ಶಿವಮೊಗ್ಗದಲ್ಲಿ ಮುಂದುವರಿದ ಮರಳಿನ ಹಾಹಾಕಾರ!
ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಬಡ, ಮಧ್ಯಮ ವರ್ಗದವರ ಪಾಡು ಅಯೋಮಯ

ಕಾಳಸಂತೆಯಲ್ಲಿ ಲಭ್ಯವಾಗುತ್ತಿದೆ ಮರಳು
ಬಿ. ರೇಣುಕೇಶ್
ಶಿವಮೊಗ್ಗ, ಡಿ. 24: ‘ದೀಪದ ಬುಡದಲ್ಲಿ ಕತ್ತಲು...’ ಎಂಬ ಮಾತಿನಂತೆ ರಾಜ್ಯದಲ್ಲಿ ಅತೀ ಹೆಚ್ಚು ಮರಳು ಲಭ್ಯವಾಗುವ ಜಿಲ್ಲೆಗಳಲ್ಲೊಂದಾದ ಶಿವಮೊಗ್ಗದಲ್ಲಿ ಮರಳಿನ ತೀವ್ರ ಅಭಾವ ತಲೆದೋರಿದೆ. ಇದರಿಂದ ಮನೆ, ಇತರ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಬಡ - ಮಧ್ಯಮ ವರ್ಗದವರ ಪಾಡು ಹೇಳತೀರದಾಗಿದೆ. ಕೆಲವರು ಅರ್ಧಕ್ಕೆ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತಾಗಿದೆ. ಡಿಸೆಂಬರ್ ತಿಂಗಳು ಅಂತ್ಯಗೊಂಡು ಹೊಸ ವರ್ಷದ ಆಗಮನಕ್ಕೆ ದಿನಗಣನೆ ಆರಂಭವಾಗಿದೆ.
ಆದಾಗ್ಯೂ ಜಿಲ್ಲಾಡಳಿತದಿಂದ ಮರಳು ವಿತರಣೆ ಪ್ರಕ್ರಿಯೆ ಆರಂಭವಾಗಿಲ್ಲ. ಸದ್ಯದ ಸ್ಥಿತಿಗತಿ ಗಮನಿಸಿದರೆ ಸಾರ್ವಜನಿಕರಿಂದ ಜಿಲ್ಲಾಡಳಿತದಿಂದ ಮರಳು ಲಭ್ಯವಾಗುವ ಸಾಧ್ಯತೆಯೂ ಇಲ್ಲವಾಗಿದೆ. ಮತ್ತೊಂದೆಡೆ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕೆಲ ಬಡ, ಮಧ್ಯಮ ವರ್ಗದವರು ಜಿಲ್ಲಾಡಳಿತದಿಂದ ವಿತರಣೆ ಯಾಗುವ ಮರಳು ಪಡೆಯಲು ಚಾತಕ ಪಕ್ಷಿಗಳಂತೆ ಕಾದು ಕುಳಿತ್ತಿದ್ದಾರೆ. ದುಬಾರಿ ಬೆಲೆ: ಒಂದೆಡೆ ಜಿಲ್ಲಾಡಳಿತ ಇಲ್ಲಿಯವರೆಗೂ ಮರಳು ವಿತರಣೆ ಪ್ರಕ್ರಿಯೆ ಆರಂಭಿಸಿಲ್ಲ. ಆದರೆ ಇನ್ನೊಂದೆಡೆ ಜಿಲ್ಲೆಯ ವಿವಿಧೆಡೆ ನದಿ ಪಾತ್ರಗಳಿಂದ ಯದ್ವತದ್ವಾ ಪ್ರಮಾಣದಲ್ಲಿ ಮರಳು ಲೂಟಿಯಾಗುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ.
