ಸೌದಿ ಅರೇಬಿಯ ಬಜೆಟ್‌ನಲ್ಲಿ ನೂತನ ‘ವಿದೇಶೀಯರ ತೆರಿಗೆ’

ಜಿದ್ದಾ, ಡಿ. 24: ಸೌದಿ ಅರೇಬಿಯವು 2017ರಿಂದ ‘ವಿದೇಶೀಯರ ತೆರಿಗೆ (ಲೆವಿ)’ಯನ್ನು ಜಾರಿಗೊಳಿಸಲು ಯೋಜನೆ ರೂಪಿಸಿದೆ. ವಿದೇಶಗಳಿಂದ ಬರುವ ಕೆಲಸಗಾರರಿಗೆ ತಲಾ 800 ಸೌದಿ ರಿಯಾಲ್ (ಸುಮಾರು 14,500 ರೂಪಾಯಿ)ವರೆಗಿನ ತೆರಿಗೆಯನ್ನು ವಿಧಿಸಲಾಗುವುದು. ಸೌದಿ ಅರೇಬಿಯ ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ಈ ವಿಷಯವನ್ನು ಖಚಿತಪಡಿಸಲಾಗಿದೆ.
ಪ್ರಸಕ್ತ ಕಂಪೆನಿಗಳು ಪ್ರತಿ ವಿದೇಶಿ ನೌಕರನಿಗೆ ತಿಂಗಳಿಗೆ ತಲಾ 200 ಸೌದಿ ರಿಯಾಲ್‌ನಂತೆ ಲೆವಿ ಪಾವತಿಸುತ್ತಿವೆ. ಆದರೆ, ಇದು ಕಂಪೆನಿಯಲ್ಲಿ ಕೆಲಸ ಮಾಡುವ ಸೌದಿ ಕೆಲಸಗಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ವಿದೇಶಿ ಉದ್ಯೋಗಿಗಳಿಗೆ ಮಾತ್ರ ಅನ್ವಯಿಸುತ್ತದೆ.
ಮುಂದಿನ ವರ್ಷದಿಂದ ಇದನ್ನು ಹಂತ ಹಂತವಾಗಿ ಏರಿಸಲಾಗುವುದು ಎಂಬುದಾಗಿ ಸರಕಾರದ ‘ಫಿಸ್ಕಲ್ ಬ್ಯಾಲನ್ಸ್ ಪ್ರೋಗ್ರಾಮ್-ಬ್ಯಾಲನ್ಸ್‌ಡ್ ಬಜೆಟ್ 2020’ ದಾಖಲೆ ತೋರಿಸುತ್ತದೆ.
ಮುಂದಿನ ವರ್ಷದಿಂದ ವಿದೇಶ ಉದ್ಯೋಗಿಗಳ ಮೇಲೆ ವಿಧಿಸುವ ತೆರಿಗೆಯನ್ನು ಹಂತ ಹಂತವಾಗಿ ಹೆಚ್ಚಿಸಲಾಗುವುದು. ಇದು ಹೆಚ್ಚಿನ ಸಂಖ್ಯೆಯಲ್ಲಿ ಸೌದಿ ಕೆಲಸಗಾರರನ್ನು ನೇಮಿಸಿಕೊಳ್ಳಲು ಉದ್ಯೋಗದಾತರ ಮೇಲೆ ಒತ್ತಡವನ್ನು ಸೃಷ್ಟಿಸುವುದು ಎದು ನಿರೀಕ್ಷಿಸಲಾಗಿದೆ.
ವಿದೇಶಿ ಉದ್ಯೋಗಿಗಳ ಸಂಖ್ಯೆಯು ಸೌದಿ ಅಥವಾ ಜಿಸಿಸಿ ದೇಶಗಳ ಉದ್ಯೋಗಿಗಳ ಸಂಖ್ಯೆಯನ್ನು ಮೀರದ ಕಂಪೆನಿಗಳಿಗೆ ಇನ್ನು ಮುಂದೆ ‘ವಿದೇಶೀಯರ ಲೆವಿ’ ಮನ್ನಾ ಇರುವುದಿಲ್ಲ. ಆದರೆ, ಅಂಥ ಕಂಪೆನಿಗಳಿಗೆ ರಿಯಾಯಿತಿ ದರದಲ್ಲಿ ಲೆವಿ ವಿಧಿಸಲಾಗುವುದು.
ಪ್ರಸಕ್ತ ಸೌದಿ ರಾಷ್ಟ್ರೀಯರಾಗಲಿ ವಿದೇಶಿ ಕಾರ್ಮಿಕರಾಗಲಿ ಆದಾಯ ತೆರಿಗೆ ಪಾವತಿಸುತ್ತಿಲ್ಲ. ಇದೇ ನೀತಿ ಮುಂದುವರಿಯಲಿದೆ ಎಂದು ಸರಕಾರ ಹೇಳಿದೆ.
ಅದೇ ವೇಳೆ, ವಿದೇಶಿ ಉದ್ಯೋಗಿಗಳ ಪ್ರತಿಯೊಬ್ಬ ಅವಲಂಬಿತರ ಮೇಲೆ ಜುಲೈ ತಿಂಗಳಿನಿಂದ ತಿಂಗಳಿಗೆ 200 ಸೌದಿ ರಿಯಾಲ್ ಲೆವಿ ವಿಧಿಸಲಾಗುತ್ತದೆ.







