳ ಸಮಿತಿಯ ಮಾಧ್ಯಮ ಸಂಚಾಲಕ ಮುರಳಿಕೃಷ್ಣ ಚಳ್ಳಂಗಾರು ಹೇಳಿದರು.
ಈವರೆಗೆ ವಿಪ್ರೋ, ಇನ್ಫೋಸಿಸ್, ವೋಲ್ವೋ, ರಿಲಯನ್ಸ್, ಪ್ಲಿಪ್ ಕಾರ್ಟ್, ಅಂಬುಜಾ ಸಿಂಎಂಟ್, ಬಜಾಜ್ ಕ್ಯಾಪಿಟಲ್, ಐಟಿಸಿ, ಮೈ ಫೋರ್ಚೂನ್, ಬಿಗ್ ಬಜಾರ್ ಮೊದಲಾದ ಸುಮಾರು 150 ಕಂಪೆನಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವುದಕ್ಕೆ ತಮ್ಮ ಉತ್ಯುಕತೆ ತೋರಿಸಿದ್ದು, 5400 ವಿದ್ಯಾಥಿಗಳು ಈವೆರೆಗೆ ನೋಂದಾವಣೆ ಮಾಡಿಕೊಂಡಿದ್ದಾರೆ. ಯುವ ಸಮೂಹಕ್ಕೆ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡಬೇಕೆಂಬ ಆಶಯ ಒಂದೆಡೆಯಾದರೆ ಸ್ವಂತ ಉದ್ಯೋಗ-ಉದ್ದಿಮೆ ಗೆ ಯುವಶಕ್ತಿ ಮನಮಾಡುವಂತೆ ಪ್ರೇರಣೆ ನೀಡಬೇಕೆಂಬುದು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯವಾಗಿದ್ದು, ಈ ಹಿನ್ನೆಲೆಯಲ್ಲಿ ಉದ್ಯೋಗ ಮೇಳದ ದಿನದಂದು ಸ್ವ ಉದ್ಯೋಗದ ಬಗೆಗೆ ಮಾಹಿತಿ ಕಾರ್ಯಾಗಾರವೂ ನಡೆಯಲಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸುಮಾರು 8 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದವರು ಹೇಳಿದರು.
ಸಂಘದ ನಿರ್ದೆಶಕ ಸುಧಾಕರ ಕಾಮತ್ ಪತ್ರಿಕಾಗೋಷ್ಠಿಯಲ್ಲಿದ್ದರು.