ಕೆಲ ದಂಧೆಕೋರರು ರಾತ್ರಿ-ಹಗಲುಗಳ ಪರಿವೆಯೇ ಇಲ್ಲದೆ ನದಿ ಪಾತ್ರಗಳಿಂದ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ 6 ರಿಂದ 8 ಗಜದ ಲೋಡ್ ಮರಳಿಗೆ 35 ರಿಂದ 45 ಸಾವಿರಕ್ಕೆ ಕಾಳಸಂತೆಕೋರರು ಮಾರಾಟ ಮಾಡುತ್ತಿದ್ದಾರೆ. ಕಟ್ಟಡ ನಿರ್ಮಾಣ ಮಾಡುತ್ತಿರುವವರು ಇದೇ ಮೊತ್ತ ಪಾವತಿಸಿ ಮರಳು ಖರೀದಿಸುತ್ತಿದ್ದಾರೆ. ಇಷ್ಟೊಂದು ಮೊತ್ತ ಪಾವತಿಸಿ ಮರಳು ಖರೀದಿಸಲಾಗದವರು ಎಂ ಸ್ಯಾಂಡ್ ಮತ್ತಿತರ ಪರ್ಯಾಯ ಮಾರ್ಗಗಳತ್ತ ಗಮನಹರಿಸುತ್ತಿದ್ದಾರೆ.
ಇನ್ನೂ ಕೆಲವರು ಜಿಲ್ಲಾಡಳಿತ ವಿತರಣೆ ಮಾಡುವ ಮರಳಿಗಾಗಿ ಕಾದು ಕುಳಿತಿದ್ದಾರೆ. ‘ಮಳೆಗಾಲದ ಅವಧಿ ಪೂರ್ಣಗೊಂಡ ನಂತರ ಮರಳು ವಿತರಣೆ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಮಳೆಗಾಲ ಮುಗಿದು ಚಳಿಗಾಲದ ಅವಧಿ ಪೂರ್ಣಗೊಳ್ಳುವ ಹಂತದಲ್ಲಿದೆ. ಆದಾಗ್ಯೂ ಇಲ್ಲಿಯವರೆಗೂ ಜಿಲ್ಲಾಡಳಿತದಿಂದ ಮರಳು ವಿತರಣೆ ಕಾರ್ಯ ಆರಂಭವಾಗಿಲ್ಲ. ಇನ್ನೊಂದೆಡೆ ಎಂ ಸ್ಯಾಂಡ್‌ನ ಬೆಲೆ ಕೂಡ ದುಬಾರಿಯಾಗಿದೆ. ಕಾಳಸಂತೆಯಲ್ಲಿ ದುಬಾರಿ ದರ ತೆತ್ತು ಮರಳು ಖರೀದಿಸಲು ನಮ್ಮಂತಹವರ ಕೈಯಲ್ಲಿ ಸಾಧ್ಯವಿಲ್ಲದ ಮಾತಾಗಿದೆ. ಇದರಿಂದ ಮನೆ ನಿರ್ಮಾಣ ಮಾಡುವುದೇ ಕಷ್ಟಕರವಾಗಿ ಪರಿಣಮಿಸಿದೆೞಎಂದು ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಮನೆ ನಿರ್ಮಾಣದಲ್ಲಿ ತೊಡಗಿರುವ ವ್ಯಕ್ತಿಯೋರ್ವರು ತಿಳಿಸುತ್ತಾರೆ.
‘ಕಾಳಸಂತೆಯಲ್ಲಿ ಬೇಕಾದಷ್ಟು ಮರಳು ಸಿಗುತ್ತಿದೆ. ನಿಯಮಾನುಸಾರ ಮರಳು ಸಿಗುತ್ತಿಲ್ಲವೆಂದರೆ ಏನರ್ಥ? ಇದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ. ಜಿಲ್ಲಾಡಳಿತದಿಂದ ರಿಯಾಯಿತಿ ದರದಲ್ಲಿ ಮರಳು ಲಭ್ಯವಾಗುವುದರಿಂದ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಬಡ, ಮಧ್ಯಮ ವರ್ಗದವರು ಮರಳಿಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಮರಳು ವಿತರಣೆಯಲ್ಲಿ ಸಾಕಷ್ಟು ವಿಳಂಬವಾಗಿದ್ದು, ಇನ್ನಾದರೂ ಜಿಲ್ಲಾಡಳಿತ ನಾಗರಿಕರಿಗೆ ಕಾಲಮಿತಿಯಲ್ಲಿ ಮರಳು ವಿತರಣೆಗೆ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ’ ಎಂದು ನಾಗರಿಕರೊಬ್ಬರು ಆಗ್ರಹಿಸುತ್ತಾರೆ.
ಕ್ರಮಕೈಗೊಳ್ಳಲಿ: ಈ ಹಿಂದಿನ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್‌ರವರು, ಬಡ-ಮಧ್ಯಮ ವರ್ಗದವರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, ಮನೆ ನಿರ್ಮಾಣ ಮಾಡುವವರಿಗೆ ವರ್ಷದ ಎಲ್ಲ ದಿನಗಳಂದು ಸುಲಲಿತವಾಗಿ ಮರಳು ಲಭ್ಯವಾಗುವ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದ್ದರು. ಶಿವಮೊಗ್ಗ ನಗರದಲ್ಲಿಯೇ ಸ್ಟಾಕ್‌ಯಾರ್ಡ್ ನಿರ್ಮಿಸಿ, ಅಗತ್ಯವಿರುವವರು ಇಲ್ಲಿಯೇ ಮರಳು ಪಡೆಯುವ ವ್ಯವಸ್ಥೆಗೆ ಯೋಜನೆ ರೂಪಿಸಿದ್ದರು. ಆದರೆ ಅವರು ಇಲ್ಲಿಂದ ವರ್ಗಾವಣೆಗೊಂಡ ನಂತರ ಈ ಯೋಜನೆ ನನೆಗುದಿಗೆ ಬಿದ್ದಿತ್ತು.
‘ಡಿ.ಸಿ. ವಿಪುಲ್ ಬನ್ಸಲ್ ನಂತರ ಹದಗೆಟ್ಟ ವ್ಯವಸ್ಥೆ...’
ಈ ಹಿಂದಿನ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್‌ರವರು, ಬಡ-ಮಧ್ಯಮ ವರ್ಗದವರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, ಮನೆ ನಿರ್ಮಾಣ ಮಾಡುವವರಿಗೆ ವರ್ಷದ ಎಲ್ಲ ದಿನಗಳಂದು ಸುಲಲಿತವಾಗಿ ಮರಳು ಲಭ್ಯವಾಗುವ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದ್ದರು. ಶಿವಮೊಗ್ಗ ನಗರದಲ್ಲಿಯೇ ಸ್ಟಾಕ್‌ಯಾರ್ಡ್ ನಿರ್ಮಿಸಿ, ಅಗತ್ಯವಿರುವವರು ಇಲ್ಲಿಯೇ ಮರಳು ಪಡೆಯುವ ವ್ಯವಸ್ಥೆಗೆ ಯೋಜನೆ ರೂಪಿಸಿದ್ದರು. ಹಾಗೆಯೇ ಕಾನೂನುಬಾಹಿರವಾಗಿ ಮರಳು ಮಾರಾಟ ಮಾಡುತ್ತಿದ್ದವರ ವಿರುದ್ಧವೂ ಕಠಿಣ ಕ್ರಮ ಜರಗಿಸಿದ್ದರು. ಅಕ್ರಮ ಮರಳು ದಂಧೆಗೆ ಅವಕಾಶ ಕಲ್ಪಿಸುತ್ತಿದ್ದ ಅಧಿಕಾರಿ, ಸಿಬ್ಬಂದಿಯ ನಿದ್ದೆಗೆಡಿಸಿದ್ದರು. ಆದರೆ ಅವರು ಇಲ್ಲಿಂದ ವರ್ಗಾವಣೆಗೊಂಡ ನಂತರ ಮರಳು ವಿತರಣೆ ವ್ಯವಸ್ಥೆ ಅಕ್ಷರಶಃ ಅಸ್ತವ್ಯಸ್ತವಾಗಿದೆ.
ನೂತನ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಅವರು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಬಡ - ಮಧ್ಯಮ ವರ್ಗದ ನಾಗರಿಕರಿಗೆ ಸುಲಭವಾಗಿ ಮರಳ ಲಭ್ಯವಾಗುವ ವ್ಯವಸ್ಥೆ ಜಾರಿಗೊಳಿಸಬೇಕು. ಕಾಳಸಂತೆಕೋರರ ವಿರುದ್ಧ್ದ ನಿರ್ದಾಕ್ಷಿಣ್ಯ ಕ್ರಮ ಜರಗಿಸಬೇಕು. ಹಾಗೆಯೇ ಮರಳು ವಿತರಣೆಯಲ್ಲಿ ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಕಾನೂನುಬಾಹಿರ ಮಾರ್ಗಗಳಿಗೆ ಬ್ರೇಕ್ ಹಾಕಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸುತ್ತಾರೆ







